ನವದೆಹಲಿ: ದೆಹಲಿಯಿಂದ ಹೊರಡುವ ಶ್ರೀ ರಾಮಾಯಣ ಯಾತ್ರೆ (Shri Ramayana Yatra) ರೈಲಿಗೆ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ (Meenakashi Lekhi) ಚಾಲನೆ ನೀಡಿದ್ದಾರೆ. ದೆಹಲಿಯ ಸಫ್ದರ್ಜಂಗ್ ರೈಲ್ವೆ ನಿಲ್ದಾಣದಲ್ಲಿ ಈ ಭಾರತ್ ಗೌರವ್ ಡೀಲಕ್ಸ್ ಎಸಿ ಪ್ರವಾಸಿ ರೈಲಿಗೆ ಸಚಿವೆ ಹಸಿರು ನಿಶಾನೆ ತೋರಿದರು. ರಾಮಾಯಣ ಮಹಾಕಾವ್ಯಕ್ಕೆ ಸಂಬಂಧಿಸಿದ ವಿವಿಧ ಸ್ಥಳಗಳಲ್ಲಿ ಈ ರೈಲು ಸಂಚರಿಸಲಿದೆ. ಈ ರೈಲು ಒಟ್ಟು 19 ದಿನ ಪ್ರಯಾಣ ನಡೆಸಲಿದೆ.
ರೈಲಿನ ವೈಶಿಷ್ಟ್ಯ
ʼಸ್ವದೇಶ ದರ್ಶನʼ ಯೋಜನೆ ಅಡಿಯಲ್ಲಿ ಐಆರ್‌ಸಿಟಿಸಿ (Indian Railway Catering and Tourism Corporation) ವಿಶೇಷ ಪ್ರವಾಸ ಕೊಡುಗೆಯನ್ನು ನೀಡಿದ್ದು, ಭಗವಾನ್ ರಾಮನ ಜೀವನಕ್ಕೆ ಸಂಬಂಧಿಸಿದ ಪ್ರಮುಖ ಸ್ಥಳಗಳಿಗೆ ಈ ರೈಲು ಭೇಟಿ ನೀಡಲಿದೆ. ʼʼಶ್ರೀ ರಾಮಾಯಣ ಯಾತ್ರಾ-ವಿಶೇಷ ರೈಲಿಗೆ ಚಾಲನೆ ನೀಡಲಾಗಿದೆ. ಇದು 19 ದಿನ ಸಂಚರಿಸಲಿದ್ದು, 9 ಕಡೆಗಳಲ್ಲಿ ನಿಲುಗಡೆಯಾಗಲಿದೆ. ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠೆ ಆದ ಬಳಿಕ ಧಾರ್ಮಿಕ ಪ್ರವಾಸ ಕೈಗೊಳ್ಳುವ ಬಗ್ಗೆ ವಿವಿಧ ದೇಶಗಳಲ್ಲಿ ನೆಲೆಸಿರುವ ಭಾರತೀಯರು ಇಚ್ಛೆ ವ್ಯಕ್ತಪಡಿಸಿದ್ದರು. ಇದೀಗ ಅವರಿಗಾಗಿ ಈ ವಿಶೇಷ ಪ್ರವಾಸವನ್ನು ಆಯೋಜಿಸಲಾಗಿದೆʼʼ ಎಂದು ಮೀನಾಕ್ಷಿ ಲೇಖಿ ತಿಳಿಸಿದ್ದಾರೆ.
Flagged off the Shri Ramayana Yatra Bharat Gaurav Train from the Delhi Safdarjung Railway Station.
— Meenakashi Lekhi (@M_Lekhi) February 4, 2024
The train as part of 'Dekho Apna Desh' will be a cultural expedition traversing across the sacred cities that are associated with the life of Prabhu Shri Ram. pic.twitter.com/EMKmBbAzda
ಎಲ್ಲೆಲ್ಲ ಸಂಚಾರ?
ರೈಲು ಆರಂಭದಲ್ಲಿ ಅಯೋಧ್ಯೆಗೆ ತೆರಳಿದೆ. ಇಲ್ಲಿ ಪ್ರವಾಸಿಗರು ರಾಮ ಮಂದಿರದ ಜತೆಗೆ ಹನುಮಾನ್ ದೇವಾಲಯವನ್ನೂ ಸಂದರ್ಶಿಸಲಿದ್ದಾರೆ. ಬಳಿಕ ನಂದಿಗ್ರಾಮದ ಭಾರತ್ ಮಂದಿರಕ್ಕೂ ತೆರಳಲಿದ್ದಾರೆ. ಅಯೋಧ್ಯೆಯ ಬಳಿಕ ಸೀತಾ ಮಾತೆ ಜನಿಸಿದ ಸ್ಥಳ ಎಂದು ನಂಬಲಾಗುವ ಬಿಹಾರದ ಸೀತಾಮರ್ಹಿ ಮತ್ತು ನೇಪಾಳದ ರಾಮ್-ಜಾನಕಿ ದೇವಾಲಯಕ್ಕೂ ತೆರಳುವ ಯೋಜನೆ ಇದೆ.
ಸೀತಾಮರ್ಹಿ ನಂತರ ಪ್ರವಾಸಿಗರನ್ನು ರಾಮ್ರೇಖಾ ಘಾಟ್ ಮತ್ತು ಬಕ್ಸಾರ್‌ನ ವಿವಿಧ ದೇವಾಲಯಗಳಿಗೆ ಕರೆದೊಯ್ಯಲಾಗುವುದು. ನಂತರ ವಾರಣಾಸಿ. ಅಲ್ಲಿ ಪ್ರವಾಸಿಗರು ವಾರಣಾಸಿ, ಪ್ರಯಾಗ್, ಶೃಂಗ್ವೇರ್‌ಪುರ್ ಮತ್ತು ಚಿತ್ರಕೂಟ ದೇವಾಲಯಗಳಿಗೆ ತೆರಳಲಿದ್ದಾರೆ. ವಾರಣಾಸಿ, ಪ್ರಯಾಗ್ ಮತ್ತು ಚಿತ್ರಕೂಟದಲ್ಲಿ ರಾತ್ರಿ ತಂಗಲು ವ್ಯವಸ್ಥೆ ಮಾಡಲಾಗಿದೆ.
ಎಸಿ 1 ಮತ್ತು ಎಸಿ 2 ದರ್ಜೆಯ ಅತ್ಯಾಧುನಿಕ ಡೀಲಕ್ಸ್ ಎಸಿ ಪ್ರವಾಸಿ ರೈಲಿನಲ್ಲಿ ಒಟ್ಟು 156 ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿದೆ. ರೈಲ್ವೆ ಸಚಿವಾಲಯದ ಅಡಿಯಲ್ಲಿ ಬರುವ ಸಾರ್ವಜನಿಕ ವಲಯದ ಸಂಸ್ಥೆ ಐಆರ್‌ಸಿಟಿಸಿ ಈ ಮೂಲಕ ಆಧ್ಯಾತ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ʼʼಈ ‘ಶ್ರೀ ರಾಮಾಯಣ ಯಾತ್ರೆ’ಯ ಪ್ರವಾಸಿಗರಿಗೆ ವಿವಿಧ ತಾಣಗಳಲ್ಲಿ ರಾಮಾಯಣದ ಕಥೆಯನ್ನು ಪರಿಶೀಲಿಸುವ ಅವಕಾಶವನ್ನು ಒದಗಿಸಲಾಗುತ್ತದೆ. ಇದು ಜಾಗತಿಕ ವೇದಿಕೆಯಲ್ಲಿ ಭಾರತದ ಪ್ರಾಚೀನ ಪರಂಪರೆಯನ್ನು ಉತ್ತೇಜಿಸಲು ಕೊಡುಗೆ ನೀಡುತ್ತದೆʼʼ ಎಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: PM Narendra Modi: ಪ್ರಧಾನಿಯಿಂದ ಭವ್ಯ ಅಯೋಧ್ಯಾ ಧಾಮ್ ರೈಲು ನಿಲ್ದಾಣ ಉದ್ಘಾಟನೆ, ಅಮೃತ್ ಭಾರತ್ ರೈಲಿಗೆ ಚಾಲನೆ
ರಾಮ ಮಂದಿರಕ್ಕೆ ಭಕ್ತ ಜನ ಸಾಗರ
ಜನವರಿ 22ರಂದು ರಾಮ ಮಂದಿರಲ್ಲಿ ಪ್ರಾಣ ಪ್ರತಿಷ್ಠೆ ಆಯೋಜಿಸಲಾಗಿತ್ತು. ಬಳಿಕ ಜನವರಿ 23ರಂದು ದೇವಾಲಯವನ್ನು ಭಕ್ತರ ಪ್ರವೇಶಕ್ಕಾಗಿ ಮುಕ್ತಗೊಳಿಸಲಾಗಿದೆ. ಅಂದಿನಿಂದ ರಾಮನ ದರ್ಶನಕ್ಕೆ ಪ್ರತಿ ದಿನ ಲಕ್ಷಾಂತರ ಮಂದಿ ಭೇಟಿ ನೀಡುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ