ಪಣಜಿ: ಗೋವಾದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಹರಿಯಾಣ ಬಿಜೆಪಿ ನಾಯಕಿ ಸೋನಾಲಿ ಫೋಗಟ್ (Sonali Phogat Death) ಅವರ ಮರಣೋತ್ತರ ವರದಿ ಲಭ್ಯವಾದ ಬೆನ್ನಲ್ಲೇ ನಾಯಕಿಯ ಇಬ್ಬರು ಆಪ್ತರನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ. ಹೃದಯಾಘಾತದಿಂದ ಸೋನಾಲಿ ಅವರು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದ್ದರೂ, ಪೋಸ್ಟ್‌ಮಾರ್ಟಮ್ ವರದಿ ಪ್ರಕಾರ ಅವರ ಮೈಮೇಲೆ ಗಾಯಗಳು ಇರುವುದು ತಿಳಿದುಬಂದ ಹಿನ್ನೆಲೆಯಲ್ಲಿ ಅವರ ಆಪ್ತರನ್ನು ಬಂಧಿಸಲಾಗಿದೆ.
ಸುಧೀರ್ ಸಾಗ್ವನ್ ಹಾಗೂ ಸುಖವಿಂದರ್ ವಾಸಿ ಬಂಧಿತ ಆರೋಪಿಗಳಾಗಿದ್ದಾರೆ. ಫೋಗಟ್ ಸಾವಿನ ಪ್ರಕರಣದಲ್ಲಿ ಇವರನ್ನು ಆರೋಪಿಗಳನ್ನಾಗಿಸಲಾಗಿದೆ. ಫೋಗಟ್ ಅವರ ಸಹೋದರ ರಿಂಕು ಧಾಕಾ ನೀಡಿದ ದೂರಿನ ಅನ್ವಯ ಆರೋಪಿಗಳನ್ನು ಬಂಧಿಸಲಾಗಿದೆ. ಆಗಸ್ಟ್ ೨೨ರಂದು ಫೋಗಟ್ ಅವರು ಗೋವಾದಲ್ಲಿದ್ದಾಗ ಸಾಗ್ವನ್ ಹಾಗೂ ಸುಖವಿಂದರ್ ಅವರ ಜತೆಗಿದ್ದರು. ಹಾಗಾಗಿ ಇವರ ಮೇಲೆ ಶಂಕೆ ವ್ಯಕ್ತವಾಗಿದೆ.
ಆಗಸ್ಟ್ ೨೩ರಂದು ಬೆಳಗ್ಗೆ ಗೋವಾದಲ್ಲಿ ಸೋನಾಲಿ ಫೋಗಟ್ ಮೃತಪಟ್ಟಿದ್ದರು. ಉತ್ತರ ಗೋವಾದ ಅಂಜುನಾದಲ್ಲಿರುವ ಆಸ್ಪತ್ರೆ ವೈದ್ಯರು ಇವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಿದ್ದರು. ಆದರೆ, ಮರಣೋತ್ತರ ವರದಿ ಬಳಿಕ ಇವರ ದೇಹದ ಮೇಲೆ ಗಾಯಗಳಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮೊದಲು ಟಿಕ್‌ಟಾಕ್ ವಿಡಿಯೊಗಳಿಂದ ಖ್ಯಾತಿ ಗಳಿಸಿದ ಅವರು ಬಿಗ್‌ಬಾಸ್‌ನಲ್ಲೂ ಭಾಗವಹಿಸಿದ್ದರು. ಬಳಿಕ ಬಿಜೆಪಿ ಸೇರ್ಪಡೆಯಾಗಿದ್ದರು.
ಇದನ್ನೂ ಓದಿ | ಸೋನಾಲಿ ಫೋಗಟ್ ಮೈಮೇಲೆ ಇವೆ ಗಾಯಗಳು; ಬಾಡಿಗಾರ್ಡ್, ಪಿಎ ವಿರುದ್ಧ ಕೇಸ್ ದಾಖಲು