ನವ ದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಅವರು ಕೋವಿಡ್‌ನಿಂದ ಚೇತರಿಸಿಕೊಂಡಿದ್ದು, ಅವರನ್ನು ಸೋಮವಾರ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಮಾಡಲಾಗಿದೆ.
ಅವರು ಕೋವಿಡ್ ಚಿಕಿತ್ಸೆಗಾಗಿ ಜೂನ್ 12ರಂದು ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದರು. ಸೋನಿಯಾ ಅವರಿಗೆ ಮನೆಯಲ್ಲಿ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ಜೂನ್ 1ರಂದು ಅವರಲ್ಲಿ ಕೊರೊನಾ ವೈರಸ್ ಪತ್ತೆಯಾಗಿತ್ತು. ಈ ನಡುವೆ, ಜೂನ್ 23ರಂದು ಅವರು ಜಾರಿ ನಿರ್ದೇಶನಾಲಯದ (ಇಡಿ) ಮುಂದೆ ನ್ಯಾಷನಲ್ ಹೆರಾಲ್ಡ್ ಹಣಕಾಸು ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗಬೇಕಿದೆ.
ರಾಹುಲ್‌ಗೆ ಮಂಗಳವಾರವೂ ಬುಲಾವ್
ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮುಂದಿನ ಸುತ್ತಿನ ಇಡಿ ವಿಚಾರಣೆಗಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಮಂಗಳವಾರ ಆಗಮಿಸಲು ಮತ್ತೆ ಸಮನ್ಸ್ ನೀಡಲಾಗಿದೆ.
ಇದನ್ನೂ ಓದಿ: ವಿಸ್ತಾರ Explainer | ಕಾಂಗ್ರೆಸ್ ಕೊರಳಿಗೆ ಮತ್ತೆ ಸುತ್ತಿಕೊಂಡಿದೆ ನ್ಯಾಷನಲ್ ಹೆರಾಲ್ಡ್ ಉರುಳು!
ನಾಲ್ಕನೇ ದಿನದ ವಿಚಾರಣೆಗಾಗಿ ಸೋಮವಾರ ರಾಹುಲ್ ಗಾಂಧಿ ಅವರು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾದರು. ಅವರ ವಿಚಾರಣೆ ಇನ್ನೂ ನಡೆಯುತ್ತಿದೆ. ಅವರ 52ನೇ ಹುಟ್ಟುಹಬ್ಬ ಭಾನುವಾರ ಇತ್ತು. ಸೋಮವಾರ ರಾಹುಲ್ ತಮ್ಮ Z+ ವರ್ಗದ CRPF ಭದ್ರತಾ ಬೆಂಗಾವಲಿನೊಂದಿಗೆ ಮಧ್ಯ ದೆಹಲಿಯ APJ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ED ಪ್ರಧಾನ ಕಚೇರಿಗೆ 11.05ಕ್ಕೆ ಆಗಮಿಸಿದರು.
ಕಳೆದ ವಾರದಂತೆ ಈ ಪ್ರದೇಶದಲ್ಲಿ ಸೆಕ್ಷನ್ 144 ವಿಧಿಸಲಾಗಿತ್ತು. ಇಡಿ ಕಚೇರಿಯ ಸುತ್ತಲೂ ಪೊಲೀಸ್ ಮತ್ತು ಅರೆಸೈನಿಕ ಸಿಬ್ಬಂದಿಯ ಬೃಹತ್ ತುಕಡಿ ನಿಯೋಜಿಸಲಾಗಿತ್ತು. ಇಡಿ ಕ್ರಮ ಮತ್ತು ಕೇಂದ್ರದ ಅಗ್ನಿಪಥ್ ರಕ್ಷಣಾ ನೇಮಕಾತಿ ಯೋಜನೆಯ ವಿರುದ್ಧ ಹಿರಿಯ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದರು.
ಕಳೆದ ನಾಲ್ಕು ದಿನಗಳಲ್ಲಿ ರಾಹುಲ್ ಇಡಿ ಕಚೇರಿಯಲ್ಲಿ ಸುಮಾರು 35 ಗಂಟೆಗಳ ಕಾಲ ವಿಚಾರಣೆಯಲ್ಲಿ ಕಳೆದಿದ್ದಾರೆ. ಅವರ ಹೇಳಿಕೆಯನ್ನು ಅಕ್ರಮ ಹವಾಲಾ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ದಾಖಲಿಸಲಾಗಿದೆ.