ಉದ್ಯಮ, ಮನರಂಜನೆ, ಕ್ರೀಡೆ, ವೈದ್ಯಕೀಯ, ಕಾನೂನು ಸೇರಿ ವಿವಿಧ ಕ್ಷೇತ್ರಗಳಲ್ಲಿ ಅಲ್ಲದೆ, ತಾಯ್ತನ, ಮನೆ ನಡೆಸುವಲ್ಲೂ ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ, ಅವರ ಬಗ್ಗೆ ಸುದ್ದಿಗಳನ್ನು ನೀಡುವ ಸಂಸ್ಥೆ Women We Admire, ಇದೀಗ ಸ್ಯಾನ್ ಫ್ರಾನ್ಸಿಸ್ಕೋದ 2023ನೇ ಸಾಲಿನ 50 ಸಾಧಕ ಮಹಿಳೆಯರನ್ನು ಗುರುತಿಸಿ, ಪ್ರಶಸ್ತಿ ಘೋಷಣೆ ಮಾಡಿದೆ. ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ Women We Admire, ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಅದರ ಸುತ್ತಲಿನ ಪ್ರದೇಶಗಳ ಮಹಿಳೆಯರನ್ನು ಪ್ರತಿ ವರ್ಷ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡುತ್ತಾರೆ. ಈ Women We Admireನ್ನು ಮಿಂಡಿ ಗ್ರಾಸ್ಮನ್ ಎಂಬುವರು ಮುನ್ನಡೆಸುತ್ತಿದ್ದಾರೆ. ಇವರು ಹೆಲ್ತ್ ಆ್ಯಂಡ್ ಫಿಟ್ನೆಸ್ ಸಂಸ್ಥೆ ಡಬ್ಲ್ಯೂಡಬ್ಲ್ಯೂ ಇಂಟರ್ನ್ಯಾಶನಲ್ನ ಮಾಜಿ ಸಿಇಒ.
Women We Admire ಈ ಸಲ ಗುರುತಿಸಿದ ಸ್ಯಾನ್ಫ್ರಾನ್ಸಿಸ್ಕೋದ 50 ಮಹಿಳಾ ನಾಯಕಿಯರಲ್ಲಿ ಭಾರತದ ಸ್ನೇಹಾ ನರಹಳ್ಳಿ ಕೂಡ ಒಬ್ಬರು. ಸೆಫೊರಾ (SEPHORA) ಸೌಂದರ್ಯ ವಸ್ತುಗಳ ಉತ್ಪಾದಕ ಕಂಪನಿಯ ವೈಸ್ ಪ್ರೆಸಿಡೆಂಟ್ ಮತ್ತು ಪ್ರಾಡಕ್ಟ್ ಹೆಡ್ ಆಗಿದ್ದಾರೆ. ತಂತ್ರಜ್ಞಾನದಲ್ಲಿ ಪಳಗಿದ ನಾಯಕಿ. ಉತ್ಪಾದನೆಯಲ್ಲಿ ನಾವೀನ್ಯತೆ ಮತ್ತು ಸರಳೀಕೃತ ವಿಧಾನವನ್ನು ಅನುಸರಿಸಿ, ಉದ್ಯಮವನ್ನು ಅಭಿವೃದ್ಧಿ ಮಾಡುವಲ್ಲಿ ಪರಿಣತರು. ಹುಟ್ಟಿದ್ದು ಭಾರತದಲ್ಲಿ, ಇವರ ತಂದೆ-ತಾಯಿ ಇಬ್ಬರೂ ಸಾಹಿತಿಗಳು. ಸ್ನೇಹಾ ಕೂಡ ಇತ್ತೀಚೆಗೆ Not the Loudest Person in the Room ಎಂಬ ಹೆಸರಿನ ಪುಸ್ತಕ ಬರೆದಿದ್ದಾರೆ. ಸ್ನೇಹಾ ನರಹಳ್ಳಿ ಅವರು ಈ ಪುಸ್ತಕದಲ್ಲಿ ತಮ್ಮ ಜೀವನ, ತಾವು ಸಾಗಿ ಬಂದ ಹಾದಿಯ ಬಗ್ಗೆಯೇ ಬರೆದಿದ್ದಾರೆ.
ಇದನ್ನೂ ಓದಿ: ಆತಂಕ ನಿಜವಾಯ್ತು! ಉದ್ಯೋಗ ಕಸಿಯುತ್ತಿರುವ ChatGPT, ಚಾಟ್‌ಬಾಟ್ ನಿಯೋಜಿಸುತ್ತಿರುವ ಅಮೆರಿಕನ್ ಕಂಪನಿಗಳು
ಬದಲಾವಣೆ ಮಾಡಬೇಕು ಎಂದು ಹೊರಟಾಗ ಮೊದಲು ಮಾಡಬೇಕಿರುವ ಕೆಲಸ ಅರಿವು ಮೂಡಿಸುವುದು. ಯಾವುದೇ ಕ್ಷೇತ್ರದಲ್ಲಿ ಮಹಿಳೆಯರು ಎದುರಿಸುವ ಪಕ್ಷಪಾತವನ್ನು ತೊಡೆದು ಹಾಕಲು, ಮೊದಲು ಅವರಲ್ಲಿ ಆ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ನಂತರ ಈ ಪಕ್ಷಪಾತವನ್ನು ತೊಡೆದುಹಾಕಲು ಸಾಧ್ಯ ಎಂದು ಅವರು ಹೇಳುತ್ತಾರೆ. ಅಷ್ಟೇ ಅಲ್ಲ, ‘ಕತ್ತಿಗಿಂತಲೂ ಲೇಖನಿ ಹರಿತವಾದ ಆಯುಧ’ ಎಂದು ಅವರು ನಂಬುತ್ತಾರೆ.