ಶ್ರೀನಗರ: ಜಮ್ಮು & ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ (Jammu & Kashmir and Ladakh High Court) ಇತ್ತೀಚೆಗೆ ನೀಡಿದ ತೀರ್ಪಿನಲ್ಲಿ, ಪತಿ ತನ್ನ ಪತ್ನಿಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡುವುದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354ರ ಅಡಿಯಲ್ಲಿ ಮಹಿಳೆಯ ಗೌರವಕ್ಕೆ ಧಕ್ಕೆ ತರುವ ಅಪರಾಧವಲ್ಲ (Woman’s modesty under Section 354). ಆದರೆ ಸೆಕ್ಷನ್ 323ರ ಅಡಿಯಲ್ಲಿ (Section 323 for causing hurt) ನೋವನ್ನುಂಟು ಮಾಡಿದ್ದಕ್ಕಾಗಿ ಆತನ ವಿರುದ್ಧ ಪ್ರಕರಣ ದಾಖಲಿಸಬಹುದು ಎಂದು ಹೇಳಿದೆ.
ಪ್ರಕರಣದ ಹಿನ್ನೆಲೆ
ವೈವಾಹಿಕ ವಿವಾದದ ವೇಳೆ ಪತ್ನಿಯ ಕೆನ್ನೆಗೆ ಹೊಡೆದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇದರ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ರಜನೇಶ್ ಓಸ್ವಾಲ್ (Justice Rajnesh Oswal) ಅವರನ್ನೊಳಗೊಂಡ ಏಕಸದಸ್ಯ ಪೀಠ ಈ ಮಹತ್ವದ ತೀರ್ಪು ನೀಡಿದೆ. ಅದರಂತೆ ಹೈಕೋರ್ಟ್ ವ್ಯಕ್ತಿಯ ವಿರುದ್ಧ ದಾಖಲಾದ ಸೆಕ್ಷನ್ 354ರ ಅಪರಾಧವನ್ನು ರದ್ದುಗೊಳಿಸಿತು ಮತ್ತು ಸೆಕ್ಷನ್ 323ರ ಅಡಿಯಲ್ಲಿನ ಅಪರಾಧವನ್ನು ಎತ್ತಿ ಹಿಡಿಯಿತು.
ಅರ್ಜಿದಾರನ ಪತ್ನಿ ತಮ್ಮ ವಿವಾಹ ಒಪ್ಪಂದವನ್ನು ರದ್ದುಗೊಳಿಸುವಂತೆ ಮೊಕದ್ದಮೆ ಹೂಡಿದ್ದರೆ, ಅರ್ಜಿದಾರನು ತಮ್ಮ ವೈವಾಹಿಕ ಹಕ್ಕುಗಳನ್ನು ಮರುಸ್ಥಾಪಿಸಲು ದಾವೆ ಹೂಡಿದ್ದರು. ಈ ದಾವೆಗಳ ನಡುವೆ ಪತಿ ತನ್ನ ಮೇಲೆ ಹಲ್ಲೆ ನಡೆಸಿದ್ದಾಗಿ ಪತ್ನಿ ದೂರು ದಾಖಲಿಸಿದ್ದರು. ಪೊಲೀಸ್ ವರದಿಯ ಆಧಾರದ ಮೇಲೆ, ವಿಚಾರಣಾ ನ್ಯಾಯಾಲಯವು ಐಪಿಸಿಯ ಸೆಕ್ಷನ್ 323 (ನೋವನ್ನುಂಟು ಮಾಡುವುದು) ಮತ್ತು 354 (ಮಹಿಳೆಯ ಗೌರವಕ್ಕೆ ಧಕ್ಕೆ) ಅಡಿಯಲ್ಲಿ ಅಪರಾಧ ಎಸಗಿರುವುದಾಗಿ ಆದೇಶ ಹೊರಡಿಸಿತ್ತು.
ವಿಚಾರಣಾ ನ್ಯಾಯಾಲಯದ ಈ ತೀರ್ಪನ್ನು ಪ್ರಶ್ನಿಸಿ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಮಹಿಳೆಯ ಗೌರವಕ್ಕೆ ಧಕ್ಕೆ ತರುವ ಅಪರಾಧಕ್ಕೆ ಸಂಬಂಧಿಸಿದ ಐಪಿಸಿಯ ಸೆಕ್ಷನ್ 354ರ ಅಡಿಯಲ್ಲಿ ಪ್ರಕರಣ ದಾಖಲಿಸುವ ವಿಚಾರಣಾ ನ್ಯಾಯಾಲಯದ ನಿರ್ಧಾರವನ್ನು ಪ್ರಶ್ನಿಸಿದ್ದರು. ಪ್ರಕರಣದಲ್ಲಿ 2022ರ ಮಾರ್ಚ್ 19ರ ನ್ಯಾಯಾಲಯದ ಆದೇಶವನ್ನು ಪಾಲಿಸಿಲ್ಲ. ದೂರನ್ನು ದಾಖಲಿಸುವ ಸಮಯದಲ್ಲಿ ವಿಚಾರಣಾ ನ್ಯಾಯಾಲಯವು ದೂರುದಾರರ ಕಡೆಯಿಂದ ಯಾವುದೇ ಸಾಕ್ಷಿ ಹೇಳಿಕೆಗಳನ್ನು ತೆಗೆದುಕೊಂಡಿಲ್ಲ ಎಂದು ಅವರು ಹೇಳಿದ್ದರು.
ಇದನ್ನೂ ಓದಿ: ವಿಚ್ಛೇದನ; ಪತ್ನಿಯೇ ಪತಿಗೆ 5 ಸಾವಿರ ರೂ. ಜೀವನಾಂಶ ಕೊಡಲು ಕೋರ್ಟ್ ಆದೇಶ!
ದೂರಿನಲ್ಲಿನ ಆರೋಪಗಳು ಐಪಿಸಿಯ ಸೆಕ್ಷನ್ 354ರ ಅಡಿಯಲ್ಲಿನ ಅಪರಾಧವನ್ನು ಸಾಬೀತುಪಡಿಸುವುದಿಲ್ಲ ಎಂದು ಪತಿಯ ಪರವಾಗಿ ವಾದಿಸುವ ವಕೀಲರು ತಿಳಿಸಿದ್ದರು. ಜತೆಗೆ ಮ್ಯಾಜಿಸ್ಟ್ರೇಟ್ ಯಾವುದೇ ಸಾಕ್ಷಿ ಹೇಳಿಕೆಯನ್ನು ದಾಖಲಿಸಿಲ್ಲ ಎಂದು ಅವರು ನ್ಯಾಯಾಲಯದ ಗಮನ ಸೆಳೆದಿದ್ದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್, ದೂರು ಐಪಿಸಿ ಸೆಕ್ಷನ್ 323ರ ಅಡಿಯಲ್ಲಿ ನೋವನ್ನುಂಟು ಮಾಡಿದ ಅಪರಾಧವನ್ನು ದೃಢಪಡಿಸುತ್ತದೆಯಾದರೂ, ಮಹಿಳೆಯ ಗೌರವಕ್ಕೆ ಧಕ್ಕೆ ತರುವುದನ್ನು ಒಳಗೊಂಡಿರುವ ಸೆಕ್ಷನ್ 354 ಐಪಿಸಿ ಅಡಿಯಲ್ಲಿ ಅಪರಾಧ ಎಸಗಿರುವುದು ಕಂಡು ಬಂದಿಲ್ಲ ಎಂದು ಹೇಳಿದೆ. ಕೊನೆಯಲ್ಲಿ ಹೈಕೋರ್ಟ್, ಕಾನೂನಿನ ಪ್ರಕಾರ ಮುಂದುವರಿಯುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ