ನವದೆಹಲಿ: ನೈಋತ್ಯ ಮುಂಗಾರು (South-West Monsoon) ಈ ಬಾರಿ ಬೇಗನೇ ಭಾರತವನ್ನು ಪ್ರವೇಶಿಸಿದೆ. ಮೇ 16ಕ್ಕೇ ಅಂಡಮಾನ್-ನಿಕೋಬಾರ್ ಪ್ರದೇಶಕ್ಕೆ ಮಾನ್ಸೂನ್ ಪ್ರವೇಶ ಆಗಿರುವುದರಿಂದ, ಕೇರಳಕ್ಕೂ ಕೂಡ ಮೇ 27ರ ಹೊತ್ತಿಗೆ ನೈಋತ್ಯ ಮಾನ್ಸೂನ್ ಪ್ರವೇಶ ಆಗಬಹುದು ಎಂದು ಹವಾಮಾನ ಇಲಾಖೆ ಈ ಹಿಂದೆ ಮುನ್ಸೂಚನೆ ನೀಡಿತ್ತು. ಆದರೆ ಮುಂಗಾರು ದುರ್ಬಲಗೊಂಡಿದೆ. ಕೇರಳಕ್ಕೆ ಜೂನ್ ಮೊದಲ ವಾರದಲ್ಲಿ ಪ್ರವೇಶಿಸಿ, ನಿಧಾನವಾಗಿ ಬಲಗೊಳ್ಳುತ್ತದೆ ಎಂದು ಇದೀಗ ಹವಾಮಾನ ಇಲಾಖೆ ತಿಳಿಸಿದೆ.
ಗುರುವಾರ ಪ್ರಕಟಣೆ ಹೊರಡಿಸಿರುವ ಹವಾಮಾನ ಇಲಾಖೆ, ಜೂನ್ 1ರ ಹೊತ್ತಿಗೆ ಕೇರಳದತ್ತ ಮಾನ್ಸೂನ್ ಚಲನೆಯಾಗಬಹುದು. ಜೂ.2ರಿಂದ 8ರ ನಡುವೆ ಈಶಾನ್ಯ ಭಾರತದಲ್ಲಿ ಮಳೆ ಶುರುವಾಗಬಹುದು. ಅದು ಬಿಟ್ಟರೆ ದೇಶದ ಉಳಿದ ಭಾಗಗಳಲ್ಲಿ ಈ ಅವಧಿಯಲ್ಲಿ ಸಾಮಾನ್ಯಕ್ಕಿಂತಲೂ ಕಡಿಮೆ ಮಳೆಯಾಗಲಿದೆ. ಹೀಗಾಗಿ ಮಾನ್ಸೂನ್ ಚಲನೆ ನಿಧಾನವಾಗಬಹುದು ಎಂದು ಹೇಳಿದೆ. ಸಾಮಾನ್ಯವಾಗಿ ಕೇರಳಕ್ಕೆ ಜೂ.1ಕ್ಕೆ ಮಾನ್ಸೂನ್ ಪ್ರವೇಶ ಆಗುತ್ತದೆ. ಒಟ್ಟಾರೆ ಮಳೆಯ ಶೇ.70ರಷ್ಟು ಮಳೆಯನ್ನು ತರುವ ನೈಋತ್ಯ ಮಾನ್ಸೂನ್ ಕೃಷಿ ಚಟುವಟಿಕೆಗಳನ್ನು ನಿರ್ಣಯಿಸುತ್ತದೆ. ದೊಡ್ಡ ಕೃಷಿ ಅವಲಂಬಿತ ರಾಷ್ಟ್ರವಾಗಿರುವ ಭಾರತಕ್ಕೆ ಈ ಮಾನ್ಸೂನ್ ತುಂಬ ವಿಳಂಬವಾದರೂ ಕಷ್ಟ..ಬಹಳ ಬೇಗನೇ ಬಂದರೂ ಸಂಕಷ್ಟ.
ನೈಋತ್ಯ ಮಾನ್ಸೂನ್ ಈಗಾಗಲೇ ಕೇರಳದ ಕಡೆಗೆ ಸಂಚರಿಸಲು ಶುರುಮಾಡಿದೆ. ಮೇ 26ರಂದು ಶ್ರೀಲಂಕಾವನ್ನು ಪ್ರವೇಶಿಸಿದ್ದು, ಅಲ್ಲಿಂದ ಕೇರಳದ ಕಡೆಗೆ ನಿಧಾನವಾಗಿ ಸಾಗುತ್ತಿದೆ. ದಕ್ಷಿಣ ಅರೇಬಿಯನ್ ಸಮುದ್ರದ ಆಯ್ದ ಭಾಗಗಳು, ಮಾಲ್ಡೀವ್ಸ್ ಮತ್ತು ಅದಕ್ಕೆ ಹೊಂದಿಕೊಂಡಿರುವ ಲಕ್ಷದ್ವೀಪ, ಕೊಮೊರಿನ್‌ನ ಕೆಲವು ಪ್ರದೇಶಗಳಲ್ಲಿ ಇನ್ನು 48ಗಂಟೆಗಳಲ್ಲಿ ನೈಋತ್ಯ ಮಾನ್ಸೂನ್ ಇನ್ನಷ್ಟು ತೀವ್ರಗೊಂಡು ಸಾಗಲಿದೆ ಎಂದೂ ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ನೈಋತ್ಯ ಮುಂಗಾರು ಅಂಡಮಾನ್ ಪ್ರವೇಶ, ರಾಜ್ಯದಲ್ಲಿ ಇನ್ನೂ 4 ದಿನ ಭರ್ಜರಿ ಮಳೆ
ಮಾನ್ಸೂನ್ ಪ್ರವೇಶಕ್ಕೂ ಮೊದಲೇ ಕೇರಳದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಇದೇ ವಾತಾವರಣ ಇನ್ನೆರಡು ದಿನವೂ ಮುಂದುವರಿಯಲಿದೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶಗಳಲ್ಲೂ ಮುಂದಿನ ಎರಡು ದಿನ ಮಳೆ ನಿಲ್ಲುವುದಿಲ್ಲ. ಲಕ್ಷದ್ವೀಪದಲ್ಲೂ ಕೂಡ ಇಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಹಾಗೇ, ಮಾನ್ಸೂನ್ ಪ್ರವೇಶ ಹಂತದಲ್ಲೂ ಭರ್ಜರಿ ಮಳೆಯಾಗುವ ಸಾಧ್ಯತೆ ಇದ್ದು, ಉಂಟಾಗಬಹುದಾದ ತೊಡಕು ಎದುರಿಸಲು ಸಕಲ ಸಿದ್ಧತೆಯನ್ನೂ ಮಾಡಿಕೊಳ್ಳಬೇಕು ಎಂದೂ ಹವಾಮಾನ ತಜ್ಞರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: Cyclone Asani ದುರ್ಬಲವಾದರೂ ಮೂರ್ನಾಲ್ಕು ದಿನ ಭಾರೀ ಮಳೆ: ಉತ್ತಮ ಮುಂಗಾರಿನ ಮುನ್ಸೂಚನೆ