Site icon Vistara News

Special Parliament session: ಹೊಸ ಸಂಸತ್ತಿನಲ್ಲಿ ಸಿಬ್ಬಂದಿಗೆ ಹೊಸ ʼಭಾರತೀಯʼ ಸಮವಸ್ತ್ರ; ಏನೇನು ಬದಲಾವಣೆ?

Special Parliament session uniform

ಹೊಸದಿಲ್ಲಿ: ನೂತನ ಪಾರ್ಲಿಮೆಂಟ್‌ (New Parliament Building) ಭವನದಲ್ಲಿ ಮುಂದಿನ ವಾರ ನಡೆಯಲಿರುವ ವಿಶೇಷ ಅಧಿವೇಶನದಲ್ಲಿ (Special Parliament session) ಸಂಸತ್ತಿನ ಸಿಬ್ಬಂದಿ ಎರಡೂ ಸದನಗಳ ಒಳಗೆ ಮತ್ತು ಹೊರಗೆ ಹೊಸ ಸಮವಸ್ತ್ರಗಳನ್ನು ಧರಿಸಲಿದ್ದಾರೆ ಎಂದು ಲೋಕಸಭೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹೊಸ ಸಮವಸ್ತ್ರ “ಭಾರತೀಯತೆʼಯ ಸ್ಪರ್ಶವನ್ನು ಹೊಂದಿರುತ್ತದೆ.‌ ಹೊಸ ಸಮವಸ್ತ್ರಗಳಲ್ಲಿ ಉಭಯ ಸದನಗಳ ಮಾರ್ಷಲ್‌ಗಳಿಗೆ ಮಣಿಪುರಿ ಮುಂಡಾಸು (ಶಿರಸ್ತ್ರಾಣ)ಗಳು ಬರಲಿವೆ. ಸಂಸತ್ತಿನ ಮುಂದುಗಡೆಯ ಕಚೇರಿಗಳು ಹಾಗೂ ಸಂಸದೀಯ ವರದಿ ವಿಭಾಗಗಳಲ್ಲಿನ ಅಧಿಕಾರಿಗಳು ಕಮಲದ ಚಿಹ್ನೆ ಹೊಂದಿರುವ ಶರ್ಟ್‌ಗಳನ್ನು ಧರಿಸಲಿದ್ದಾರೆ. ಹೊಸ ಕಟ್ಟಡದ ರಾಜ್ಯಸಭೆಯ ಕಾರ್ಪೆಟ್‌ನಲ್ಲಿ ಸಹ ಕಮಲ ಇರಲಿದೆ. ಎಲ್ಲಾ ಮಹಿಳಾ ಅಧಿಕಾರಿಗಳಿಗೆ ಹೊಸ ವಿನ್ಯಾಸದ ಸೀರೆಗಳು ಸಿಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಮಲ ಭಾರತದ ರಾಷ್ಟ್ರೀಯ ಹೂವು ಎನಿಸಿಕೊಂಡಿರುವ ಹಿನ್ನೆಲೆಯಲ್ಲಿ ಇದನ್ನು ಬಳಸಲಾಗುತ್ತಿದೆ. ಆದರೆ ಇದು ಭಾರತೀಯ ಜನತಾ ಪಕ್ಷದ (ಬಿಜೆಪಿ) ಚುನಾವಣಾ ಚಿಹ್ನೆಯೂ ಆಗಿರುವುದರಿಂದ ಈ ಪ್ರಸ್ತಾಪವು ರಾಜಕೀಯ ವಿವಾದವನ್ನು ಹುಟ್ಟುಹಾಕಬಹುದು.

ಅಧಿಕಾರಿಗಳ ಪ್ರಕಾರ ಸಿಬ್ಬಂದಿಯ ಸಮವಸ್ತ್ರಗಳಿಗೆ ಹೊಸ ವಿನ್ಯಾಸಗಳನ್ನು ಸೂಚಿಸಲು ಎಲ್ಲಾ 18 ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿಗಳ (ಎನ್‌ಐಎಫ್‌ಟಿ) ಬಳಿ ಕೇಳಲಾಯಿತು. ತಜ್ಞರ ಸಮಿತಿಯು ಆ ಪ್ರಸ್ತಾವನೆಗಳಿಂದ ಹೊಸ ಸಮವಸ್ತ್ರವನ್ನು ಅಂತಿಮಗೊಳಿಸಿತು. ಸಂಸತ್ತಿನ ಸೆಕ್ರೆಟರಿಯೇಟ್‌ನ ಎಲ್ಲಾ ಐದು ಪ್ರಮುಖ ಶಾಖೆಗಳಾದ ವರದಿಗಾರಿಕೆ, ಟೇಬಲ್ ಆಫೀಸ್, ನೋಟಿಸ್ ಆಫೀಸ್, ಶಾಸಕಾಂಗ ಶಾಖೆ ಮತ್ತು ಭದ್ರತೆಯ ಅಧಿಕಾರಿಗಳು ಈ ಅಧಿವೇಶನದಲ್ಲಿ ಮಾರ್ಷಲ್‌ಗಳಂತೆ ಹೊಸ ಸಮವಸ್ತ್ರಗಳನ್ನು ಧರಿಸುತ್ತಾರೆ. ಈ ಶಾಖೆಗಳು ಸಂಸದರು ಮತ್ತು ಇತರ ಸಂದರ್ಶಕರೊಂದಿಗೆ ವ್ಯವಹರಿಸುತ್ತವೆ. ಅವರ ಸಮವಸ್ತ್ರಗಳು ಭಾರತೀಯ ಸಂಸತ್ತಿನ ಘನತೆ ಮತ್ತು ಗ್ಲಾಮರ್ ಅನ್ನು ಹೆಚ್ಚಿಸಲಿವೆ ಎನ್ನಲಾಗಿದೆ.

ಪೀಠದ ಪಕ್ಕದಲ್ಲಿ ನಿಂತು ಸಭಾಧ್ಯಕ್ಷರಿಗೆ ಸಹಾಯ ಮಾಡುವ ಮಾರ್ಷಲ್‌ಗಳು ಸಫಾರಿ ಸೂಟ್‌ಗಳ ಬದಲಿಗೆ ಕೆನೆ ಬಣ್ಣದ ಕುರ್ತಾ ಪೈಜಾಮ ಧರಿಸಲಿದ್ದಾರೆ. ಪೇಟದ ಬದಲಿಗೆ ಮಣಿಪುರಿ ಶಿರಸ್ತ್ರಾಣವನ್ನು ಧರಿಸುತ್ತಾರೆ. ಐದು ಇಲಾಖೆಗಳ ಅಧಿಕಾರಿಗಳು ಸಹ ತಮ್ಮ ತೆಳು ನೀಲಿ ಸಫಾರಿ ಸೂಟ್‌ಗಳು ಮತ್ತು ಕಮಲದ ಚಿಹ್ನೆ ಹೊಂದಿರುವ ಸ್ಪೋರ್ಟ್ಸ್‌ ಬಟನ್-ಡೌನ್ ಶರ್ಟ್‌ಗಳನ್ನು ತ್ಯಜಿಸಲಿದ್ದಾರೆ. ಬದಲಿಗೆ ಕೆನೆ ಬಣ್ಣದ ಜಾಕೆಟ್‌ಗಳು ಮತ್ತು ತೆಳು ಬಿಳಿ ಪ್ಯಾಂಟ್‌ಗಳನ್ನು ಧರಿಸುತ್ತಾರೆ. ಈ ಹಿಂದೆ ನೀಲಿ, ಫಾನ್, ಪ್ರಶ್ಯನ್ ನೀಲಿ ಮತ್ತು ಇದ್ದಿಲು ಛಾಯೆಗಳ ಸಫಾರಿ ಸೂಟ್‌‌ ಧರಿಸುತ್ತಿದ್ದರು.

ಟೇಬಲ್ ಆಫೀಸ್ ಸಂಸತ್ತಿನ ಸಂಪೂರ್ಣ ದಾಖಲೆಗಳನ್ನು ನಿರ್ವಹಿಸುತ್ತದೆ ಮತ್ತು ಪ್ರಶ್ನೋತ್ತರ ಅವಧಿಗೆ ಪ್ರಶ್ನೆಗಳನ್ನು ವಿಂಗಡಿಸುತ್ತದೆ. ಐಪಿಎಸ್ ಅಧಿಕಾರಿಯ ನೇತೃತ್ವದ ಸಂಸತ್ತಿನ ಭದ್ರತಾ ಶಾಖೆಯು ಸಂಕೀರ್ಣದ ಆಂತರಿಕ ಭದ್ರತೆಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದೆ. ಸಂಕೀರ್ಣದ ಬಾಹ್ಯ ಭದ್ರತೆಗೆ ಸರ್ಕಾರವು ಅರೆಸೇನಾ ಪಡೆಗಳನ್ನು ನಿಯೋಜಿಸಿದೆ. ಸ್ಪೀಕರ್ ಕುರ್ಚಿಯ ಮುಂದೆ ಬಾವಿಯಲ್ಲಿ ಕುಳಿತುಕೊಂಡು ವರದಿ ಮಾಡುವ ಶಾಖೆಯು ಸದನ ಮತ್ತು ಸಂಸದೀಯ ಸಮಿತಿಗಳೊಳಗಿನ ಎಲ್ಲಾ ಚರ್ಚೆಗಳ ಮೌಖಿಕ ಟಿಪ್ಪಣಿಗಳನ್ನು ತೆಗೆದುಕೊಳ್ಳುತ್ತದೆ. ಶಾಸಕಾಂಗ ಶಾಖೆಯು ಮಸೂದೆಗಳ ಪರಿಚಯಕ್ಕೆ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ.

2000ರಲ್ಲಿ, ಈ ಐದು ವಿಭಾಗದ ಸಂಸತ್ತಿನ ಅಧಿಕಾರಿಗಳಿಗೆ ಸಮವಸ್ತ್ರವನ್ನು ಖರೀದಿಸಲು ಮಹಿಳೆಯರಿಗೆ ₹ 17,000 ಮತ್ತು ಪುರುಷರಿಗೆ ₹ 16,000 ವರೆಗೆ ಭತ್ಯೆಗಳನ್ನು ಒದಗಿಸಲಾಯಿತು; ಪ್ರತಿ ಎರಡು ವರ್ಷಗಳಿಗೊಮ್ಮೆ ಭತ್ಯೆ ನೀಡಲಾಗುತ್ತಿತ್ತು.

ಸೆಪ್ಟೆಂಬರ್ 18ರಿಂದ 22ರವರೆಗೆ ನಿಗದಿಯಾಗಿರುವ ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನವು ಬಹುತೇಕ ಹೊಸ ಸಂಸತ್‌ ಕಟ್ಟಡದಲ್ಲಿ ನಡೆಯಲಿದೆ. ಅಧಿವೇಶನದ ಮೊದಲ ದಿನ ಹಳೆ ಕಟ್ಟಡದಲ್ಲಿ ನಡೆದರೆ, ಉಳಿದ ಭಾಗ ಮೇ 28ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ನೂತನ ಕಟ್ಟಡದಲ್ಲಿ ನಡೆಯಲಿದೆ. ಕಲಾಪಕ್ಕೆ ಹೊಸ ಕಟ್ಟಡ ಪೂರ್ತಿ ಸಜ್ಜಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Parliament Special Session: ಒಂದು ರಾಷ್ಟ್ರ ಒಂದು ಚುನಾವಣೆಗೆ ಮುಹೂರ್ತ ಫಿಕ್ಸ್? ದಿಢೀರ್ ವಿಶೇಷ ಅಧಿವೇಶನದ ಹಿಂದಿನ ಗುಟ್ಟೇನು?

Exit mobile version