Site icon Vistara News

Smriti Irani: ಸಂಬಳ ಬಾಕಿ ಇಟ್ಟು ಸತಾಯಿಸಿದ ಅಧಿಕಾರಿ, ಶಿಕ್ಷಕಿಗೆ ಸ್ಮೃತಿ ಇರಾನಿ ನೆರವು

smrithi irani

smrithi irani

ನವದೆಹಲಿ: ನಿವೃತ್ತ ಶಿಕ್ಷಕರಿಗೆ ವೇತನ ಪಾವತಿಯಾಗದ ಕುರಿತು ದೂರು ಸ್ವೀಕರಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani), ಶಿಕ್ಷಣ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು, ಬಾಕಿ ಇರುವ ಎಲ್ಲ ವೇತನವನ್ನು ತಕ್ಷಣ ಬಿಡುಗಡೆಗೊಳಿಸುವಂತೆ ನಿರ್ದೇಶನ ನೀಡಿದರು. ತಮ್ಮ ಸಂಸದೀಯ ಕ್ಷೇತ್ರ ಅಮೇಥಿಗೆ ಮೂರು ದಿನಗಳ ಭೇಟಿ ನೀಡಿದ್ದ ಅವರು ನಿವೃತ್ತ ಶಿಕ್ಷಕರ ಕುಂದು ಕೊರತೆಗಳನ್ನು ಆಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಶುಕ್ರವಾರ (ಡಿಸೆಂಬರ್‌ 29) ನಡೆದ ಕಾರ್ಯಕ್ರಮದಲ್ಲಿ ಸ್ಮೃತಿ ಇರಾನಿ ಅವರನ್ನು ನಿವೃತ್ತ ಶಾಲಾ ಶಿಕ್ಷಕರ ಗುಂಪು ಭೇಟಿಯಾಗಿ ತಮ್ಮ ಕುಂದುಕೊರತೆಗಳ ಬಗ್ಗೆ ಹೇಳಿಕೊಂಡರು. ಈ ವೇಳೆ ಅವರು ವೇತನ ಬಾಕಿ ಇರುವ ಬಗ್ಗೆ ಪ್ರಸ್ತಾವಿಸಿದರು. ತಕ್ಷಣ ಶಿಕ್ಷಣ ಅಧಿಕಾರಿ ಕರೆ ಮಾಡಿದ ಸ್ಮೃತಿ ಇರಾನಿ ಬಾಕಿ ಇರುವ ಎಲ್ಲ ಎಲ್ಲ ವೇತನವನ್ನು ಪಾವತಿಸುವಂತೆ ನಿರ್ದೇಶನ ನೀಡಿರುವ ವಿಡಿಯೊ ವೈರಲ್ ಆಗಿದೆ.

ʼʼನಿಮ್ಮ ಬಳಿ ಯಾವುದೇ ಪ್ರಕರಣ ಇತ್ಯರ್ಥಗೊಳಿಸಲು ಬಾಕಿ ಇದ್ದರೆ ಅದನ್ನು ಇಂದೇ ತೆರವುಗೊಳಿಸಿ” ಎಂದು ಸ್ಮೃತಿ ಇರಾನಿ ಅಧಿಕಾರಿಗೆ ಹೇಳಿದರು. ʼʼಅಮೇಥಿಯಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಸಮಸ್ಯೆಗಳೊಂದಿಗೆ ನೇರವಾಗಿ ತನ್ನ ಬಳಿಗೆ ಬರಬಹುದುʼʼ ಎಂದೂ ಸಚಿವೆ ತಿಳಿಸಿದರು. “ಅಧಿಕಾರಿಗಳು ಮಾನವೀಯತೆಯಿಂದ ವರ್ತಿಸಬೇಕು. ಇದು ಅಮೇಥಿ. ಇಲ್ಲಿನ ಪ್ರತಿಯೊಬ್ಬ ನಾಗರಿಕನಿಗೂ ನ್ಯಾಯ ಸಿಗುವಂತಾಗಬೇಕು” ಎಂದು ಅವರು ಹೇಳಿದರು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಯೋಗಿ ಆದಿತ್ಯನಾಥ್‌ ನೇತೃತ್ವದ ಸರ್ಕಾರ ಕೂಡ ಶಿಕ್ಷಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತಿದೆ. ಹೀಗಾಗಿ ನೀವು ಶೀಘ್ರ ಕಾರ್ಯ ಪ್ರವೃತ್ತರಾಗಿ ಎಂದು ಸ್ಮೃತಿ ಇರಾನಿ ಅಧಿಕಾರಿಗಳಿಗೆ ಸೂಚಿಸಿದರು.

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಮೂರು ದಿನಗಳ ಅಮೇಥಿ ಪ್ರವಾಸದ ವೇಳೆ ರಾಮ್‌ದೇವ್‌ಪುರ, ಮುನ್ಶಿಗಂಜ್, ಸರಾಯ್ ಖೇಮಾ, ಲೋನಿಯಾಪುರ್ ಮತ್ತು ಪಿಥಿಪುರದಲ್ಲಿ ಸಾರ್ವಜನಿಕ ಸಂವಾದ ನಡೆಸಿ ಜನರ ಸಮಸ್ಯೆಗಳನ್ನು ಆಲಿಸಿ ಇದನ್ನು ಪರಿಹರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಒಳಚರಂಡಿ ಸಮಸ್ಯೆ

ಮುನ್ಶಿಗಂಜ್‌ನಲ್ಲಿ ಸಂವಾದ ನಡೆಸುವ ವೇಳೆ ಗ್ರಾಮಸ್ಥರು ತಮ್ಮ ಪ್ರದೇಶದಲ್ಲಿನ ಒಳಚರಂಡಿ ಸಮಸ್ಯೆಯ ಬಗ್ಗೆ ಗಮನ ಸೆಳೆದರು. “ರಾಹುಲ್ ಗಾಂಧಿ ಇಲ್ಲಿ 15 ವರ್ಷಗಳಿಂದ ಸಂಸದರಾಗಿದ್ದರೂ ಈ ಬಗ್ಗೆ ಗಮನ ಹರಿಸಿಲ್ಲ. ಅವರು ಅಭಿವೃದ್ಧಿಯ ಬಗ್ಗೆ ಯೋಚಿಸಲಿಲ್ಲ. ಅವರು ಮುನ್ಶಿಗಂಜ್‌ನಲ್ಲಿ ತಮ್ಮ ಅತಿಥಿ ಗೃಹವನ್ನು ಮಾತ್ರ ನಿರ್ಮಿಸಿದ್ದಾರೆʼʼ ಎಂದು ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: LGBT community: ಯಾವ ಸಲಿಂಗಕಾಮಿಗೆ ಋತುಚಕ್ರವಿದೆ ಹೇಳಿ? ಸಚಿವೆ ಸ್ಮೃತಿ ಇರಾನಿ ಪ್ರಶ್ನೆ

“ಅವರ ಸರ್ಕಾರ ಕೇಂದ್ರದಲ್ಲಿ 10 ವರ್ಷಗಳ ಕಾಲ ಆಡಳಿತದಲ್ಲಿದ್ದರೂ ಅಮೇಥಿಯ ಅಭಿವೃದ್ಧಿಯ ಬಗ್ಗೆ ಯೋಚಿಸಲಿಲ್ಲ. ಇಲ್ಲಿ ಕೆಲಸವನ್ನು ಕಾಗದದ ಮೇಲೆ ಮಾತ್ರ ಮಾಡಲಾಗುತ್ತಿತ್ತು. ರಾಹುಲ್ ಗಾಂಧಿಗೆ ಅಮೇಥಿಯಲ್ಲಿ ಸರಿಯಾಗಿ ಚರಂಡಿ ನಿರ್ಮಿಸಲು ಸಹ ಸಾಧ್ಯವಾಗಲಿಲ್ಲ” ಎಂದು ಅವರು ದೂರಿದರು. ಡಿಸೆಂಬರ್‌ 30 (ಇಂದು)ರಂದು ಕೂಡ ಅವರು ಕ್ಷೇತ್ರದಲ್ಲಿ ಪ್ರವಾಸವನ್ನು ಮುಂದುವರಿಸಿದ್ದಾರೆ. ಈ ಹಿಂದಿನ ಯೋಜನೆಯಂತೆ ಅವರು ಡಿಸೆಂಬರ್‌ 29ರಂದು ದೆಹಲಿಗೆ ಮರಳಬೇಕಿತ್ತು. ಆದರೆ ಅವರು ಅಮೇಥಿಯಲ್ಲಿ ಜನರ ಭೇಟಿ ಮಾಡಲು ನಿರ್ಧರಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version