Site icon Vistara News

Sonia Gandhi: ಭಾವುಕರಾಗಿ ರಾಯ್‌ಬರೇಲಿ ಕ್ಷೇತ್ರದ ಜನತೆಗೆ ಪತ್ರ ಬರೆದ ಸೋನಿಯಾ ಗಾಂಧಿ ಹೇಳಿದ್ದೇನು?

sonia gandhi

Systematic Effort By PM Narendra Modi To Cripple Congress Financially: Sonia Gandhi

ನವದೆಹಲಿ: ಕಾಂಗ್ರೆಸ್‌ ಹಿರಿಯ ನಾಯಕಿ ಸೋನಿಯಾ ಗಾಂಧಿ (Sonia Gandhi) ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿಯುತ್ತಿಲ್ಲ. ಬದಲಾಗಿ ರಾಜಸ್ಥಾನದಿಂದ ಅವರು ರಾಜ್ಯಸಭೆಗೆ ಸ್ಪರ್ಧಿಸುತ್ತಿದ್ದು, ಜೈಪುರದಲ್ಲಿ ನಾಮಪತ್ರ ಕೂಡ ಸಲ್ಲಿಸಿದ್ದಾರೆ. ಈ ಬಗ್ಗೆ ಅವರು ಗುರುವಾರ (ಫೆಬ್ರವರಿ 15) ಉತ್ತರ ಪ್ರದೇಶದ ರಾಯ್‌ಬರೇಲಿ ಜನತೆಗೆ ಮಾಹಿತಿ ನೀಡಿ, ಅನಾರೋಗ್ಯ ಮತ್ತು ವಯಸ್ಸಿನ ಕಾರಣದಿಂದ ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದು ಹೇಳಿದ್ದಾರೆ. ಸೋನಿಯಾ ಗಾಂಧಿ 2004ರಿಂದ ರಾಯ್‌ಬರೇಲಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಈ ವೇಳೆ 77 ವರ್ಷದ ಕಾಂಗ್ರೆಸ್ ನಾಯಕಿ ರಾಯ್‌ಬರೇಲಿ ಕ್ಷೇತ್ರದಲ್ಲಿ ತಮ್ಮ ಕುಟುಂಬದ ಸದಸ್ಯರೊಬ್ಬರು ಸ್ಪರ್ಧಿಸುವ ಸಾಧ್ಯತೆಯ ಬಗ್ಗೆಯೂ ಸುಳಿವುಗಳನ್ನು ನೀಡಿದ್ದಾರೆ.

ಸೋನಿಯಾ ಗಾಂಧಿ ಹೇಳಿದ್ದೇನು?

ಸೋನಿಯಾ ಗಾಂಧಿ ಭಾವುಕರಾಗಿ ರಾಯ್‌ಬರೇಲಿ ಕ್ಷೇತ್ರದ ಜನತೆಗೆ ಸಂದೇಶವೊಂದನ್ನು ನೀಡಿದ್ದಾರೆ. ʼʼನಾನು ಇಂದು ಏನಾಗಿದ್ದೀನೋ ಅದಕ್ಕೆ ಹೆಮ್ಮೆ ಇದೆ. ನಿಮ್ಮಿಂದಾಗಿ ನಾನು ಇಲ್ಲಿ ನಿಂತಿದ್ದೇನೆ. ನಿಮ್ಮ ನಂಬಿಕೆಯನ್ನು ಉಳಿಸಿಕೊಳ್ಳಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸಿದ್ದೇನೆ ಎಂದು ಹೆಮ್ಮೆಯಿಂದ ಹೇಳಬಲ್ಲೆ. ಈಗಿನ ಆರೋಗ್ಯ ಮತ್ತು ವಯಸ್ಸಿನ ಸಮಸ್ಯೆಗಳಿಂದಾಗಿ ನಾನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ” ಎಂದು ಅವರು ತಿಳಿಸಿದ್ದಾರೆ.

“ಈ ನಿರ್ಧಾರದ ನಂತರ ನೇರವಾಗಿ ನಿಮ್ಮ ಸೇವೆ ಸಲ್ಲಿಸಲು ನನಗೆ ಅವಕಾಶ ಸಿಗುವುದಿಲ್ಲ. ಆದರೆ ನನ್ನ ಹೃದಯ ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ. ಎಂದಿನಂತೆ ನೀವು ಭವಿಷ್ಯದಲ್ಲಿ ನನ್ನ ಮತ್ತು ನನ್ನ ಕುಟುಂಬದ ಬೆಂಬಲಕ್ಕೆ ನಿಲ್ಲುತ್ತೀರಿ ಎಂದು ವಿಶ್ವಾಸ ನನಗಿದೆ” ಎಂದು ಸೋನಿಯಾ ಗಾಂಧಿ ಬರೆದುಕೊಂಡಿದ್ದಾರೆ. ಜತೆಗೆ ತಮ್ಮ ಪತಿ ರಾಜೀವ್‌ ಗಾಂಧಿ ಮತ್ತು ಅತ್ತೆ ಇಂದಿರಾ ಗಾಂಧಿ ಅವರನ್ನು ಕಳೆದುಕೊಂಡ ಬಳಿಕ ಅಲ್ಲಿಗೆ ಬಂದ ತಮಗೆ ಜನರು ತೋರಿದ ಪ್ರೀತಿಯನ್ನು ನೆನಪಿಸಿಕೊಂಡಿದ್ದಾರೆ.

ಪ್ರಿಯಾಂಕಾ ಗಾಂಧಿ ಸ್ಪರ್ಧಿಸುತ್ತಾರಾ?

ಈ ಲೋಕಸಭಾ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ರಾಯ್‌ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನುವ ಮಾತು ಜೋರಾಗಿ ಕೇಳಿ ಬರುತ್ತಿದೆ. ಕಾಂಗ್ರೆಸ್‌ ಈ ಬಗ್ಗೆ ಇನ್ನೂ ಅಧಿಕೃತವಾಗಿ ಪ್ರಕಟಣೆ ಹೊರಡಿಸಿಲ್ಲ. ಈ ಮಧ್ಯೆ ಬಿಜೆಪಿ ಕಾಂಗ್ರೆಸ್‌ನ ಕಾಲೆಳೆದಿದೆ. ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, ʼʼರಾಯ್‌ಬರೇಲಿಯನ್ನು ಕಳೆದುಕೊಳ್ಳುವ ಭಯ ಕೈ ಪಕ್ಷವನ್ನು ಕಾಡುತ್ತಿದೆ. ಮೊದಲಿಗೆ ಅವರು ಅಮೇಥಿಯನ್ನು ಕಳೆದುಕೊಂಡರು ಮತ್ತು ಈಗ ಅವರು ರಾಯ್‌ಬರೇಲಿಯಲ್ಲಿಯೂ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ” ಎಂದು ಅವರು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: Sonia Gandhi : ಸೋನಿಯಾ ಗಾಂಧಿಗೆ ವಿಶೇಷ ರೀತಿಯಲ್ಲಿ ಜನುಮ ದಿನದ ಶುಭಾಶಯ ತಿಳಿಸಿದ ಮೋದಿ

ಉತ್ತರ ಪ್ರದೇಶದ ರಾಯ್‌ಬರೇಲಿ ಮತ್ತು ಅಮೇಥಿ ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಪರಿಗಣಿಸಲಾಗುತ್ತದೆ. ಆದರೂ ಕಳೆದ ಬಾರಿಯ 2019 ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಸೋತಿದ್ದರು. ಎರಡು ಕಡೆ ಸ್ಪರ್ಧಿಸಿದ್ದ ರಾಹುಲ್‌ ಗಾಂಧಿ ವಯನಾಡಿನಲ್ಲಿ ಜಯ ಗಳಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version