ಪಾಟ್ನಾ: ಈ ಬಾರಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ(NDA Government) ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಜೆಡಿಯು(JDU) ಇದೀಗ ಕೇಂದ್ರ ಸರ್ಕಾರದ ಎದುರು ತನ್ನ ದಶಕದ ಬೇಡಿಕೆಯನ್ನಿಡಲು ಶತ ಪ್ರಯತ್ನ ಮಾಡುತ್ತಿದೆ. ಇದರ ಭಾಗವಾಗಿ ಇಂದು ನಡೆದ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ದಶಕದ ಬೇಡಿಕೆಯಾಗಿರುವ ಬಿಹಾರಕ್ಕೆ ವಿಶೇಷ ಸ್ಥಾನಮಾನದ(Special Status) ನಿರ್ಣಯವನ್ನು ಅಂಗೀಕಾರ ಮಾಡಲಾಗಿದೆ.
ಸಭೆಯಲ್ಲಿ, ರಾಜ್ಯಸಭಾ ಸದಸ್ಯ ಸಂಜಯ್ ಝಾ ಅವರನ್ನು ಜೆಡಿಯುನ ಹೊಸ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಅಲ್ಲದೆ ಜೆಡಿಯು ಎನ್‌ಡಿಎನಲ್ಲಿಯೇ ಉಳಿಯಲು ನಿರ್ಧರಿಸಲಾಯಿತು. NEET-UG ಪ್ರಶ್ನೆ ಪತ್ರಿಕೆ ಸೋರಿಕೆಯ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದ್ದು, ಪೇಪರ್ ಸೋರಿಕೆ ತಡೆಯಲು ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕು ಎಂಬ ಬೇಡಿಕೆಯನ್ನು ಜೆಡಿಯು ನಾಯಕರು ಮುಂದಿಟ್ಟರು.
ಸಭೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷದ ಮುಖಂಡರು ಬಿಹಾರದ ಆರ್ಥಿಕ ಮತ್ತು ಅಭಿವೃದ್ಧಿ ಕೊರತೆಗಳನ್ನು ಉಲ್ಲೇಖಿಸಿದ್ದು, ವಿಶೇಷ ಸ್ಥಾನಮಾನ ನೀಡಬೇಕು ಎಂಬ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸುವ ಅಗತ್ಯವನ್ನು ಪ್ರತಿಪಾದಿಸಿದೆ. ಬಿಹಾರ ಸಂಪುಟದಲ್ಲಿ ಕಳೆದ ವರ್ಷ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂಬಂಧ ನಿರ್ಣಯ ಅಂಗೀಕರಿಸಲಾಗಿತ್ತು.
ಕಾರ್ಯಾಧ್ಯಕ್ಷರಾಗಿ ನೇಮಕವಾದ ನಂತರ ಮಾತನಾಡಿರುವ ಝಾ, ಪ್ರಧಾನಿ ನರೇಂದ್ರ ಮೋದಿ ಯಾವಾಗಲೂ ಬಿಹಾರದತ್ತ ಹೆಚ್ಚು ಗಮನ ಹರಿಸುತ್ತಾರೆ. ರಾಜ್ಯಕ್ಕೆ ವಿಶೇಷ ವರ್ಗದ ಸ್ಥಾನಮಾನ ಅಥವಾ ಪ್ಯಾಕೇಜ್‌ಗಾಗಿ ಪಕ್ಷದ ಬೇಡಿಕೆಯನ್ನು ಈಡೇರಿಸುತ್ತಾರೆ ಎಂಬ ಭರವಸೆ ಇದೆ. ಜೆಡಿಯು ಯಾವಾಗಲೂ ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವುದಾಗಿ ಘೋಷಿಸಿದ್ದಾರೆ. ರಾಜ್ಯಸಭಾ ಸಂಸದ ಸಂಜಯ್ ಝಾ ಅವರನ್ನು ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ನಾವು ವಿಶೇಷ ಸ್ಥಾನಮಾನ ಮತ್ತು ಆರ್ಥಿಕ ಪ್ಯಾಕೇಜ್‌ಗಾಗಿ ಹೋರಾಟ ಮುಂದುವರಿಸುತ್ತೇವೆ ಎಂದಿದ್ದಾರೆ.
ಬಿಜೆಪಿ ಕಗ್ಗಂಟು
ಜೆಡಿಯುನ ಈ ಬೇಡಿಕೆ ಬಿಜೆಪಿಗೆ ಭಾರೀ ಕಗ್ಗಂಟಾಗಿ ಪರಿಣಮಿಸಲಿದೆ. ಒಂದು ವೇಳೆ ಬಿಹಾರದ ಈ ಬೇಡಿಕೆಯನ್ನು ಈಡೇರಿಸಿದರೂ, ಮತ್ತೊಂದೆಡೆ ಎನ್‌ಡಿಎಗೆ ಅನಿವಾರ್ಯವಾಗಿರುವ ಆಂಧ್ರ ಪ್ರದೇಶದ ತೆಲುಗು ದೇಶಂ ಪಕ್ಷದ ಬೆಂಬಲ ಉಳಿಸಿಕೊಳ್ಳಲು ಅದರ ಬೇಡಿಕೆಯನ್ನು ಕೂಡ ಈಡೇರಿಸಬೇಕಾಗುತ್ತದೆ. ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಕೂಡ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಬೇಕು ಎಂಬ ಬೇಡಿಕೆಯನ್ನು ಇರಿಸಿದ್ದಾರೆ.
ಬಿಹಾರ ಸರ್ಕಾರ ಕಳೆದ ವರ್ಷ ಮೀಸಲಾತಿ ಪ್ರಮಾಣವನ್ನು ಶೇ. 50ರಿಂದ ಶೇ. 65ಕ್ಕೆ ಹೆಚ್ಚಿಸಿತ್ತು. ಸರ್ಕಾರದ ಈ ಆದೇಶವನ್ನು ಪಾಟ್ನಾ ಹೈಕೋರ್ಟ್ (Patna High Court) ರದ್ದುಗೊಳಿಸಿದೆ. ರಾಜ್ಯವ್ಯಾಪಿ ಜಾತಿ ಸಮೀಕ್ಷೆ ನಡೆಸಿ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಪ್ರಮಾಣವನ್ನು ಕಳೆದ ವರ್ಷ ಹೆಚ್ಚಿಸಲಾಗಿತ್ತು. ರಾಜ್ಯ ಸರ್ಕಾರದ ಈ ಕ್ರಮವು ಸುಪ್ರೀಂ ಕೋರ್ಟ್ ಆದೇಶಿಸಿದ ಮೀಸಲಾತಿಯ ಶೇ. 50 ರ ಮಿತಿಯನ್ನು ಮೀರಿದೆ. ಹೀಗಾಗಿ ಪಾಟ್ನಾ ಹೈಕೋರ್ಟ್ ಇದನ್ನು ಸಂವಿಧಾನ ಬಾಹಿರ ಎಂದು ಕರೆದಿದೆ.
2023ರ ನವೆಂಬರ್‌ನಲ್ಲಿ ನಿತೀಶ್ ಕುಮಾರ್ ನೇತೃತ್ವ ಸರ್ಕಾರ ಜಾರಿಗೆ ತಂದ ಕಾನೂನನ್ನು ವಿರೋಧಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಕೆ.ವಿನೋದ್ ಚಂದ್ರನ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶವನ್ನು ಹೊರಡಿಸಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಬಿಹಾರ ವಿಧಾನಸಭೆ ಮೀಸಲಾತಿ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿದ ಕೆಲವು ದಿನಗಳ ನಂತರ, ನಿತೀಶ್ ಕುಮಾರ್ ಸರ್ಕಾರವು ರಾಜ್ಯ ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಮಿತಿಯನ್ನು ಶೇ. 50ರಿಂದ ಶೇ. 65 ಕ್ಕ ಹೆಚ್ಚಿಸಲು ಗೆಜೆಟ್ ಅಧಿಸೂಚನೆಗಳನ್ನು ಹೊರಡಿಸಿತ್ತು.
ಇದನ್ನೂ ಓದಿ: Bulldozer: ಉತ್ತರ ಪ್ರದೇಶದಲ್ಲಿ ಮತ್ತೆ ಬುಲ್ಡೋಜರ್ ಸದ್ದು; ರಸ್ತೆಯಲ್ಲಿ ಗುಂಡು ಹಾರಿಸಿದವರ ಹೋಟೆಲ್ ಧ್ವಂಸ!