Site icon Vistara News

BBC Documentary : ಸಾಕ್ಷ್ಯಚಿತ್ರದ ವಿಚಾರದಲ್ಲಿ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ ಸಿದ್ದರಾಮಯ್ಯ !

siddaramaih on BBC Documentary

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ನಡೆದ ಗೋಧ್ರೋತ್ತರ ಗಲಭೆಗಳ ಕುರಿತು ಬಿಬಿಸಿ ಸಾಕ್ಷ್ಯಚಿತ್ರದ (BBC Documentary) ಕುರಿತು ಚರ್ಚೆಗೆ ಮಾಜಿ ಸಿದ್ದರಾಮಯ್ಯ ಮುಂದಾಗಿದ್ದು, ಒಂದೇ ಬಾರಿಗೆ ಇಬ್ಬರನ್ನು ಟಾರ್ಗೆಟ್‌ ಮಾಡಿದ್ದಾರೆ.

ಒಂದೆಡೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರನ್ನು ಸಮರ್ಥನೆ ಮಾಡಿಕೊಳ್ಳುವುದರ ಜತೆಗೆ ಇತ್ತ ರಾಜ್ಯದಲ್ಲಿ ಐಟಿಬಿಟಿ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ವಿರುದ್ಧ ಟೀಕೆಯ ಸರಣಿ ಟ್ವೀಟ್‌ ಮಾಡಿದ್ದಾರೆ.

“ಬಿಬಿಸಿ ಸಾಕ್ಷ್ಯಚಿತ್ರದಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವಕ್ಕೆ ಧಕ್ಕೆ ಉಂಟಾಗಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಇದೇ ಬಿಜೆಪಿ ನಾಯಕರು ದೇಶಾದ್ಯಂತ ಪ್ರತಿಪಕ್ಷದ ನಾಯಕರನ್ನು ಹೀಗಳೆದಾಗ ಭಾರತದ ಗೌರವಕ್ಕೆ ಧಕ್ಕೆ ಉಂಟಾಗುವುದಿಲ್ಲವೇ? ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಬಿಬಿಸಿ ತಯಾರಿಸಿದ್ದ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡದಂತೆ ಮಾಧ್ಯಮಗಳ ಮೇಲೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದೆ. ಇದೇ ರೀತಿ ಪ್ರತಿಪಕ್ಷದ ನಾಯಕರ ಚಾರಿತ್ರ್ಯಹನನ ಮಾಡದಂತೆಯೂ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಬೇಕಲ್ಲವೇ?” ಎಂದಿದ್ದಾರೆ.

ಇದನ್ನೂ ಓದಿ : BBC Documentary: ದೆಹಲಿಯ ಇನ್ನೊಂದು ವಿಶ್ವವಿದ್ಯಾಲಯದಲ್ಲಿ ಇಂದು ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ

ಕಳೆದ ಎಂಟು ವರ್ಷಗಳಿಂದ ಬಿಜೆಪಿ ನಾಯಕರು ನನ್ನ ವಿರುದ್ಧ ಸುಳ್ಳಿನ ಕಂತೆಗಳ ಅಪಪ್ರಚಾರ ಮಾಡಿದ್ದಾರೆ ಎಂದಿರುವ ಸಿದ್ದರಾಮಯ್ಯ, ಬಿಜೆಪಿಯ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಿದ್ದಾರೆ, ನನ್ನ ಹೆಸರನ್ನೇ ತಿರುಚಿ ಗೇಲಿ ಮಾಡಿದ್ದಾರೆ. ಇದು ಕರ್ನಾಟಕ ಮತ್ತು ಕನ್ನಡಿಗರಿಗೆ ಮಾಡುವ ಅವಮಾನವಲ್ಲವೇ?” ಎಂದು ಹೇಳಿದ್ದಾರೆ.

ಸಿದ್ದು ನಿಜಕನಸುಗಳು ಪುಸ್ತಕವನ್ನು ಇತ್ತೀಚೆಗೆ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಬಿಡುಗಡೆ ಮಾಡಲು ಮುಂದಾಗಿದ್ದನ್ನು ನೆನಪಿಸಿರುವ ಸಿದ್ದರಾಮಯ್ಯ, “ನನ್ನ ವಿರುದ್ಧ ಯಾರೋ ಅನಾಮಧೇಯರು ಸುಳ್ಳಿನ ಕಂತೆಗಳ ಪುಸ್ತಕ ಬರೆಯುತ್ತಾರೆ, ಆ ಪುಸ್ತಕವನ್ನು ಸಚಿವರೊಬ್ಬರ ಅಧ್ಯಕ್ಷತೆಯಲ್ಲಿ ಬಿಡುಗಡೆ ಗೊಳಿಸಲು ಸಮಾರಂಭ ಆಯೋಜಿಸುತ್ತಾರೆ. ಇಂತಹ ಕುಚೇಷ್ಠೆ-ಕುಚೋದ್ಯಗಳನ್ನು ಬೆಂಬಲಿಸುವವರಿಗೆ ವಿಶ್ವಾಸಾರ್ಹ ಹಿನ್ನೆಲೆಯ ಬಿಬಿಸಿ ಮಾಧ್ಯಮ ಸಂಸ್ಥೆಯನ್ನು ವಿರೋಧಿಸುವ ಯಾವ ನೈತಿಕತೆ ಇದೆ ಬಿಜೆಪಿ?” ಎಂದು ಪ್ರಶ್ನಿಸಿದ್ದಾರೆ.

Exit mobile version