Site icon Vistara News

Special Parliament Session: ಐತಿಹಾಸಿಕ ಗಳಿಗೆಗೆ ಕ್ಷಣಗಣನೆ; ಹೊಸ ಸಂಸತ್‌ ಭವನದಲ್ಲಿ ಇಂದಿನಿಂದ ಕಲಾಪ; ಮಹಿಳಾ ಮೀಸಲಾತಿಯೇ ಮುಖ್ಯ ಅಜೆಂಡಾ?

New Parliament Building

ಹೊಸದಿಲ್ಲಿ: ದೇಶದ ಸ್ವಾತಂತ್ರ್ಯದ ʼಅಮೃತ ಕಾಲʼದಲ್ಲಿ ನೂತನ ಸಂಸತ್ ಭವನದಲ್ಲಿ (New Parliament) ಮೊದಲ ದಿನದ, ವಿಶೇಷ ಅಧಿವೇಶನದ (Special Parliament Session) ಎರಡನೇ ದಿನದ ಕಾರ್ಯಕಲಾಪಗಳು ಇಂದಿನಿಂದ ಆರಂಭವಾಗಲಿವೆ.

ಗಣೇಶ ಚತುರ್ಥಿ ದಿನದಂದು ವಿಶೇಷ ಅಧಿವೇಶನ ಆರಂಭವಾಯಿತು. ಹೊಸ ಸಂಸತ್ ಭವನದಲ್ಲಿ ಇಂದು ವಿಶೇಷ ಅಧಿವೇಶನದ ಎರಡನೇ ದಿನದ ಕಲಾಪ ನಡೆಯಲಿದೆ. ಬೆಳಗ್ಗೆ 10:30ಕ್ಕೆ ಹಳೆಯ ಸಂಸತ್ತಿನ ಮುಂದೆ ಎಲ್ಲ ಸದಸ್ಯರ ಫೋಟೋ‌ ಶೂಟ್ ನಡೆಯಲಿದೆ.

ಫೋಟೋ ಸೆಷನ್ ನಂತರ, ಹಳೆಯ ಸಂಸತ್ ಕಟ್ಟಡದ ಸೆಂಟ್ರಲ್ ಹಾಲ್‌ನಲ್ಲಿ ಬೆಳಿಗ್ಗೆ 11 ಗಂಟೆಗೆ ವಿಶೇಷ ಸಮಾರಂಭ ನಡೆಯಲಿದೆ. ಅದರ ಮುಕ್ತಾಯದ ನಂತರ ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೊಸ ಕಟ್ಟಡಕ್ಕೆ ತೆರಳಲಿದ್ದಾರೆ. ಈ ಸಾಂಕೇತಿಕ ಪಾದಯಾತ್ರೆಯಲ್ಲಿ ಅವರು ಸಂವಿಧಾನವನ್ನು (Constitution) ಕೈಯಲ್ಲಿ ಹಿಡಿದುಕೊಳ್ಳಲಿದ್ದಾರೆ. ಎಲ್ಲ ಸಚಿವರು ಮತ್ತು ಸಂಸದರು ಅವರನ್ನು ಹಿಂಬಾಲಿಸುತ್ತಾರೆ.

ಎಲ್ಲ ಸಂಸದರು ಹೊಸ ಗುರುತಿನ ಚೀಟಿಯೊಂದಿಗೆ ಹೊಸ ಕಟ್ಟಡವನ್ನು ಪ್ರವೇಶಿಸುತ್ತಾರೆ. ಹೊಸ ಕಟ್ಟಡದಲ್ಲಿ ಲೋಕಸಭೆಯ ಕಲಾಪ ಮಧ್ಯಾಹ್ನ 1:15ಕ್ಕೆ ಆರಂಭವಾಗಲಿದ್ದು, ರಾಜ್ಯಸಭೆಯ ಕಲಾಪ ಮಧ್ಯಾಹ್ನ 2:15ಕ್ಕೆ ಆರಂಭವಾಗಲಿದೆ.

ವಿಶೇಷ ಅಧಿವೇಶನದ 2ನೇ ದಿನದ ಅಜೆಂಡಾ ಏನು?

ನಿನ್ನೆ ಸಂಜೆ 2 ಗಂಟೆಗಳ ಕಾಲ ಪ್ರಧಾನಿ ಮೋದಿಯವರು ಸಂಪುಟ ಸಭೆ ನಡೆಸಿದ್ದಾರೆ. ಆದರೆ ಕೊನೆಯ ಕ್ಷಣದಲ್ಲಿಯೂ ಅಧಿವೇಶನದಲ್ಲಿ ಯಾವ ವಿಚಾರ ಚರ್ಚೆಯಾಗಲಿದೆ ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ. ಈ ಕೆಳಗಿನ ವಿಧೇಯಕಗಳು ಅಲ್ಲಿ ಮಂಡನೆಯಾಗಲಿವೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.

1) ಮುಖ್ಯ ಚುನಾವಣಾ ಆಯುಕ್ತರು, ಚುನಾವಣಾ ಆಯುಕ್ತರ ನೇಮಕ ಕುರಿತು ಮಸೂದೆ ಮಂಡನೆ

2) ಮಹಿಳಾ ಮೀಸಲಾತಿ ಮಸೂದೆ (women’s reservation bill)

3) ವಕೀಲರ (ತಿದ್ದುಪಡಿ) ಮಸೂದೆ-2023

4) ನಿಯತಕಾಲಿಕಗಳ ಪತ್ರಿಕಾ ಮತ್ತು ನೋಂದಣಿ ಮಸೂದೆ-2023

5) ಪೋಸ್ಟ್ ಆಫೀಸ್ ಮಸೂದೆ 2023

6) ಒಂದು ರಾಷ್ಟ್ರ, ಒಂದು ಚುನಾವಣೆ

ಮಹಿಳಾ ಮೀಸಲಾತಿ ವಿಧೇಯಕ

ನೂತನ ಸಂಸತ್ ಭವನದಲ್ಲಿ ಮೊಟ್ಟ ಮೊದಲ ವಿಚಾರವಾಗಿ ಮಹಿಳಾ ಮೀಸಲಾತಿ ವಿಧೇಯಕವನ್ನು ಎತ್ತಿಕೊಳ್ಳಲಾಗುತ್ತಿದೆ ಎನ್ನಲಾಗಿದೆ. ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದ್ದು, ನಿನ್ನೆ ನಡೆದಿರುವ ಸಂಪುಟ ಸಭೆಯಲ್ಲಿ ಮಹಿಳಾ ಮೀಸಲಾತಿಗೆ ಅನುಮೋದನೆ ದೊರೆತಿದೆ ಎಂದು ಮೂಲಗಳು ತಿಳಿಸಿವೆ.

ಈ ಹಿನ್ನೆಲೆಯಲ್ಲಿ ವಿಶೇಷ ಅಧಿವೇಶನದ ಪ್ರಮುಖ ವಿಚಾರ ಸಹ ಇದೇ ಆಗಿರಲಿದೆಯಾ ಎಂಬ ಮಾತು ಕೇಳಿಬರುತ್ತಿದೆ. ಮಹಿಳಾ ಮೀಸಲಾತಿ ಜಾರಿಗೆ ಬಹುತೇಕ ಪಕ್ಷಗಳು ಸಹ ಸಮ್ಮತಿ ವ್ಯಕ್ತಪಡಿಸಿವೆ. 2014 ಮತ್ತು 2019ರ ಲೋಕಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಬಿಜೆಪಿ ಈ ಭರವಸೆ ನೀಡಿತ್ತು. 2024ರ ಲೋಕಸಭೆ ಚುನಾವಣೆ ಮುನ್ನ ಈ ಭರವಸೆ ಈಡೇರಿಸಲು ಸರ್ಕಾರ ತೀರ್ಮಾನಿಸಿದಂತಿದೆ. ಮಹಿಳಾ ಮೀಸಲಾತಿ ಬಗ್ಗೆ ಗಂಭೀರ ಚಿಂತನೆ ನಡೆದಿದ್ದು, ಈ ನಿಟ್ಟಿನಲ್ಲಿ ಮಹತ್ವದ ಕ್ರಮವನ್ನು ನಿರೀಕ್ಷಿಸಬಹುದು ಎಂದು ತಿಳಿದುಬಂದಿದೆ.

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ 2008ರಲ್ಲಿ ರಾಜ್ಯಸಭೆಯಲ್ಲಿ ಮಹಿಳಾ ಮಸೂದೆಯನ್ನು ಮಂಡಿಸಿತ್ತು. 2010ರ ಮಾರ್ಚ್ 9ರಂದು ರಾಜ್ಯಸಭೆ ಮಸೂದೆಯನ್ನು ಅನುಮೋದಿಸಿತ್ತು. ಆದರೆ, ಮಸೂದೆಯನ್ನು ಲೋಕಸಭೆಯಲ್ಲಿ ಪರಿಗಣನೆಗೆ ತೆಗೆದುಕೊಂಡಿರಲಿಲ್ಲ. ಸದ್ಯ ಲೋಕಸಭೆಯಲ್ಲಿ ಈ ಮಸೂದೆ ಮಂಡನೆ ಆಗಬೇಕಿದ್ದು, ಇಂದೇ ಈ ವಿಚಾರ ಬರಲಿದೆಯಾ ಎಂಬ ಕುತೂಹಲ ಮೂಡಿದೆ .

ಪ್ರಸ್ತುತ ಸಂಸತ್ತಿನ ಸದಸ್ಯರಲ್ಲಿ 14.4% ಮಾತ್ರ ಮಹಿಳೆಯರಿದ್ದಾರೆ. ಹಿಂದಿನ ಅವಧಿಗಳಿಗೆ ಹೋಲಿಸಿದರೆ ಇದೇ ಅತಿ ಹೆಚ್ಚು. ರಾಜ್ಯ ವಿಧಾನಸಭೆಗಳಲ್ಲಿ ಮಹಿಳಾ ಸದಸ್ಯೆಯರ ಸಂಖ್ಯೆ ತೀರಾ ಕಡಿಮೆ ಇದೆ. ರಾಷ್ಟ್ರೀಯ ಸರಾಸರಿ ಮಹಿಳಾ ಸದಸ್ಯರ ಪ್ರಮಾಣ ಶೇ.9 ಆಗಿದೆ.

ಇದನ್ನೂ ಓದಿ: Special Parliament Session: 75 ವರ್ಷಗಳ ಸಂಸತ್‌ ಹಾದಿ ನೆನೆದ ಪ್ರಧಾನಿ, ನೆಹರೂ ಹೊಗಳುತ್ತಲೇ ಕಾಂಗ್ರೆಸ್‌ಗೆ ಕುಟುಕಿದ ಮೋದಿ

Exit mobile version