Site icon Vistara News

Ram Mandir: ಸಹೋದರರ ಆತ್ಮಕ್ಕೆ ಈಗ ಶಾಂತಿ; ಆಯೋಧ್ಯೆಯಲ್ಲಿ ಗೋಲಿಬಾರ್‌ಗೆ ಬಲಿಯಾದ ಕೊಠಾರಿ ಸಹೋದರರ ತಂಗಿಯ ನುಡಿ

poornima

poornima

ಅಯೋಧ್ಯೆ: ಸಾವಿರಾರು ಮಂದಿಯ ತ್ಯಾಗ, ಪ್ರಾರ್ಥನೆಯ ಫಲವಾಗಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ (Ram Mandir) ತಲೆ ಎತ್ತುತ್ತಿದೆ. ಜನವರಿ 22ರಂದು ಮಂದಿರದ ಲೋಕಾರ್ಪಣೆಯೂ ನಡೆಯಲಿದೆ. ರಾಮ ಮಂದಿರಕ್ಕಾಗಿ ಪ್ರಾಣ ತ್ಯಾಗ ಮಾಡಿದ ಇಬ್ಬರು ಕರ ಸೇವಕರ (kothari brothers) ಸಹೋದರಿ ಅವರ ನೆನಪಿನೊಂದಿಗೆ ಅಯೋಧ್ಯೆಗೆ ತೆರಳಲು ಸಿದ್ಧತೆ ನಡೆಸಿದ್ದಾರೆ. ಸುಮಾರು 33 ವರ್ಷಗಳ ಹಿಂದಿನ ಘಟನೆ ನೆನೆದು ಅವರು ಈಗಲೂ ಕಣ್ಣೀರಿಡುತ್ತಿದ್ದಾರೆ. ಅವರ ಹೆಸರು ಪೂರ್ಣಿಮಾ ಕೊಠಾರಿ. ಅಂದು ನಡೆದಿದ್ದು ಏನು? ಕರ ಸೇವಕ ಸಹೋದರರು ಬಲಿಯಾಗಿದ್ದು ಹೇಗೆ ಮುಂತಾದ ವಿವರ ಇಲ್ಲಿದೆ.

ತನ್ನ ಸಹೋದರರಾದ ರಾಮ್ ಕೊಠಾರಿ ಮತ್ತು ಶರದ್ ಕೊಠಾರಿ ಇಬ್ಬರೂ 1990ರಲ್ಲಿ ಅಯೋಧ್ಯೆಗೆ ಹೋದ ದಿನವನ್ನು ಪೂರ್ಣಿಮಾ ಈಗಲೂ ಹನಿಗೂಡಿದ ಕಣ್ಣಿನ ಜತೆಗೆ ನೆನಪಿಸಿಕೊಳ್ಳುತ್ತಾರೆ. ರಾಮ್ ಮತ್ತು ಶರದ್ ಇಬ್ಬರೂ ಕರಸೇವಕರಾಗಿದ್ದರು. ಆಗ ರಾಮ್ ಕೊಠಾರಿ ಅವರಿಗೆ 22 ವರ್ಷ ಮತ್ತು ಶರದ್‌ಗೆ 20 ವರ್ಷ. 1990ರಲ್ಲಿ ದೀಪಾವಳಿಯ ನಂತರ ಈ ಇಬ್ಬರು ಸಹೋದರರು ಅಯೋಧ್ಯೆಗೆ ತೆರಳಿದ್ದರು. ಮುಂದೇನಾಯ್ತು ಎನ್ನುವುದನ್ನು ಪೂರ್ಣಿಮಾ ಹೀಗೆ ವಿವರಿಸುತ್ತಾರೆ.

ಅಂದು ನಡೆದಿದ್ದೇನು?

“ಸಹೋದರರಿಬ್ಬರು ಬನಾರಸ್‌ನಿಂದ ಅಯೋಧ್ಯೆಯವರೆಗೆ ನಡೆದುಕೊಂಡು ಹೋದರು. ಮೊದಲ ದಿನ ಅವರು ಎಲ್ಲ ಭದ್ರತೆಯನ್ನು ತೂರಿ ಬಾಬರಿ ಮಸೀದಿಯ ಒಳಗೆ ಹೋಗಿ ಕೇಸರಿ ಧ್ವಜವನ್ನು ನೆಟ್ಟರು. ಆದರೆ ಮರುದಿನದ ಪತ್ರಿಕೆಗಳಲ್ಲಿ, ಕರಸೇವಕರಿಂದ ಏನನ್ನೂ ಮಾಡಲು ಸಾಧ್ಯವಿಲ್ಲ ಎಂಬ ವರದಿ ಪ್ರಕಟವಾಗಿತ್ತು. ಇದು ಇಬ್ಬರನ್ನು ಬಹಳ ಕಾಡಿತ್ತು. ಹೀಗಾಗಿ ಅವರು ಎರಡನೇ ಬಾರಿಗೆ ಒಳ ಹೋಗಲು ನಿರ್ಧರಿಸಿದರು. ಈ ಬಾರಿ ಹಿಂಸಾಚಾರ ನಡೆಯಿತು. ಮೊದಲು ಸಹೋದರರಿಬ್ಬರೂ ಅಡಗಿದ್ದರು. ಆದರೆ ಯಾರೋ ಅಳುತ್ತಿರುವುದನ್ನು ಕೇಳಿ ಹೊರಗೆ ಬಂದಾಗ ಅವರ ಮೇಲೆ ಪೊಲೀಸರಿಂದ ಗುಂಡಿನ ದಾಳಿ ನಡೆಯಿತುʼʼ ಎಂದು ಪೂರ್ಣಿಮಾ ಅಂದಿನ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ.

“ಸಂಘದ ಹಿರಿಯರು ಬಂದು ನಮ್ಮನ್ನು ರಾಮ ಮಂದಿರ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಸಹೋದರರ ತ್ಯಾಗವು ವ್ಯರ್ಥವಾಗುವುದಿಲ್ಲ ಎಂದು ನಮಗೆ ತಿಳಿದಿತ್ತು. ಪ್ರಧಾನಿ ನರೇಂದ್ರ ಮೋದಿಜಿ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠೆಯಲ್ಲಿ ಭಾಗವಹಿಸಿದಾಗ ಸಹೋದರರು ಮೇಲಿನಿಂದ ಸಂತಸ ಪಡಲಿದ್ದಾರೆʼʼ ಎಂದು ಅವರು ಭಾವುಕರಾಗಿ ಹೇಳುತ್ತಾರೆ.

ಪೂರ್ಣಿಮಾ ಸದ್ಯ ಕೋಲ್ಕತ್ತಾದಲ್ಲಿ ನೆಲೆಸಿದ್ದಾರೆ. ರಾಮ ಮಂದಿರ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಲುವಾಗಿ ಅವರು ತಮ್ಮ ಪುತ್ರಿಯ ಜತೆಗೆ ಜನವರಿ 11ರಂದು ಕೋಲ್ಕತ್ತಾದಿಂದ ಅಯೋಧ್ಯೆಗೆ ತೆರಳಲಿದ್ದಾರೆ. ಜನವರಿ 23ರ ತನಕ ಅವರು ಅಲ್ಲೇ ನೆಲೆಸಲಿದ್ದಾರೆ. ಪೂರ್ಣಿಮಾ ಅವರ ಪೋಷಕರು ತಮ್ಮ ಇಬ್ಬರು ಪುತ್ರರು ಅಯೋಧ್ಯೆ ದೇವಾಲಯ ಚಳವಳಿಗಾಗಿ ಪ್ರಾಣ ಅರ್ಪಿಸಿರುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ತಮ್ಮ ಸಹೋದರರ ನೆನಪಿಗಾಗಿ ಪೂರ್ಣಿಮಾ ಪ್ರತಿ ದೀಪಾವಳಿಯಂದು ಅಯೋಧ್ಯೆಗೆ ತೆರಳುತ್ತಾರೆ.

ಪೂರ್ಣಿಮಾ ಅವರ ಮನೆಯಲ್ಲಿ ರಾಮ್ ಮತ್ತು ಶರದ್ ಅವರ ನೆನಪೇ ತುಂಬಿಕೊಂಡಿದೆ. ಪ್ರತಿಯೊಬ್ಬರ ತ್ಯಾಗದ ಫಲವಾಗಿ ರಾಮ ಮಂದಿರ ಕನಸು ನನಸಾಗುತ್ತಿದೆ ಎಂದು ಅವರು ಹೇಳುತ್ತಾರೆ. ಜತೆಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸುವುದನ್ನು ಮರೆಯುವುದಿಲ್ಲ. ʼʼಮೋದಿ ಅವರ ಪ್ರಾಮಾಣಿಕ ಪ್ರಯತ್ನವು ಅಯೋಧ್ಯೆಯಲ್ಲಿ ರಾಮ ಮಂದಿರ ಕನಸು ನನಸಾಗಲು ಕಾರಣವಾಗಿದೆʼʼ ಎಂದು ಅಭಿಪ್ರಾಯ ಪಟ್ಟಿದ್ದಾರೆ.

1990ರ ನವೆಂಬರ್ 2ರಂದು ಅಯೋಧ್ಯೆಯಲ್ಲಿ ನಡೆದ ಪೊಲೀಸ್ ಗುಂಡಿನ ದಾಳಿಯಲ್ಲಿ ರಾಮ್ ಮತ್ತು ಶರದ್ ಮೃತಪಟ್ಟಿದ್ದರು. 1990ರಲ್ಲಿ ನಡೆದ ರಾಮ ರಥ ಯಾತ್ರೆಯನ್ನು ಪಾಲ್ಗೊಂಡಿದ್ದ ಅವರು ಬಾಬರಿ ಕಟ್ಟಡದ ಮೇಲೆ ಕೇಸರಿ ಧ್ವಜವನ್ನು ನೆಟ್ಟಿದ್ದರು.

ಇದನ್ನೂ ಓದಿ: Ram Mandir: ಜನವರಿ 22ರಂದೇ ಯಾಕೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ? ಇಲ್ಲಿದೆ ಮಾಹಿತಿ…

Exit mobile version