ನವದೆಹಲಿ: ದಿಲ್ಲಿ ಲಿಕ್ಕರ್ ಪಾಲಿಸಿ ಹಗರಣ (Delhi Liquor policy case:) ಸಂಬಂಧ ಬಂಧಿತರಾಗಿರುವ ದಿಲ್ಲಿ ಮಾಜಿ ಸಿಎಂ, ಆಮ್ ಆದ್ಮಿ ಪಾರ್ಟಿ ನಾಯಕ ಮನೀಶ್ ಸಿಸೋಡಿಯಾ ಅವರನ್ನು ಮಾರ್ಚ್ 20ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಿಬಿಐ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಅವರನ್ನು ಸೋಮವಾರ ಸಿಬಿಐ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಸಿಸೋಡಿಯಾ ಅವರನ್ನು ಫೆ.26ರಂದು ಸಿಬಿಐ ಬಂಧಿಸಿತ್ತು.
ಬಂಧನದ ಬೆನ್ನಲ್ಲೇ ಮನೀಶ್ ಸಿಸೋಡಿಯಾ ಅವರು ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ, ಸಿಸೋಡಿಯಾ ಅರ್ಜಿಯನ್ನು ನಿರಾಕರಿಸಿದ ಕೋರ್ಟ್, ನೇರವಾಗಿ ಸುಪ್ರೀಂ ಕೋರ್ಟ್‌ಗೆ ಬರುವ ಅಗತ್ಯವಿಲ್ಲ. ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿಕೊಳ್ಳಬಹುದು ಎಂದು ಹೇಳಿತ್ತು. ಅಂತಿಮವಾಗಿ ಸಿಸೋಡಿಯಾ ಸಿಬಿಐ ಕೋರ್ಟ್‌ಗೆ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು. ಈ ಕುರಿತೂ ವಿಚಾರಣೆ ನಡೆಯುತ್ತಿದೆ.
ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್ ಹತ್ಯೆಗೆ ಬಿಜೆಪಿ ಸಂಚು ರೂಪಿಸಿದೆ: ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾರಿಂದ ಗಂಭೀರ ಆರೋಪ
ಸಿಬಿಐ ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲಾಗಿದೆ. ಹಾಗಿದ್ದೂ, ಕೇಳಿರುವ ಪ್ರಶ್ನೆಗಳನ್ನೇ ಕೇಳಿ ಚಿತ್ರಹಿಂಸೆ ನೀಡಲಾಗುತ್ತಿದೆ ಎಂದು ಈ ಹಿಂದಿನ ವಿಚಾರಣೆಯಲ್ಲಿ ಸಿಸೋಡಿಯಾ ಅವರು ಸಿಬಿಐ ವಿರುದ್ಧ ಆರೋಪ ಮಾಡಿದ್ದರು. ಬಳಿಕ, ನ್ಯಾಯಾಲಯವು ಪ್ರಶ್ನೆಗಳನ್ನು ಮತ್ತೆ ಮತ್ತೆ ಕೇಳದಂತೆ ಹೇಳಿತ್ತು. ಅಲ್ಲದೇ, ಎರಡು ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿತ್ತು. ಈಗ ಕಸ್ಟಡಿ ಅವಧಿ ಮುಗಿದ ಕಾರಣ ಮತ್ತೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಹಾಗೆಯೇ, ಜಾಮೀನು ಅರ್ಜಿ ವಿಚಾರಣೆಯು ಮಾರ್ಚ್ 10ಕ್ಕೆ ನಡೆಯಲಿದೆ.