Site icon Vistara News

Soldier Missing: ಈದ್‌ ಹಿನ್ನೆಲೆ ರಜೆ ಪಡೆದು ಊರಿಗೆ ತೆರಳಿದ್ದ ಯೋಧ ನಾಪತ್ತೆ; ಕಾರಲ್ಲಿ ರಕ್ತದ ಕಲೆ ಪತ್ತೆ, ತೀವ್ರ ಶೋಧ

Missing Indian Army Soldier found

ಶ್ರೀನಗರ: ಜಮ್ಮು-ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಈದ್‌ ಹಬ್ಬದ ಹಿನ್ನೆಲೆಯಲ್ಲಿ ರಜೆ ಪಡೆದು ಊರಿಗೆ ತೆರಳಿದ್ದ ಭಾರತೀಯ ಸೇನೆಯ ಯೋಧರೊಬ್ಬರು (Soldier Missing) ನಾಪತ್ತೆಯಾಗಿದ್ದಾರೆ. ಜಾವೇದ್‌ ಅಹ್ಮದ್‌ ವಾನಿ (25) ಅವರು ಶನಿವಾರ (ಜುಲೈ 29) ಸಂಜೆಯಿಂದಲೇ ನಾಪತ್ತೆಯಾಗಿದ್ದಾರೆ. ಹಾಗಾಗಿ, ಯೋಧನ ಪತ್ತೆಗಾಗಿ ಭದ್ರತಾ ಸಿಬ್ಬಂದಿಯು ತೀವ್ರ ಕಾರ್ಯಾಚರಣೆ ಆರಂಭಿಸಿದ್ದಾರೆ.

ಕುಲ್ಗಾಮ್‌ ಜಿಲ್ಲೆಯ ಅಚತಾಲ್ ಪ್ರದೇಶದಲ್ಲಿ ಯೋಧನ ಮನೆ ಇದೆ. ಇದೇ ಪ್ರದೇಶದಿಂದ ಕೆಲವೇ ಕಿಲೋಮೀಟರ್‌ ದೂರದಲ್ಲಿ ಯೋಧನ ಕಾರು ಪತ್ತೆಯಾಗಿದ್ದು, ಕಾರಿನಲ್ಲಿ ರಕ್ತದ ಕಲೆ ಕಾಣಿಸಿಕೊಂಡಿದೆ. ಜಮ್ಮು-ಕಾಶ್ಮೀರ ಲೈಟ್‌ ಇನ್‌ಫ್ಯಾಂಟ್ರಿ ರೆಜಿಮೆಂಟ್‌ ಸಿಬ್ಬಂದಿಯಾಗಿರುವ ಇವರು, ಈದ್‌ ಹಬ್ಬದ ಹಿನ್ನೆಲೆಯಲ್ಲಿ ರಜೆ ಪಡೆದು ಮನೆಗೆ ತೆರಳಿದ್ದರು. ಇವರು ಸೋಮವಾರ (ಜುಲೈ 31) ಡ್ಯೂಟಿಗೆ ಹಾಜರಾಗಬೇಕಿತ್ತು.

ದುಃಖ ತೋಡಿಕೊಂಡ ಯೋಧನ ಕುಟುಂಬಸ್ಥರು

ಜಾವೇದ್‌ ಅಹ್ಮದ್‌ ವಾನಿ ಅವರು ಶನಿವಾರ ಸಂಜೆ ದಿನಸಿ ತರಲು ಚೌವಾಲ್‌ಗಾಮ್‌ಗೆ ತೆರಳಿದ್ದರು. ದಿನಸಿ ಖರೀದಿಸಿ ಕಾರಿನಲ್ಲಿ ಮನೆಗೆ ವಾಪಸ್‌ ಬರುವಾಗ ರಾತ್ರಿ ಎಂಟು ಗಂಟೆ ಸುಮಾರಿಗೆ ಇವರನ್ನು ಅಪಹರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅದರಲ್ಲೂ, ಅನ್‌ಲಾಕ್‌ ಆಗಿರುವ ಕಾರಿನಲ್ಲಿ ಯೋಧನ ಚಪ್ಪಲಿ ಹಾಗೂ ರಕ್ತದ ಕಲೆ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಇದನ್ನೂ ಓದಿ: Poonch terror attack: ನಾನೂ ತಂದೆಯಂತೆ ಯೋಧನಾಗುವೆ; ಹುತಾತ್ಮ ಸೈನಿಕ ಮಂದೀಪ್ ಪುತ್ರನ ಆಸೆ

ಜಾವೇದ್‌ ಅಹ್ಮದ್‌ ವಾನಿ ಅವರನ್ನು ಲಡಾಕ್‌ನಲ್ಲಿ ನಿಯೋಜಿಸಲಾಗಿದೆ. ಆದಾಗ್ಯೂ, ಯೋಧನ ಪತ್ತೆಗೆ ಭದ್ರತಾ ಸಿಬ್ಬಂದಿಯು ಕಾರ್ಯಾಚರಣೆ ನಡೆಸಿದೆ. ಯೋಧನನ್ನು ಉಗ್ರರು ಸೇರಿ ಯಾವುದೇ ದುಷ್ಕರ್ಮಿಗಳು ಅಪಹರಿಸಿರುವ ಕುರಿತು ಪೊಲೀಸರು ಮಾಹಿತಿ ನೀಡಿಲ್ಲ. 2022ರಲ್ಲಿ ಬುದ್ಗಾಮ್‌ ಜಿಲ್ಲೆಯಲ್ಲಿ ಲಷ್ಕರೆ ತಯ್ಬಾ ಉಗ್ರರು ಸಮೀರ್‌ ಅಹ್ಮದ್‌ ಮಲ್ಲಾ ಎಂಬ ಯೋಧನನ್ನು ಅಪಹರಿಸಿ, ಹತ್ಯೆ ಮಾಡಿದ್ದರು.

Exit mobile version