ಹೊಸದಿಲ್ಲಿ: `ಪಿತ್ರಾರ್ಜಿತ ತೆರಿಗೆʼ (inheritance tax) ವಿಚಾರ ತೆಗೆದು ಪಕ್ಷಕ್ಕೆ ಮುಜುಗರ ಸೃಷ್ಟಿಸಿ ನಂತರ ನಾಲಿಗೆ ಕಚ್ಚಿಕೊಂಡಿದ್ದ ಕಾಂಗ್ರೆಸ್ ನಾಯಕ (congress leader) ಸ್ಯಾಮ್ ಪಿತ್ರೋಡಾ (Sam Pitroda), ಇನ್ನೊಂದು ಅಂಥದೇ ಎಡವಟ್ಟು ಮಾಡಿಕೊಂಡಿದ್ದಾರೆ. ಇದೀಗ ಅವರು ಭಾರತೀಯರನ್ನು ಅವರ ಹೊರನೋಟದಿಂದ ವಿಂಗಡಿಸಿ, ಜನತೆಯ ಸಿಟ್ಟಿಗೆ ಕಾರಣರಾಗಿದ್ದಾರೆ.
ವೈವಿಧ್ಯತೆಯ ಬಗ್ಗೆ ಮಾತನಾಡುವಾಗ ರಾಷ್ಟ್ರದ ವಿವಿಧ ಭಾಗಗಳ ಜನತೆಯನ್ನು ಚೀನಿಯರು, ಅರಬ್ಬರು, ಬಿಳಿಯರು ಮತ್ತು ಆಫ್ರಿಕನ್ನರಿಗೆ ಹೋಲಿಸಿ ಅವರು ವಿವಾದ ಹುಟ್ಟುಹಾಕಿದರು. “ನಾವು ಜಗತ್ತಿನಲ್ಲಿ ಪ್ರಜಾಪ್ರಭುತ್ವದ ಉಜ್ವಲ ಉದಾಹರಣೆಯಾಗಿದ್ದೇವೆ. ನಾವು ವೈವಿಧ್ಯತೆಯನ್ನು ಒಟ್ಟಿಗೆ ಹಿಡಿದಿಟ್ಟುಕೊಂಡಿರುವ ದೇಶವಾಗಿದ್ದೇವೆ. ಇಲ್ಲಿ ಪೂರ್ವದಲ್ಲಿರುವ ಜನರು ಚೀನಿಯರಂತೆ ಕಾಣುತ್ತಾರೆ. ಪಶ್ಚಿಮದಲ್ಲಿ ಜನರು ಹಾಗೆ ಅರಬ್ಬರಂತೆ, ಉತ್ತರದ ಜನರು ಬಹುಶಃ ಶ್ವೇತವರ್ಣೀಯರಂತೆ ಹಾಗೂ ದಕ್ಷಿಣದ ಜನರು ದಕ್ಷಿಣ ಆಫ್ರಿಕಾದವರಂತೆ ಕಾಣುತ್ತಾರೆ. ಪರವಾಗಿಲ್ಲ, ನಾವೆಲ್ಲರೂ ಸಹೋದರರು ಮತ್ತು ಸಹೋದರಿಯರು” ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್ ವಿಭಾಗದ ಅಧ್ಯಕ್ಷ ಪಿತ್ರೋಡಾ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Assam CM Himanta Biswa Sharma) , “ನಾವು ವಿಭಿನ್ನವಾಗಿ ಕಾಣಿಸಬಹುದು, ಆದರೆ ನಾವೆಲ್ಲರೂ ಒಂದೇ” ಎಂದಿದ್ದಾರೆ. “ಸ್ಯಾಮ್ ಭಾಯ್, ನಾನು ಈಶಾನ್ಯದಿಂದ ಬಂದವನು ಮತ್ತು ನಾನು ಭಾರತೀಯನಂತೆ ಕಾಣುತ್ತೇನೆ. ನಮ್ಮದು ವೈವಿಧ್ಯಮಯ ದೇಶ. ನಾವು ವಿಭಿನ್ನವಾಗಿ ಕಾಣಿಸಬಹುದು ಆದರೆ ನಾವೆಲ್ಲರೂ ಒಂದೇ. ಹಮಾರೆ ದೇಶ್ ಕೆ ಬಾರೆ ಮೇ ಥೋಡಾ ತೊ ಸಮಜ್ ಲೋ! (ನಮ್ಮ ದೇಶದ ಬಗ್ಗೆ ಸ್ವಲ್ಪ ತಿಳುವಳಿಕೆ ಇರಲಿ)” ಎಂದಿದ್ದಾರೆ ಶರ್ಮಾ.
ಹಿಮಾಚಲ ಪ್ರದೇಶದ ಮಂಡಿಯ ಬಿಜೆಪಿ ಲೋಕಸಭೆ ಅಭ್ಯರ್ಥಿ ಕಂಗನಾ ರಣಾವತ್ (Kangana Ranaut) , ಪಿತ್ರೋಡಾ ಮಾತಿಗೆ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ, “ಸ್ಯಾಮ್ ಪಿತ್ರೋಡಾ ಅವರು ರಾಹುಲ್ ಗಾಂಧಿ (Rahul Gandhi) ಅವರ ಮಾರ್ಗದರ್ಶಕರು. ಅವರ ಜನಾಂಗೀಯವಾದಿಗಳ ಮಾತುಗಳನ್ನು ಕೇಳಿ. ಇವರು ಭಾರತೀಯರನ್ನು ವಿಭಜಿಸುವವರು. ಅವರ ಸಂಪೂರ್ಣ ಸಿದ್ಧಾಂತವೇ ವಿಭಜಿಸು ಮತ್ತು ಆಳು. ಸಹ ಭಾರತೀಯರನ್ನು ಚೈನೀಸ್, ಆಫ್ರಿಕನ್ ಎಂದು ಕರೆಯುವುದು ಬೇಸರದ ಸಂಗತಿ; ಇದು ಕಾಂಗ್ರೆಸ್‌ಗೂ ಅವಮಾನಕಾರಿ!” ಎಂದು ಕಂಗನಾ ಎಕ್ಸ್‌ನಲ್ಲಿ ಬರೆದಿದ್ದಾರೆ.
ಕಾಂಗ್ರೆಸ್ ನಾಯಕ ಪಿತ್ರೋಡಾ ಈ ರೀತಿ ಹೇಳಿಕೆ ನೀಡಿ ರಾಜಕೀಯ ಬಿರುಗಾಳಿ ಎಬ್ಬಿಸುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಅವರು ʼಅಮೆರಿಕದ ಮಾದರಿಯ ಪಿತ್ರಾರ್ಜಿತ ತೆರಿಗೆʼ ಹಾಗೂ ʼಆಸ್ತಿ ಮರುಹಂಚಿಕೆʼ ಉಲ್ಲೇಖ ಮಾಡಿದ್ದರು. ಅಮೆರಿಕದಲ್ಲಿ ಶ್ರೀಮಂತರು ಮರಣ ಹೊಂದಿದಾಗ, ಅವರ ಆಸ್ತಿಯ ಒಂದು ಭಾಗವನ್ನು ಮಾತ್ರ ಅವರ ಮಕ್ಕಳಿಗೆ ವರ್ಗಾಯಿಸಲಾಗುತ್ತದೆ. ಸರ್ಕಾರ ಗಮನಾರ್ಹ ಪಾಲನ್ನು ವಶಪಡಿಸಿಕೊಳ್ಳುತ್ತದೆ. ಭಾರತದಲ್ಲಿ ಈ ರೀತಿಯ ವಿಧಾನ ನ್ಯಾಯಯುತ ಮತ್ತು ಪ್ರಯೋಜನಕಾರಿ ಎಂದಿದ್ದರು.
ಈ ಹೇಳಿಕೆ ಹಾಗೂ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿರುವ “ಸಾಮಾಜಿಕ- ಆರ್ಥಿಕ ಸಮೀಕ್ಷೆ”ಯನ್ನು ಜೊತೆ ಸೇರಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಟೀಕೆಗೊಡ್ಡಿದ್ದರು. “ಕಾಂಗ್ರೆಸ್ ಹಿಂದೂಗಳ ಆಸ್ತಿಯನ್ನು ಮುಸ್ಲಿಮರಿಗೆ ಮರುಹಂಚಿಕೆ ಮಾಡಲಿದೆ” ಎಂದಿದ್ದರು. ಇದು ಕೋಲಾಹಲವನ್ನೇ ಸೃಷ್ಟಿಸಿತ್ತು. ಕಾಂಗ್ರೆಸ್ ಪಕ್ಷ ಈ ಹೇಳಿಕೆಯಿಂದ ಉಂಟಾದ ಕೋಲಾಹಲದಿಂದ ಬೆಚ್ಚಿಬಿದ್ದು, ಪಿತ್ರೋಡಾ ಹೇಳಿಕೆಯಿಂದ ಅಂತರ ಕಾಪಾಡಿಕೊಂಡಿತ್ತು. “ಪ್ರಧಾನಿ ನರೇಂದ್ರ ಮೋದಿಯವರು ದುರುದ್ದೇಶಪೂರ್ವಕ ಗಮನವನ್ನು ಬೇರೆಡೆಗೆ ಸೆಳೆಯುತ್ತಿದ್ದಾರೆ” ಎಂದು ಆರೋಪಿಸಿತ್ತು.
ಪಿತ್ರೋಡಾ ಅವರು ನಂತರ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದರು. “ಟಿವಿಯಲ್ಲಿ ನಡೆದ ಸಂದರ್ಶನವೊಂದರಲ್ಲಿ, ಅಮೆರಿಕದ ಪಿತ್ರಾರ್ಜಿತ ತೆರಿಗೆಯನ್ನು ಉದಾಹರಣೆಯಾಗಿ ಮಾತ್ರ ಉಲ್ಲೇಖಿಸಲಾಗಿದೆ. ತನ್ನ ಕಾಮೆಂಟ್‌ಗಳಿಗೂ ಪಕ್ಷದ ನೀತಿಗಳಿಗೂ ಯಾವುದೇ ಸಂಬಂಧವಿಲ್ಲ” ಎಂದು ಅವರು ಒತ್ತಿ ಹೇಳಿದ್ದರು.