Site icon Vistara News

Smriti Irani VS Rahul Gandhi: ಇಂದು ಅಮೇಥಿಯಲ್ಲಿ ಭಯ್ಯಾ VS ದೀದಿ; ಲೋಕಸಭೆ ಚುನಾವಣೆಗೆ ಪೀಠಿಕೆ

Smrithi Irani

ಲಖನೌ: ಉತ್ತರಪ್ರದೇಶದ ಅಮೇಥಿ (Amethi) ಲೋಕಸಭೆ ಕ್ಷೇತ್ರ ಸೋಮವಾರ ಹೈ ಪ್ರೊಫೈಲ್‌ ರಾಜಕೀಯ ಹಣಾಹಣಿಗೆ ಸಿದ್ಧವಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಮತ್ತು ಬಿಜೆಪಿ ನಾಯಕಿ, ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ಇಬ್ಬರೂ ಒಂದೇ ದಿನದಲ್ಲಿ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ. ಅವರಿಬ್ಬರೂ ಈ ಬಾರಿ ಚುನಾವಣೆಯಲ್ಲಿ ಮತ್ತೆ ಸಂಸತ್ತಿಗೆ ಇದೇ ಕ್ಷೇತ್ರದಲ್ಲಿ ಮುಖಾಮುಖಿಯಾಗಲಿದ್ದಾರೆ ಎಂಬ ಊಹಾಪೋಹ ಜೋರಾಗಿದೆ.

2019ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸ್ಮೃತಿ ಇರಾನಿ, ಮೋದಿ ಅಲೆಯಲ್ಲಿ ರಾಹುಲ್ ಗಾಂಧಿ ಅವರನ್ನು ಸೋಲಿಸಿ ಅಮೇಥಿಯನ್ನು ಗೆದ್ದಿದ್ದರು. 2022ರ ಉತ್ತರಪ್ರದೇಶ ಚುನಾವಣೆ ನಂತರ ಇದೇ ಮೊದಲ ಬಾರಿಗೆ ಇಬ್ಬರು ನಾಯಕರು ಒಂದೇ ದಿನ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಈ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಕೇವಲ ಮೂರು ಬಾರಿ ಸೋತಿದೆ.

ಕಾಂಗ್ರೆಸ್‌ನ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಭಾಗವಾಗಿ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಅಮೇಥಿಗೆ ಪ್ರವೇಶಿಸಲಿದ್ದರೆ, ಇರಾನಿ ತಮ್ಮ ಜನಸಂವಾದ ವಿಕಾಸ ಯಾತ್ರೆಯ ಭಾಗವಾಗಿ ನಾಲ್ಕು ದಿನಗಳ ಕಾಲ ತಮ್ಮ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ.

“ಖಂಡಿತವಾಗಿಯೂ ಅಮೇಥಿ ಮತ್ತು ರಾಯ್‌ಬರೇಲಿ ನಮಗೆ ಕೇವಲ ಕ್ಷೇತ್ರಗಳಲ್ಲ. ಅವು ನಮ್ಮ ಪಕ್ಷದ ನಾಯಕತ್ವದ ನೆಲೆಗಳು. ಖಂಡಿತವಾಗಿಯೂ ಇಲ್ಲಿಂದ ಗಾಂಧಿ ಕುಟುಂಬದ ಯಾರಾದರೂ ಸ್ಪರ್ಧಿಸುತ್ತಾರೆ” ಎಂದು ಯುಪಿ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರೈ ಹೇಳಿದ್ದಾರೆ. ರಾಹುಲ್‌ ಗಾಂಧಿ ಬರುವ ದಿನವೇ ಅಮೇಥಿಯಲ್ಲಿ ಸ್ಮೃತಿ ಅವರ ಕಾರ್ಯಕ್ರಮವನ್ನು ನಿಗದಿಪಡಿಸಿರುವುದು ಬಿಜೆಪಿ ಪಾಳಯದಲ್ಲಿ ಬೆಳೆಯುತ್ತಿರುವ ಚಡಪಡಿಕೆಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

ಸೋಮವಾರ, ರಾಹುಲ್ ತಮ್ಮ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಭಾಗವಾಗಿ ಪ್ರತಾಪಗಢದಿಂದ ಅಮೇಥಿ ಪ್ರವೇಶಿಸುವ ನಿರೀಕ್ಷೆಯಿದೆ. 2019ರ ಮೊದಲು ಸತತ ಮೂರು ಅವಧಿಗೆ ಅವರನ್ನು ಈ ಕ್ಷೇತ್ರ ಆಯ್ಕೆ ಮಾಡಿದೆ. ಈ ಪ್ರದೇಶದಲ್ಲಿ ಅವರು ರೋಡ್‌ಶೋ ಮತ್ತು ಸಾರ್ವಜನಿಕ ಸಭೆಯನ್ನು ನಡೆಸಲಿದ್ದಾರೆ. ಸ್ಮೃತಿ ಅವರು ತಮ್ಮ ಅಮೇಥಿ ಜನ್ ಸಂವಾದ ವಿಕಾಸ್ ಯಾತ್ರೆಯನ್ನು ಪುನರಾರಂಭಿಸಲಿದ್ದಾರೆ. ಅದರ ಭಾಗವಾಗಿ ಅವರು ಲೋಕಸಭೆ ಕ್ಷೇತ್ರದಲ್ಲಿರುವ ಎಲ್ಲಾ ಐದು ವಿಧಾನಸಭಾ ಕ್ಷೇತ್ರಗಳಾದ್ಯಂತ ಪ್ರವಾಸ ಮಾಡಲಿದ್ದಾರೆ.

ಫುರ್ಸತ್‌ಗಂಜ್ ಬಳಿ ರಾಹುಲ್ ಮತ್ತು ಅವರ ಯಾತ್ರೆಯು ಉತ್ತರಪ್ರದೇಶದಲ್ಲಿ 2019ರಲ್ಲಿ ಕಾಂಗ್ರೆಸ್ ಗೆದ್ದಿರುವ ಏಕೈಕ ಲೋಕಸಭಾ ಕ್ಷೇತ್ರವಾದ ರಾಯ್ ಬರೇಲಿಯನ್ನು ಪ್ರವೇಶಿಸಲಿದೆ. ಸೋನಿಯಾ ಗಾಂಧಿ ಅವರು ರಾಜ್ಯಸಭೆಗೆ ಹೋಗುವ ನಿರ್ಧಾರವನ್ನು ತೆಗೆದುಕೊಂಡ ಬಳಿಕ ಗಾಂಧಿ ಕುಟುಂಬಂದಿಂದ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಈ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ ಎಂಬ ಊಹೆ ದಟ್ಟವಾಗಿದೆ.

ಶನಿವಾರ ಸುಮಾರು 4000 ಮಂದಿಯ ಅಯೋಧ್ಯೆ ಭೇಟಿಗೆ ಬಿಜೆಪಿ ವ್ಯವಸ್ಥೆ ಮಾಡಿದ್ದು, ಹೊಸದಾಗಿ ಉದ್ಘಾಟನೆಗೊಂಡಿರುವ ಅಯೋಧ್ಯೆ ದೇವಸ್ಥಾನಕ್ಕೆ ಭೇಟಿ ನೀಡಲು ಹೆಚ್ಚಿನ ಭೇಟಿಗಳನ್ನು ಏರ್ಪಡಿಸುತ್ತಿದೆ. ಸ್ಮೃತಿ ಅವರು ಫೆಬ್ರವರಿ 22ರಂದು ಅಮೇಥಿಯಲ್ಲಿ ಹೊಸದಾಗಿ ನಿರ್ಮಿಸಿದ ಮನೆಯ ಗೃಹಪ್ರವೇಶ ಕಾರ್ಯಕ್ರಮವನ್ನು ನಡೆಸಲು ಸಿದ್ಧರಾಗಿದ್ದಾರೆ. “ನಾವು ಪ್ರವಾಸಿಗರಲ್ಲ. ನಾವು ನಮ್ಮ ಮಾತನ್ನು ಉಳಿಸಿಕೊಂಡಿದ್ದೇವೆ. ಗೃಹಪ್ರವೇಶದ ನಂತರ ʼದೀದಿʼ ಇಲ್ಲಿ ವಾಸಿಸುತ್ತಾರೆ” ಎಂದು ಅಮೇಥಿಯಲ್ಲಿ ಸ್ಮೃತಿ ಇರಾನಿ ಅವರ ಲೋಕಸಭಾ ಪ್ರತಿನಿಧಿ ವಿಜಯ್ ಗುಪ್ತಾ ಹೇಳಿದ್ದಾರೆ.

2014ರವರೆಗೆ ಇಲ್ಲಿ ರಾಹುಲ್ ಗಾಂಧಿಯನ್ನು ಉಲ್ಲೇಖಿಸಲು ʼಭಯ್ಯಾʼ (bhaiya) ಎಂದು ಬಳಸಲಾಗುತ್ತಿತ್ತು. ಇದೀಗ ಸ್ಮೃತಿ ಅವರನ್ನು ಉಲ್ಲೇಖಿಸಲು ʼದೀದಿʼ (Didi) ಬಳಸಲಾಗುತ್ತಿದೆ.

ಇದನ್ನೂ ಓದಿ: Rahul Gandhi : ಮೋದಿಯನ್ನು ಟೀಕಿಸಲು ಐಶ್ವರ್ಯಾ, ಅಭಿಷೇಕ್ ಬಚ್ಚನ್​ ಎಳೆದು ತಂದ ರಾಹುಲ್ ಗಾಂಧಿ

Exit mobile version