ಗಿರೀಶ್ ಲಿಂಗಣ್ಣ
ಕಳೆದ ಒಂದು ದಶಕದ ಅವಧಿಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹಾಗೂ ಭಾರತೀಯ ಬಾಹ್ಯಾಕಾಶ ಯೋಜನೆಗಳು ಜಾಗತಿಕವಾಗಿ ಅಪಾರ ಬೆಳವಣಿಗೆ ಹೊಂದಿವೆ. ಆದರೆ ಈ ಯಶಸ್ಸಿನಲ್ಲಿ ಖಾಸಗಿ ಸಂಸ್ಥೆಗಳು ಮಾತ್ರ ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ಆ ಕೊರತೆಯೂ ನೀಗುವ ಸಮಯ ಬಂದಿದೆ. ಒಂದಷ್ಟು ಭಾರತೀಯ ಸ್ಟಾರ್ಟಪ್ ಸಂಸ್ಥೆಗಳು ಬಾಹ್ಯಾಕಾಶ ವಲಯದಲ್ಲಿ ಅಪಾರ ಸಂಶೋಧನೆಗಳನ್ನು ಕೈಗೊಂಡಿವೆ. ಈ ನಿಟ್ಟಿನಲ್ಲಿ ಇಸ್ರೋ ಸಹ ಖಾಸಗಿ ಸಂಸ್ಥೆಗಳಿಗೆ ಸೂಕ್ತ ಬೆಂಬಲ ಒದಗಿಸುತ್ತಿದ್ದು, ಅವುಗಳಿಗೆ ಸಂಶೋಧನೆಯತ್ತ ಮಾರ್ಗದರ್ಶನ ಮಾಡುತ್ತಿದೆ. ಹೈದರಾಬಾದ್ ಮೂಲದ ಅಂತಹ ಒಂದು ಸ್ಟಾರ್ಟಪ್ ಸಂಸ್ಥೆ ಈಗ ಸುದ್ದಿಯಲ್ಲಿದೆ. ಸ್ಕೈರೂಟ್ ಏರೋಸ್ಪೇಸ್ ಎನ್ನುವ ಸಂಸ್ಥೆ ತನ್ನದೇ ಆದ ವಿನ್ಯಾಸದ ರಾಕೆಟ್ ಅನ್ನು ಉಡಾವಣೆಗೊಳಿಸಲಿರುವ ಭಾರತದ ಪ್ರಥಮ ಸ್ಟಾರ್ಟಪ್ ಎನಿಸಲಿದೆ.
ಬಾಹ್ಯಾಕಾಶ ಉಡಾವಣೆಯಲ್ಲಿ ಆರಂಭಗೊಂಡಿದೆ ಭಾರತದ ಹೊಸ ಯುಗ
ನಾಲ್ಕು ವರ್ಷಗಳ ಹಿಂದೆ ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆ ಭಾರತದ “ಸ್ಪೇಸ್ ಎಕ್ಸ್’ ಆಗಿ ಬೆಳವಣಿಗೆ ಹೊಂದುವ ಗುರಿಯನ್ನು ಹಾಕಿಕೊಂಡಿತು. ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿದ ಬಳಿಕ, ಇಂದು ಅವರ ಪ್ರಥಮ ರಾಕೆಟ್ ಉಡಾವಣೆಗೆ ಸನ್ನದ್ಧಗೊಂಡಿದೆ. ಸ್ಕೈರೂಟ್ ಸಂಸ್ಥೆಯ ಪಯಣ ಹಲವು ನೂತನ ಆವಿಷ್ಕಾರಗಳು ಮತ್ತು ಅಭಿವೃದ್ಧಿಗಳಿಂದ ತುಂಬಿದೆ.
ಸ್ಕೈರೂಟ್ ಸಂಸ್ಥೆಯು ದೈತ್ಯ ಹೆಗಲುಗಳ ಮೇಲೆ ಭದ್ರವಾಗಿ ನಿಂತಿದೆ. ಉದಾಹರಣೆಗೆ, ಸ್ಕೈರೂಟ್ ಸಂಸ್ಥೆಯ ಹೈಪರ್‌ಗೋಲಿಕ್ ಫ್ಯುಯೆಲ್ ಅಪ್ಪರ್ ಸ್ಟೇಜ್ ಎಂಜಿನ್‌ಗೆ ಸರ್ ಸಿವಿ ರಾಮನ್ ಅವರ ಹೆಸರಿಡಲಾಗಿದೆ. ಅದರ ಘನ ಇಂಧನ ರಾಕೆಟ್ ಎಂಜಿನ್‌ಗೆ ಡಾ. ಎಪಿಜೆ ಅಬ್ದುಲ್ ಕಲಾಂ ಹೆಸರಿಟ್ಟರೆ, ಮುಂದೆ ಬರಲಿರುವ ಉಡಾವಣಾ ವಾಹನ ಸರಣಿಗೆ ವಿಕ್ರಮ್ ಸಾರಾಭಾಯಿ ಅವರ ಹೆಸರಿಡಲಾಗುತ್ತದೆ. ಭಾರತ ಸರ್ಕಾರ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳ ಮಧ್ಯ ಸಹಯೋಗವನ್ನು ಉತ್ತೇಜಿಸಲು ಆರಂಭಿಸಿದ ಹಾಗೇ ಸ್ಕೈರೂಟ್ ಶೀಘ್ರವಾಗಿ ಇಸ್ರೋ ಜೊತೆ ಸಹಭಾಗಿತ್ವ ಹೊಂದಿತು.
ಸ್ಕೈರೂಟ್ ಈಗಾಗಲೇ ತನ್ನ ಯಶಸ್ಸಿಗೆ ಸನ್ನದ್ಧವಾಗಿದೆ. ಸಿಂಗಾಪುರ ಮೂಲದ ನಿಧಿ ಸಂಸ್ಥೆಯಾದ ಜಿಐಸಿ ನೇತೃತ್ವದಲ್ಲಿ ಸ್ಕೈರೂಟ್ ದೇಶೀಯವಾಗಿ ಅತಿಹೆಚ್ಚು ಹೂಡಿಕೆ ಪಡೆದುಕೊಂಡಿದೆ.
ಯಾವುದೇ ರಾಕೆಟ್‌ನಲ್ಲಿ ಹಲವು ಹಂತಗಳಿವೆ. ಅದು ಹೆಚ್ಚಿನ ಎತ್ತರವನ್ನು ತಲುಪುತ್ತಿದ್ದ ಹಾಗೇ ಅದರ ಮುಂದಿನ ಹಂತ ಆರಂಭವಾಗುತ್ತದೆ. ಆ ಬಳಿಕ ರಾಕೆಟ್ ಭಾರ ಕಡಿಮೆಯಾಗಲು ಮೊದಲ ಹಂತದ ಉಪಕರಣ ಕಳಚಿ ಬೀಳುತ್ತದೆ. ರಾಕೆಟ್ ಇಂಧನದ ದಹನ ಪ್ರಕ್ರಿಯೆಗೆ ಆಮ್ಲಜನಕದ ಅಗತ್ಯವಿರುತ್ತದೆ. ಆದರೆ ಬಾಹ್ಯಾಕಾಶದ ಸನಿಹ ಹೋಗುತ್ತಿದ್ದ ಹಾಗೇ ವಾತಾವರಣ ಕಡಿಮೆಯಾಗುತ್ತದೆ. ಆದ್ದರಿಂದ ರಾಕೆಟ್‌ನ ಉನ್ನತ ಹಂತಗಳು ಸಾಮಾನ್ಯವಾಗಿ ವಾತಾವರಣದ ಆಮ್ಲಜನಕದ ಅಗತ್ಯವಿಲ್ಲದೆ ಇಂಧನ ದಹಿಸಲು ಸಮರ್ಥವಾಗಿವೆ. ಆದರೆ ರಾಕೆಟ್‌ನ ಉಡಾವಣೆಯ ಆರಂಭಿಕ ಹಂತಗಳಲ್ಲಿ ಈ ರೀತಿಯ ಪ್ರಕ್ರಿಯೆಯ ಅಗತ್ಯವಿರುವುದಿಲ್ಲ. ಈ ಮೂಲಕ ರಾಕೆಟ್ ಆಕ್ಸಿಡೈಸರ್ ಕೊಂಡೊಯ್ಯದೆ, ತನ್ನ ಭಾರವನ್ನು ಕಡಿಮೆಗೊಳಿಸುತ್ತದೆ.
ಸ್ಕೈರೂಟ್ ಸಂಸ್ಥೆಯ ರಾಕೆಟ್ ಪ್ರಕ್ರಿಯೆ ಅದರ ರಾಮನ್ 1 ಎಂಜಿನ್ ಪರೀಕ್ಷೆಯೊಡನೆ ಆರಂಭಗೊಂಡಿದೆ. ಇದು ವಿಕ್ರಮ್ – 1 ರಾಕೆಟ್‌ನ ಮೇಲಿನ ಹಂತಗಳನ್ನು ಮುಂದುವರಿಸುತ್ತದೆ. ಇದೊಂದು ದ್ರವ ಇಂಧನ ಎಂಜಿನ್ ಆಗಿದ್ದು, ಹೈಪರ್‌ಗೋಲಿಕ್ ಇಂಧನಗಳನ್ನು ಬಳಸಿಕೊಳ್ಳುತ್ತದೆ. ಈ ಇಂಧನಗಳು ಹೈಡ್ರೊಜನ್ ಮೇಲೆ ಅವಲಂಬಿತವಾಗಿದ್ದು, ಇದೊಂದು ವಿಷಕಾರಿ ಮತ್ತು ಅಸ್ಥಿರ ರಾಸಾಯನಿಕವಾಗಿದೆ. ಇದನ್ನು ಅಸಮವಾದ ಡೈಮಿಥೈಲ್‌ಹೈಡ್ರೋಜನ್ ಮತ್ತು ಡೈನೈಟ್ರೋಜನ್ ಟೆಟ್ರಾಕ್ಸೈಡ್ ಮೂಲಕ ತಯಾರಿಸಲಾಗುತ್ತದೆ. ಅವುಗಳು ಒಂದನ್ನೊಂದು ಬೆರೆತಾಗ ದಹನ ಪ್ರಕ್ರಿಯೆ ಆರಂಭಗೊಳ್ಳುತ್ತದೆ.
ಸ್ಕೈರೂಟ್ ಅಭಿವೃದ್ಧಿಯ ಹಂತಗಳಲ್ಲಿ 3ಡಿ ಪ್ರಿಂಟಿಂಗ್ ಉಪಕರಣಗಳನ್ನು ಬಳಸಲಾಗಿದೆ. ರಾಮನ್ ೧ ಎಂಜಿನ್‌ನ ಇಂಜೆಕ್ಟರ್ ಪ್ಲೇಟ್ ಸಂಪೂರ್ಣವಾಗಿ 3ಡಿ ಪ್ರಿಂಟ್ ನಿಂದ ತಯಾರಿಸಲ್ಪಟ್ಟಿದೆ.
ರಾಮನ್ 1 ಎಂಜಿನ್ನಿನ ಯಶಸ್ವಿ ಪರೀಕ್ಷೆಯ ಅಂದಾಜು ಮೂರು ತಿಂಗಳ ಅವಧಿಯ ಬಳಿಕ ಸ್ಕೈರೂಟ್ ತನ್ನ ಇನ್ನೊಂದು ರಾಕೆಟ್ ಎಂಜಿನ್ ಆದ ಕಲಾಂ 5ನ್ನು ಪರೀಕ್ಷೆಗೊಳಪಡಿಸಿತು. ಕಲಾಂ 5 ಒಂದು ಘನ ಇಂಧನ ಎಂಜಿನ್ ಆಗಿದ್ದು, ಯಾವುದೇ ಚಲಿಸುವ ಭಾಗಗಳನ್ನು ಹೊಂದಿಲ್ಲ. ಇದು 15 ವಿವಿಧ ಆಧುನಿಕ ಉತ್ಪನ್ನಗಳು ಮತ್ತು 9 ವಿವಿಧ ಉತ್ಪಾದನಾ ಪ್ರಕ್ರಿಯೆಗಳನ್ನು ಬಳಸಿಕೊಳ್ಳುತ್ತದೆ.
ವಿಕ್ರಮ್: ಭಾರತದ ನೇತೃತ್ವದಿಂದ ಭಾರತೀಯರ ನೇತೃತ್ವ ವಹಿಸುವ ತನಕ
ವಿಕ್ರಮ್ ಸಾರಾಭಾಯಿ ಅವರು ಭಾರತದ ಪಾಲಿಗೆ ಅತ್ಯಂತ ಪ್ರಮುಖ ವ್ಯಕ್ತಿ. ಅದರಲ್ಲೂ ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಅವರ ಪಾತ್ರ ಮಹತ್ತರವಾದದ್ದು. ಅವರಿಗೆ ಸೂಕ್ತ ಗೌರವ ಎಂಬಂತೆ ಸ್ಕೈರೂಟ್ ತನ್ನ ರಾಕೆಟ್‌ಗೆ ವಿಕ್ರಮ್ ಎಂದೇ ಹೆಸರಿಟ್ಟಿದೆ.
ನವೆಂಬರ್ 15ರಂದು, ಅಂದಾಜು ಬೆಳಗ್ಗೆ 11:30ಕ್ಕೆ ಸ್ಕೈರೂಟ್ ತನ್ನ ವಿಕ್ರಮ್ ಎಸ್ ರಾಕೆಟ್‌ನ್ನು ಉಡಾವಣೆಗೊಳಿಸಲಿದೆ. ಈ ರಾಕೆಟ್ 2.5 ಕೆಜಿ ತೂಕದ, ಚೆನ್ನೈ ಮೂಲದ ಸ್ಟಾರ್ಟಪ್ ಸಂಸ್ಥೆಯಾದ ಸ್ಪೇಸ್‌ಕಿಡ್ಸ್ ನಿರ್ಮಿಸಿರುವ ಉಪಗ್ರಹವನ್ನು ಕೊಂಡೊಯ್ಯಲಿದೆ. ವಿಕ್ರಮ್ ರಾಕೆಟ್ ಸರಣಿಯಲ್ಲಿ ವಿಕ್ರಮ್ 1, ವಿಕ್ರಮ್ 2 ಹಾಗೂ ವಿಕ್ರಮ್ 3 ರಾಕೆಟ್‌ಗಳಿವೆ.
ಮೂಲತಃ ವಿಕ್ರಮ್ 1, 2 ಹಾಗೂ 3 ತಮ್ಮ ಭಾರ ಹೊರುವ ಸಾಮರ್ಥ್ಯದಲ್ಲಿ ಒಂದರಿಂದ ಒಂದು ಭಿನ್ನವಾಗಿವೆ. ವಿಕ್ರಮ್ 1 ಕಕ್ಷೆಯ ಹೊಂದಾಣಿಕೆಯ ಮೇಲೆ ಅವಲಂಬಿತವಾಗಿ ಹಲವು ವಸ್ತುಗಳನ್ನು ಕಕ್ಷೆಯಲ್ಲಿ ಜೋಡಿಸಬಲ್ಲದಾಗಿದೆ. ಆದರೆ ವಿಕ್ರಮ್ 2 ಹಾಗೂ 3 ರಾಕೆಟ್‌ಗಳು ಅಪ್ಪರ್ ಸ್ಟೇಜ್ ಕ್ರಯೋ ಇಂಜಿನ್ ಅನ್ನು ಹೊಂದಿರಲಿವೆ. ಸ್ಕೈರೂಟ್ ಸಂಸ್ಥೆಯ ರಾಕೆಟ್‌ಗಳಿಗೆ ಅತ್ಯಂತ ಕನಿಷ್ಠ ಲಾಂಚ್ ಪ್ಯಾಡ್ ಪ್ರದೇಶ ಸಾಕಾಗುತ್ತದೆ. ಅದರಲ್ಲೂ ವಿಕ್ರಮ್ 1 ರಾಕೆಟ್ ಅನ್ನು ಕೇವಲ 24 ಗಂಟೆಗಳ ಅವಧಿಯೊಳಗೆ ಜೋಡಿಸಬಹುದು. ಹೆಚ್ಚು ಭಾರ ಹೊರುವ ರಾಕೆಟ್‌ಗಳಾದ ವಿಕ್ರಮ್ 2 ಹಾಗೂ ವಿಕ್ರಮ್ 3 ರಾಕೆಟ್‌ಗಳನ್ನು ಜೋಡಿಸಲು ಬಹುತೇಕ 72 ಗಂಟೆಗಳ ಸಮಯದ ಅಗತ್ಯವಿದೆ.
ಸ್ಕೈರೂಟ್ ಸಂಸ್ಥೆಯ ಮೊದಲ ರಾಕೆಟ್ ಆಗಿರುವ ವಿಕ್ರಮ್ ಎಸ್ ಭೂ ಮೇಲ್ಮೈಯಿಂದ ಕೇವಲ ನೂರು ಕಿಲೋಮೀಟರ್ ಎತ್ತರಕ್ಕೆ ಮಾತ್ರ ಸಾಗಬಲ್ಲದು. ಇಂತಹ ಸಬ್ ಆರ್ಬಿಟಲ್ ಸ್ಪೇಸ್ ಫ್ಲೈಟ್ (ಆರ್ಬಿಟಲ್ ಫ್ಲೈಟ್ ವ್ಯಾಪ್ತಿ 200 ಕಿಲೋಮೀಟರ್ ನಿಂದ 2000 ಕಿಲೋಮೀಟರ್ ಆಗಿರುತ್ತದೆ) ಭವಿಷ್ಯದ ಬಾಹ್ಯಾಕಾಶ ಯೋಜನೆಗಳಿಗೆ ಅತ್ಯಂತ ಮಹತ್ವದ್ದಾಗಿದೆ.
ಸ್ಕೈರೂಟ್ ನಡೆಸುತ್ತಿರುವ ಉಡಾವಣೆಗಳು ಭಾರತದ ಬಾಹ್ಯಾಕಾಶ ಉದ್ಯಮದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಇಂತಹ ಹಲವು ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಭಾರತದ ಬಾಹ್ಯಾಕಾಶ ಉದ್ಯಮ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಅಭಿವೃದ್ಧಿ ಕಾಣಲು ಸಾಧ್ಯ.
ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು
ಇದನ್ನೂ ಓದಿ | ವಿಸ್ತಾರ Explainer | ದೇಶೀಯವಾಗಿ ಲಿಥಿಯಂ ಹುಡುಕಾಟ, ಮಂಡ್ಯದಲ್ಲೇ ಇದೆ ನಿಕ್ಷೇಪ!