ಶ್ರೀನಗರ: ಕಳೆದ ಕೆಲ ದಿನಗಳಿಂದ ಉಗ್ರರ ದಾಳಿಗೆ ನಲುಗಿ ಹೋಗಿರುವ ಜಮ್ಮು-ಕಾಶ್ಮೀರದಲ್ಲಿ (Jammu Kashmir) ಮತ್ತೊಂದು ದುರಂತ ಸಂಭವಿಸಿದೆ. ರಾಜೌರಿ ಜಿಲ್ಲೆಯಲ್ಲಿ ಗುರುವಾರ (ಜೂನ್ 13) ಸೇನೆಯ ವಾಹನವೊಂದು (Army Vehicle) ಕಂದಕಕ್ಕೆ ಉರಳಿ ಒಬ್ಬ ಯೋಧ ಮೃತಪಟ್ಟಿದ್ದರೆ, ನಾಲ್ವರು ಸೈನಿಕರು ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಯೋಧರನ್ನು ಸೇನೆಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ನೌಶೇರಾ ಸೆಕ್ಟರ್ ಬಳಿಯ ಗಡಿ ನಿಯಂತ್ರಣ ರೇಖೆಗೆ ಸಮೀಪದಲ್ಲಿರುವ ಭವಾನಿ ಗ್ರಾಮದ ಮೂಲಕ ಸೇನಾ ವಾಹನವು ಗುರುವಾರ ಸಂಜೆ ತೆರಳುತ್ತಿತ್ತು. ವಾಹದಲ್ಲಿ ಐವರು ಯೋಧರು ಇದ್ದರು. ಇದೇ ವೇಳೆ, ವಾಹನವು ಚಾಲಕನ ನಿಯಂತ್ರಣ ತಪ್ಪಿದ್ದು, ಕಂದಕಕ್ಕೆ ಉರುಳಿದೆ. ದುರಂತ ಸಂಭವಿಸುತ್ತಲೇ ಐವರೂ ಯೋಧರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಅಷ್ಟೊತ್ತಿಗಾಗಲೇ ಒಬ್ಬ ಯೋಧ ಮೃತಪಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಗುರುವಾರವೇ ಶ್ರೀನಗರದಲ್ಲಿ ಸಿಆರ್‌ಪಿಎಫ್ ವಾಹನವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ವಾಹನ ಸುಟ್ಟಿತ್ತು. ಅದೃಷ್ಟವಶಾತ್, ವಾಹನದಲ್ಲಿದ್ದ ಯೋಧರಿಗೆ ಯಾವುದೇ ತೊಂದರೆ ಆಗಿರಲಿಲ್ಲ.
Army Soldier Killed, 4 Injured As Army Vehicle Falls Into Gorge in Rajouri, J&K
— Vivek Singh (@VivekSi85847001) June 13, 2024
Investigation on (Daily Excelsior)
Something fishy, let's wait for official Confirmation. pic.twitter.com/6P1psBIzRf
ಕಾಶ್ಮೀರದಲ್ಲಿ ಇತ್ತೀಚೆಗೆ ಉಗ್ರರ ಉಪಟಳ ಜಾಸ್ತಿಯಾಗಿದೆ. ಹಾಗಾಗಿ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿ ಹಲವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದು, ಕಾಶ್ಮೀರದಲ್ಲಿ ಉಗ್ರರ ನಿರ್ನಾಮಕ್ಕೆ ಸೂಚಿಸಿದ್ದಾರೆ. ಹಾಗೆಯೇ, ಎಲ್ಲ ಸೈನಿಕರನ್ನು ಗಡಿಯಲ್ಲಿ ನಿಯೋಜಿಸುವ ಮೂಲಕ ಉಗ್ರರಿಗೆ ತಿರುಗೇಟು ನೀಡುವಂತೆ ಸೂಚನೆ ನೀಡಿದ್ದಾರೆ.
ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಎನ್‌ಎಸ್‌ಎ ಅಜಿತ್ ದೋವಲ್ ಸೇರಿ ಹಲವು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮೋದಿ ಅವರು ಕಣಿವೆಯ ಭದ್ರತೆಯನ್ನು ಪರಿಶೀಲಿಸಿದರು. ಕಣಿವೆಯಲ್ಲಿ ಶಾಂತಿ ಸ್ಥಾಪನೆಯಾಗಬೇಕು. ಉಗ್ರರ ದಾಳಿಗಳನ್ನು ನಿಗ್ರಹಿಸಬೇಕು. ಗಡಿಯುದ್ದಕ್ಕೂ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು. ಸೂಕ್ಷ್ಮ ನೆಲೆಗಳಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಬೇಕು ಎಂದು ಸೂಚಿಸುವ ಜತೆಗೆ ಆಧುನಿಕ ತಂತ್ರಜ್ಞಾನದ ಬಳಕೆ, ಉಗ್ರರ ನಿಗ್ರಹಕ್ಕೆ ಇದುವರೆಗೆ ತೆಗೆದುಕೊಂಡ ಕ್ರಮಗಳ ಕುರಿತು ಕೂಡ ಮೋದಿ ಅವರು ಪರಿಶೀಲನೆ ನಡೆಸಿದರು ಎಂದು ತಿಳಿದುಬಂದಿದೆ.
ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಜೂನ್ 9ರಂದು ನಡೆದ ಭಯೋತ್ಪಾದಕರ ಗುಂಡಿನ ದಾಳಿಯ ಸಂದರ್ಭದಲ್ಲಿ, ಪುಟ್ಟ ಕಂದಮ್ಮನೂ ಸೇರಿ 10 ಮಂದಿ ಮೃತಪಟ್ಟಿದ್ದಾರೆ. ಜಮ್ಮು-ಕಾಶ್ಮೀರದಲ್ಲಿರುವ ಶಿವ ಖೋರಿ ದೇವಸ್ಥಾನಕ್ಕೆ ಹಿಂದು ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಪಾಕಿಸ್ತಾನದ ಲಷ್ಕರೆ ತಯ್ಬಾ ಉಗ್ರ ಸಂಘಟನೆಯು ದಾಳಿ ನಡೆಸಿದ್ದು, ಉಗ್ರನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಅಲ್ಲದೆ, ಉಗ್ರನ ಕುರಿತು ಸುಳಿವು ನೀಡಿದವರಿಗೆ 20 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ: Terrorist Attack : ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ; ಯೋಧ ಹುತಾತ್ಮ , ಆರು ಯೋಧರಿಗೆ ಗಾಯ