Site icon Vistara News

Shocking Video: ಸಹೋದರನ ಮೇಲೆ ಎಂಟು ಬಾರಿ ಟ್ರ್ಯಾಕ್ಟರ್‌ ಹತ್ತಿಸಿ ಕೊಂದ!

rajasthana

rajasthana

ಜೈಪುರ: ಹಣ, ಆಸ್ತಿ ಎನ್ನುವ ವಿಚಾರ ಬಂದಾಗ ಮಾನವೀಯತೆ ಮರೆಯಾಗುತ್ತದೆ, ಜನ ರಕ್ತ ಸಂಬಂಧವನ್ನೇ ಮರೆಯುತ್ತಾರೆ ಎನ್ನುವುದಕ್ಕೆ ಉತ್ತಮ ಉದಾಹರಣೆ ಈ ಘಟನೆ. ರಾಜಸ್ಥಾನದ ಭರತ್‌ಪುರದಲ್ಲಿ ಭೂ ವಿವಾದಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬ ತನ್ನ ಸಹೋದರನ ಮೇಲೆ ಎಂಟು ಬಾರಿ ಟ್ರ್ಯಾಕ್ಟರ್‌ ಓಡಿಸಿ ಕೊಲೆ ಮಾಡಿದ್ದಾನೆ. ಈ ಘಟನೆಯ ಶಾಕಿಂಗ್‌ ವಿಡಿಯೊ (Shocking Video) ಇದೀಗ ವೈರಲ್‌ ಆಗಿದೆ.

ಏನಿದು ಘಟನೆ?

ತನ್ನ ಸಹೋದರ ನಿರ್ಪತ್‌ನನ್ನು ಬರ್ಬರವಾಗಿ ಹತ್ಯೆ ಮಾಡಿದ ಆರೋಪದ ಮೇಲೆ ದಾಮೋದರ್‌ನನ್ನು ಬಂಧಿಸಲಾಗಿದೆ. ಭರತ್‌ಪುರದಲ್ಲಿ ತುಂಡು ಭೂಮಿಗೆ ಸಂಬಂಧಿಸಿದಂತೆ ಬಹದ್ದೂರ್ ಸಿಂಗ್ ಮತ್ತು ಅಟಾರ್ ಸಿಂಗ್ ಎಂಬ ಎರಡು ಕುಟುಂಬಗಳ ನಡುವಿನ ವಿವಾದವು ಜಗಳವಾಗಿ ಬದಲಾದ ನಂತರ ಈ ಘಟನೆ ನಡೆದಿದೆ. ಮೊದಲಿಗೆ ಎರಡೂ ಕುಟುಂಬಗಳು ಕಲ್ಲುಗಳು ಮತ್ತು ಕೋಲುಗಳಿಂದ ಪರಸ್ಪರ ಹೊಡೆದಾಡಲು ಪ್ರಾರಂಭಿಸಿದವು. ಘರ್ಷಣೆಯ ನಡುವೆ ಅಟಾರ್ ಸಿಂಗ್ ಅವರ ಮಗ ನಿರ್ಪತ್ ನೆಲದ ಮೇಲೆ ಬಿದ್ದರು. ಆಗ ಅವರ ಸಹೋದರ ದಾಮೋದರ್ ಟ್ರ್ಯಾಕ್ಟರ್ ಅನ್ನು ನಿರ್ಪತ್ ಮೇಲೆ ಹತ್ತಿಸಿ ಸಾಯುವವರೆಗೆ ಚಲಾಯಿಸಿದ್ದಾನೆ ಎನ್ನಲಾಗಿದೆ. ಘರ್ಷಣೆಯಲ್ಲಿ ಸುಮಾರು ಹತ್ತು ಮಂದಿ ಗಾಯಗೊಂಡಿದ್ದಾರೆ.

ಎಎಸ್ಪಿ ಹೇಳಿದ್ದೇನು?

ಘಟನೆ ಬಗ್ಗೆ ಭರತ್‌ಪುರ ಜಿಲ್ಲೆಯ ಎಎಸ್ಪಿ ಬಯಾನಾ ಮಾತನಾಡಿ, “ಅಡ್ಡಾ ಗ್ರಾಮದಲ್ಲಿ ಗುರ್ಜಾರ್ ಸಮುದಾಯಕ್ಕೆ ಸೇರಿದ ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತು. ಕೂಡಲೆ ಪೊಲೀಸರು ಸ್ಥಳಕ್ಕೆ ತೆರಳಿದರು. ಅದಾಗಲೇ ವ್ಯಕ್ತಿಯೊಬ್ಬರು ಚಲಿಸುತ್ತಿದ್ದ ಟ್ರ್ಯಾಕ್ಟರ್ ಅಡಿಗೆ ಬಿದ್ದು ಮೃತಪಟ್ಟಿರುವುದು ತಿಳಿದು ಬಂತು. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆʼʼ ಎಂದು ತಿಳಿಸಿದ್ದಾರೆ. ಕೊಲೆ ಪ್ರಕರಣದ ಸಂಬಂಧ ಐವರನ್ನು ವಶಕ್ಕೆ ಪಡೆಯಲಾಗಿದೆ. ಡಿಜಿಪಿ ಮಿಶ್ರಾ ಶೀಘ್ರ ತನಿಖೆ ನಡೆಸುವಂತೆ ಮತ್ತು ಕೊಲೆ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಪೊಲೀಸ್ ವರಿಷ್ಠಾಧಿಕಾರಿ ಮೃದುಲ್ ಕಛಾವಾ ಅವರಿಗೆ ನಿರ್ದೇಶನ ನೀಡಿದ್ದಾರೆ.

ಬಿಜೆಪಿಯಂದ ವಾಗ್ದಾಳಿ

ಘಟನೆಯ ಬಗ್ಗೆ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ರಾಜಸ್ತಾನದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿರುವ ಬಗ್ಗೆ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕೆಂಡ ಕಾರಿದ್ದಾರೆ. ಭರತ್‌ಪುರಕ್ಕೆ ಆಗಮಿಸುವಂತೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಸವಾಲು ಹಾಕಿದ್ದಾರೆ.

ʼʼಭರತ್‌ಪುರದಲ್ಲಿ ನಡೆದ ವಿಡಿಯೊ ವೈರಲ್‌ ಆಗಿದೆ. ಟ್ರ್ಯಾಕ್ಟರ್‌ ಹತ್ತಿಸಿ ನಿರ್ಪತ್‌ನನ್ನು ಕೊಲೆ ಮಾಡಲಾಗಿದೆ. ಇದು ಕೇವಲ ಒಬ್ಬ ವ್ಯಕ್ತಿಯ ಕೊಲೆಯಲ್ಲ, ಇಡೀ ರಾಜಸ್ತಾನದ ಕೊಲೆ. ಕಾಂಗ್ರೆಸ್‌ ಆಡಳಿತ ನಡೆಸುವ ರಾಜ್ಯಗಳ ಸ್ಥಿತಿಯನ್ನು ಇದು ಎತ್ತಿ ತೋರಿಸುತ್ತದೆ. ಇಂದು ಪ್ರಿಯಾಂಕಾ ವಾದ್ರಾ ರಾಜಸ್ತಾನಕ್ಕೆ ತಲುಪುತ್ತಾರೆ. ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಮಾತನಾಡುವ ಮುನ್ನ ಘಟನೆ ನಡೆದ ಗ್ರಾಮಕ್ಕೆ ಅವರು ಭೇಟಿ ನೀಡಬೇಕು. ಅವರು ಅಲ್ಲಿಗೆ ಹೋಗಿ ಪೊಲೀಸ್ ಅಧಿಕಾರಿಗಳು, ಡಿಎಂ, ಎಸ್ಪಿಯನ್ನು ಅಮಾನತುಗೊಳಿಸಬೇಕು ಮತ್ತು ತಮ್ಮ ನಿಲುವು ಭಾಷಣಗಳಿಗೆ ಸೀಮಿತವಲ್ಲ ಎನ್ನುವುದನ್ನು ಸಾಬೀತು ಪಡಿಸಬೇಕು. ಇದು ಅವರಿಗೆ ನಾನು ಒಡ್ಡುವ ಸವಾಲುʼʼ ಎಂದು ಸಂಬಿತ್ ಪಾತ್ರಾ ಹೇಳಿದ್ದಾರೆ.

ಇದನ್ನೂ ಓದಿ: ಶಿವನ ದರ್ಶನಕ್ಕೆ ಹೋದವರು ಮಸಣಕ್ಕೆ; ನದಿಗೆ ಟ್ಯಾಕ್ಸಿ ಬಿದ್ದು ಕರ್ನಾಟಕದ ಇಬ್ಬರು ಸೇರಿ 6 ಸಾವು

ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಈ ಘಟನೆಯನ್ನು ʼಹೃದಯ ವಿದ್ರಾವಕʼ ಎಂದು ಕರೆದಿದ್ದಾರೆ ಮತ್ತು “ಗೆಹ್ಲೋಟ್ ಸರ್ಕಾರದ ಅವಧಿಯಲ್ಲಿ ಉದ್ಭವಿಸಿದ ಕ್ರಿಮಿನಲ್-ಅರಾಜಕತಾತೆಯ ಮನಸ್ಥಿತಿ” ಎಂದು ದೂರಿದ್ದಾರೆ.

ಮಾನವೀಯತೆಗೆ ಕಳಂಕ

ರಾಜಸ್ಥಾನದ ವಿರೋಧ ಪಕ್ಷದ ನಾಯಕ, ಬಿಜೆಪಿ ಮುಖಂಡ ರಾಜೇಂದ್ರ ರಾಥೋಡ್‌ ಭರತ್‌ಪುರದ ಘಟನೆ ಮಾನವೀಯತೆಗೆ ಕಳಂಕ ಎಂದಿದ್ದಾರೆ. “ಅಪರಾಧಿಗಳು ಎಷ್ಟು ನಿರ್ಭೀತರಾಗಿದ್ದಾರೆಂದರೆ ಅವರು ಅಪರಾಧದ ವಿಡಿಯೊವನ್ನು ಬಿಡುಗಡೆ ಮಾಡುತ್ತಾರೆ. ವ್ಯವಸ್ಥೆ ಮತ್ತು ಡಿಜಿಪಿ ತಮ್ಮ ಕೆಲಸವನ್ನು ಸರಿಯಾಗಿ ಮಾಡಲು ಸಾಧ್ಯವಾಗುತ್ತಿಲ್ಲ ಮತ್ತು ಅದಕ್ಕಾಗಿಯೇ ಅಪರಾಧಿಗಳು ನಿರ್ಭೀತರಾಗಿದ್ದಾರೆ. ಪ್ರಿಯಾಂಕಾ ಗಾಂಧಿ ‘ಲಡ್ಕಿ ಹೂಂ, ಲಾಡ್ ಶಕ್ತಿ ಹೂಂ’ ಎಂದು ಹೇಳುತ್ತಾರೆ. ಆದರೆ ಇದು ಪುರುಷರ ಭೂಮಿಯಾಗಿರುವುದರಿಂದ ಅತ್ಯಾಚಾರಗಳು ನಡೆಯುತ್ತಿವೆ. ಅವರು ಯಾವುದೇ ಘಟನೆಯನ್ನು ಖಂಡಿಸಿಲ್ಲ ಅಥವಾ ಅಂತಹ ಘಟನೆಗಳು ನಡೆದ ಯಾವುದೇ ಸ್ಥಳಕ್ಕೆ ಭೇಟಿ ನೀಡಿಲ್ಲ. ಅವರು ಮೊದಲು ರಾಜಸ್ತಾನದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳ ಬಗ್ಗೆ ಮಾತನಾಡಬೇಕು” ಎಂದು ಆಗ್ರಹಿಸಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version