Site icon Vistara News

Shobha Karandlaje: ತಮಿಳಿಗರಿಗೆ ಅವಮಾನ- ಕ್ಷಮೆಯಾಚಿಸಿದರೆ ಕೇಸ್‌ ರದ್ದು; ಹೈಕೋರ್ಟ್‌ನಲ್ಲಿ ಎಜಿ ಮಾಹಿತಿ

Shobha Karandlaje

ನವದೆಹಲಿ: ಕೆಲವು ತಿಂಗಳ ಹಿಂದೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಬ್ಲಾಸ್ಟ್‌(Rameshwaram Cafe Blast) ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿ ಕಾನೂನು ಸಂಕಷ್ಟ ಎದುರಿಸುತ್ತಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ(Shobha Karandlaje) ಕ್ಷಮೆಯಾಚಿಸಿದರೆ ಅವರ ವಿರುದ್ಧದ ಪ್ರಕರಣ ರದ್ದುಗೊಳಿಸಲಾಗುತ್ತದೆ ಎಂಂದು ಅಡ್ವೊಕೇಟ್‌ ಜನರಲ್‌ ಮದ್ರಾಸ್‌ ಹೈಕೋರ್ಟ್‌(Madras Highcourt)ಗೆ ತಿಳಿಸಿದ್ದಾರೆ.

ಕೆಫೆ ಬ್ಲಾಸ್ಟ್‌ ಪ್ರಕರಣಕ್ಕೂ ತಮಿಳುನಾಡಿಗೂ ಸಂಬಂಧ ಕಲ್ಪಿಸಿ ಹೇಳಿಕೆ ನೀಡಿದ್ದ ಕರಂದ್ಲಾಜೆ ವಿರುದ್ಧ ತಮಿಳುನಾಡಿನಲ್ಲಿ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಇಂದು ಮದ್ರಾಸ್‌ ಹೈಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ನಡೆಯಿತು. ಈ ವೇಳೆ ತಮಿಳುನಾಡು ಅಡ್ವೊಕೇಟ್ ಜನರಲ್ ಪಿ.ಎಸ್. ರಾಮನ್ ಅವರು, ಸಚಿವೆ ಶೋಭಾ ಕರಂದ್ಲಾಜೆ ತಮ್ಮ ಹೇಳಿಕೆ ಕುರಿತು ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ಕೊಟ್ಟು ಕ್ಷಮೆಯಾಚಿಸಿದರೆ ಪ್ರಕರಣ ರದ್ದುಗೊಳಿಸಬಹುದು ಎಂದು ಹೈಕೋರ್ಟ್‌ಗೆ ತಿಳಿಸಿದರು.

ಒಂದು ವೇಳೆ ತಮ್ಮ ಹೇಳಿಕೆ ಕುರಿತು ಕ್ಷಮಾಪಣೆ ಕೇಳದಿದ್ದರೆ ಅವರ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸುವ ಕುರಿತು ನ್ಯಾಯಪೀಠವನ್ನು ಕೇಳಿದರು. ಅಲ್ಲದೇ ನಮಗೆ ಉನ್ನತ ಮಟ್ಟದಿಂದ ಅನುಮತಿ ದೊರೆತಿದ್ದು, ಒಂದು ವೇಳೆ ಸಚಿವರು ಪತ್ರಿಕಾಗೋಷ್ಠಿಯನ್ನು ಕರೆದು ಕ್ಷಮೆಯಾಚಿಸಿದರೆ ಪ್ರಕರಣವನ್ನು ಕೈಬಿಡಬಹುದಾಗಿದೆ. ಈ ಸಂಬಂಧ ಅಡ್ವೊಕೇಟ್ ಜನರಲ್ ತಾವು ಕರಡು ಕ್ಷಮಾಪಣೆ ಸಿದ್ಧಪಡಿಸಿರುವುದಾಗಿ ಕೋರ್ಟ್‌ ಗೆ ತಿಳಿಸಿದರು.

ಏನಿದು ಪ್ರಕರಣ?

ನಗರದ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟಕ್ಕೂ ತಮಿಳುನಾಡಿಗೂ ಸಂಬಂಧ ಕಲ್ಪಿಸಿದ್ದೇ ಅವರು ವಿವಾದಕ್ಕೆ ಸಿಲುಕಲು ಕಾರಣ. ಬೆಂಗಳೂರಿನ ನಗರ್ತ ಪೇಟೆಯಲ್ಲಿ ಮೊಬೈಲ್‌ ಅಂಗಡಿ ಇಟ್ಟುಕೊಂಡಿದ್ದ ಮುಕೇಶ್‌ ಅವರು ಹನುಮಾನ್‌ ಚಾಲೀಸಾ ಹಾಕಿದ್ದನ್ನು ಪ್ರಶ್ನಿಸಿ ಮುಸ್ಲಿಂ ಯುವಕರೇ ಹೆಚ್ಚಾಗಿರುವ ತಂಡವೊಂದು ಆವರ ಮೇಲೆ ಹಲ್ಲೆ ಮಾಡಿತ್ತು. ಇದರ ವಿರುದ್ಧ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಂಗಳವಾರ ಶೋಭಾ ಕರಂದ್ಲಾಜೆ ಭಾಗಿಯಾಗಿದ್ದರು.

ಪ್ರತಿಭಟನೆಯಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ ಅವರು ʻʻನಮ್ಮ ಬೆಂಗಳೂರಿನ ಕೆಫೆಗೆ ತಮಿಳುನಾಡಿನ ಯಾರು ಯಾರೋ ಬಂದು ಬಾಂಬ್ ಹಾಕುತ್ತಾರೆ ಎಂಬ ಹೇಳಿಕೆ ನೀಡಿದ್ದರು. ʻʻಒಬ್ಬ ವ್ಯಕ್ತಿ ತಮಿಳುನಾಡಿನಿಂದ ಬಂದು ಕೆಫೆಯಲ್ಲಿ ಬಾಂಬ್ ಇಟ್ಟಿದ್ದಾನೆ. ಮತ್ತೊಬ್ಬ ದೆಹಲಿಯಿಂದ ಬಂದು ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗುತ್ತಾನೆ. ಇನ್ನೊಬ್ಬ ಕೇರಳದಿಂದ ಬಂದು ವಿದ್ಯಾರ್ಥಿನಿಯರ ಮೇಲೆ ಆಸಿಡ್ ಎರಚುತ್ತಾನೆ. ಯಾರಿಗೂ ಕರ್ನಾಟಕದ ಬಗ್ಗೆ ಸಣ್ಣ ಭಯವೂ ಇಲ್ಲʼʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಇಟ್ಟಿದ್ದ ತಮಿಳಿಗ ಎಂಬರ್ಥದಲ್ಲಿ ಶೋಭಾ ಕರಂದ್ಲಾಜೆ ಅವರು ಹೇಳಿಕೆ ನೀಡಿದ್ದು ತಮಿಳುನಾಡಿನವರನ್ನು ಕೆರಳಿಸಿತ್ತು. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಸೇರಿ ಹಲವು ಇದಕ್ಕೆ ಪ್ರತಿಕ್ರಿಯೆ ನೀಡಿದರು. ಸಾಮಾಜಿಕ ಜಾಲತಾಣಗಳಲ್ಲೂ ತೀವ್ರ ವಿರೋಧ ವ್ಯಕ್ತವಾಗಿತ್ತು.

ಭಾಷಿಗರ ನಡುವೆ ದ್ವೇಷ ಹಚ್ಚುವ ರೀತಿಯಲ್ಲಿ ಭಾಷಣ ಮಾಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಂ.ಕೆ. ಸ್ಟಾಲಿನ್ ಅವರು ಚುನಾವಣಾ ಆಯೋಗವನ್ನೂ ಆಗ್ರಹಿಸಿದ್ದರು. ಇದನ್ನೂ ಮೀರಿ ಕೆಲವರು ಶೋಭಾ ಕರಂದ್ಲಾಜೆಯ ಹೇಳಿಕೆಗೆ ಪ್ರಧಾನಿ ಮೋದಿ ಅವರೇ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.

ಇದನ್ನೂ ಓದಿ: Parliament Session 2024: ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದ ಎಚ್‌ಡಿಕೆ, ಶೋಭಾ ಕರಂದ್ಲಾಜೆ; Video ಇಲ್ಲಿದೆ

Exit mobile version