Site icon Vistara News

Grand Alliance | ಸೋನಿಯಾ – ಲಾಲು – ನಿತೀಶ್ ಭೇಟಿ, ರಾಷ್ಟ್ರ ರಾಜಕಾರಣದಲ್ಲೂ ಮತ್ತೆ ಮಹಾಮೈತ್ರಿ?

Grand Alliance

ಪಟನಾ: ಮುಂಬರುವ ಲೋಕಸಭೆ ಚುನಾವಣೆ ಹೊತ್ತಿಗೆ ರಾಷ್ಟ್ರ ರಾಜಕಾರಣದಲ್ಲಿ ಮತ್ತೆ ಮಹಾಮೈತ್ರಿ (Grand Alliance) ತಲೆ ಎತ್ತಲಿದೆಯಾ? ಇಂಥದೊಂದು ಪ್ರಶ್ನೆ ಮೂಡಲು ಕಾರಣವಿದೆ. ಜೆಡಿಯು ನಾಯಕ ಹಾಗೂ ಬಿಹಾರ ಸಿಎಂ ನಿತೀಶ್ ಕುಮಾರ್ ಹಾಗೂ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರು ಭಾನುವಾರ (ಸೆ.25) ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಲಿದ್ದಾರೆ. ಸುಮಾರು 6 ವರ್ಷಗಳ ಬಳಿಕ ಈ ನಾಯಕರ ಪರಸ್ಪರ ಭೇಟಿಯಾಗುತ್ತಿರುವುದು ಮಹತ್ವ ಪಡೆದುಕೊಂಡಿದೆ. ಮತ್ತೊಂದು ಮೂಲದ ಪ್ರಕಾರ, ಈ ಸಭೆಯಲ್ಲಿ ರಾಹುಲ್. ಗಾಂಧಿ ಇರಬೇಕೆಂದು ಲಾಲು ಮತ್ತು ನಿತೀಶ್ ಬಯಸಿದ್ದಾರೆ ಎನ್ನಲಾಗುತ್ತಿದೆ. ಆದರೆ, ಅವರು ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಹಾಗಾಗಿ, ಅವರು ಭಾಗವಹಿಸುವುದು ಸಾಧ್ಯವಾಗುತ್ತಿಲ್ಲ.

ಆದರೆ ಕೆಲವು ಮೂಲಗಳ ಪ್ರಕಾರ ಇದು ಕೇವಲ ಸೌಜನ್ಯದ ಭೇಟಿ ಎಂದು ಹೇಳಲಾಗುತ್ತಿದೆ. ಹಾಗಿದ್ದೂ, ರಾಷ್ಟ್ರಮಟ್ಟದಲ್ಲಿ ಮಹಾ ಮೈತ್ರಿಯನ್ನು ಗಟ್ಟಿಗೊಳಿಸುವುದು ಸೇರಿದಂತೆ ರಾಜಕಾರಣದ ಗಂಭೀರ ವಿಷಯಗಳ ಚರ್ಚೆ ನಡೆಯುವುದನ್ನು ಅಲ್ಲಗಳೆಯುವಂತಿಲ್ಲ ಎಂದೂ ಹೇಳಲಾಗುತ್ತಿದೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ಆಯ್ಕೆಯ ಪ್ರಕ್ರಿಯೆ ಆರಂಭವಾಗುವ ಹೊತ್ತಿನಲ್ಲೇ ಈ ನಾಯಕರಿಬ್ಬರು ಸೋನಿಯಾ ಗಾಂಧಿ ಅವರನ್ನು ಭೇಟಿಯಾಗುತ್ತಿರುವುದಕ್ಕೆ ಹೆಚ್ಚಿನ ಮಹತ್ವ ಲಭಿಸಿದೆ.

ಬಿಹಾರದಲ್ಲಿ ಬಿಜೆಪಿ ಜತೆಗಿನ ಮೈತ್ರಿ ತೊರೆದು ಆರ್‌ಜೆಡಿ ಜತೆಗೂಡಿ ಸರ್ಕಾರ ರಚಿಸಿದ ಬಳಿಕ ನಿತೀಶ್ ಕುಮಾರ್ ಇತ್ತೀಚಿನ ಕೆಲವು ದಿನಗಳಲ್ಲಿ ಪ್ರತಿಪಕ್ಷಗಳ ಹಲವು ನಾಯಕರನ್ನು ಭೇಟಿ ಮಾಡಿ, ಮಾತುಕತೆ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ನಿತೀಶ್ ಕುಮಾರ್ ಅವರು, ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಸಿಂಗ್ ಯಾದವ್ ಅವರ ಜತೆಗೆ ಮಾತುಕತೆ ನಡೆಸಿದ್ದಾರೆ.

2024ರ ಲೋಕಸಭೆ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಲಿದ್ದಾರೆಂಬ ಮಾತುಗಳಿವೆ. ಈ ಹಿನ್ನೆಲೆಯಲ್ಲೇ ನಿತೀಶ್ ಕುಮಾರ್ ಅವರು ನಾನಾ ಪಕ್ಷದ ಮುಖಂಡರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಕೆಲವು ದಿನಗಳ ಹಿಂದೆ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರನ್ನೂ ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಇದನ್ನೂ ಓದಿ | ನಿತೀಶ್ ಸಂಪುಟದಲ್ಲಿ ನಾನು ಸಚಿವನಾಗಲೇಬೇಕು; ಸೋನಿಯಾ ಗಾಂಧಿಗೆ ಪತ್ರ ಬರೆದ ಕಾಂಗ್ರೆಸ್​ ಶಾಸಕ

Exit mobile version