ಆಗ್ರಾ: ಮಥುರಾದ ಶ್ರೀ ಕೃಷ್ಣ ಜನ್ಮಭೂಮಿಯಲ್ಲಿರುವ ಶಾಹಿ ಈದ್ಗಾ ಮಸೀದಿಯ ಆವರಣದ ಸಮೀಕ್ಷೆ ನಡೆಸಲು ನೀಡಿದ್ದ ತನ್ನ ಆದೇಶವನ್ನು ತ್ವರಿತ ವಿಚಾರಣಾ ನ್ಯಾಯಾಲಯ ತಡೆಹಿಡಿದಿದ್ದು, ಸಮೀಕ್ಷೆಗೆ ತಡೆ ನೀಡಿದೆ.
ತನ್ನ ಹಿಂದಿನ ಆದೇಶವನ್ನು ರದ್ದುಗೊಳಿಸಿ, ಸಿವಿಲ್ ನ್ಯಾಯಾಧೀಶರ ಹಿರಿಯ ವಿಭಾಗ ನ್ಯಾಯಾಲಯ ಬುಧವಾರ ತಡೆಯಾಜ್ಞೆ ನೀಡಿತು. ಶ್ರೀ ಕೃಷ್ಣ ಜನ್ಮಭೂಮಿ ಪ್ರಕರಣದಲ್ಲಿ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ತನ್ನ ಆಕ್ಷೇಪಣೆಯನ್ನು ಸಲ್ಲಿಸಿತ್ತು. ನ್ಯಾಯಾಲಯ ಮುಂದಿನ ವಿಚಾರಣೆಯ ದಿನಾಂಕವನ್ನು ಏಪ್ರಿಲ್ 11ಕ್ಕೆ ನಿಗದಿಪಡಿಸಿದೆ. ಮುಂದಿನ ವಿಚಾರಣೆಯ ಸಮಯದಲ್ಲಿ, ಬಾಕಿ ಉಳಿದಿರುವ ಅರ್ಜಿಗಳನ್ನು ಅರ್ಹತೆಯ ಆಧಾರದ ಮೇಲೆ ವಿಲೇವಾರಿ ಮಾಡಲಾಗುತ್ತದೆ.
ಕಳೆದ ವರ್ಷ, ಹಿಂದೂ ಸೇನೆಯ ಪದಾಧಿಕಾರಿಗಳು ಸಲ್ಲಿಸಿದ್ದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಶಾಹಿ ಈದ್ಗಾ ಮಸೀದಿಯ ಆವರಣದ ಸಮೀಕ್ಷೆಗೆ ಆದೇಶಿಸಿತ್ತು. ಶಾಹಿ ಈದ್ಗಾ ಆವರಣಕ್ಕೆ ಭೇಟಿ ನೀಡಿ ವರದಿ ಸಿದ್ಧಪಡಿಸಲು ನ್ಯಾಯಾಲಯದ ಸಿಬ್ಬಂದಿಗೆ ಆದೇಶಿಸಿತ್ತು. ಆದರೆ, ಸಮೀಕ್ಷೆ ಆದೇಶವನ್ನು ಶಾಹಿ ಈದ್ಗಾ ಮಸೀದಿ ಮತ್ತು ಉತ್ತರ ಪ್ರದೇಶದ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿಯ ಆಡಳಿತ ಸಮಿತಿಗಳು ಆಕ್ಷೇಪಿಸಿದ್ದವು.
ಪ್ರಕರಣದಲ್ಲಿ ಎದುರಾಳಿಗಳ ಮಾತನ್ನು ಆಲಿಸದೆ ಶಾಹಿ ಈದ್ಗಾ ಮಸೀದಿ ಆವರಣದ ಸಮೀಕ್ಷೆಯ ಆದೇಶವನ್ನು ಜಾರಿಗೊಳಿಸಲಾಗಿದೆ ಎಂದು ಮಸೀದಿ ಆಡಳಿತ ಸಮಿತಿಯ ವಕೀಲ ನೀರಜ್ ಶರ್ಮಾ ಆಕ್ಷೇಪಿಸಿದರು. ಸಮೀಕ್ಷೆಯ ಕೆಲಸ ಆರಂಭವಾಗಿತ್ತು. ನ್ಯಾಯಾಲಯದ ತಡೆಯಾಜ್ಞೆ ಬಳಿಕ ಅದನ್ನು ನಿಲ್ಲಿಸಲಾಗಿದೆ.
ಭಗವಾನ್ ಬಾಲಕೃಷ್ಣ ಠಾಕೂರ್ ಕೇಶವ್ ದೇವ್ ಮಹಾರಾಜ್ (ಭಗವಾನ್ ಕೃಷ್ಣ) ಪರವಾಗಿ ಹಿಂದೂ ಸೇನೆಯ ಪದಾಧಿಕಾರಿಗಳು ಡಿಸೆಂಬರ್‌ನಲ್ಲಿ ಶ್ರೀ ಕೃಷ್ಣ ಜನ್ಮಭೂಮಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣವನ್ನು ದಾಖಲಿಸಿದ್ದಾರೆ. ಡಿಸೆಂಬರ್ 8, 2022ರಂದು, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು (ಹಿರಿಯ ವಿಭಾಗ) ನ್ಯಾಯಾಲಯ ಸಿಬ್ಬಂದಿ ಮೂಲಕ ಮಸೀದಿಯ ಸಮೀಕ್ಷೆಗೆ ಆದೇಶಿಸಿದ್ದರು.
ಶಾಹಿ ಈದ್ಗಾ ಮಸೀದಿಯನ್ನು ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್‌ನ 13.37 ಎಕರೆ ಜಾಗದಲ್ಲಿ ನಿರ್ಮಿಸಲಾಗಿದೆ ಎಂದು ವಾದಿಸಿರುವ ಅರ್ಜಿದಾರರು, ಮಸೀದಿಯನ್ನು ಸ್ಥಳಾಂತರಿಸುವಂತೆ ಕೋರಿದ್ದಾರೆ. ಅರ್ಜಿಯು ಅಕ್ಟೋಬರ್ 12, 1968ರಂದು ಶ್ರೀ ಕೃಷ್ಣ ಜನ್ಮಸ್ಥಾನ್ ಸೇವಾ ಸಂಘ ಮತ್ತು ಶಾಹಿ ಮಸೀದಿ ಈದ್ಗಾ ನಡುವಿನ ಒಪ್ಪಂದವನ್ನು ಪ್ರಶ್ನಿಸಿದೆ. ಅದರ ಆಧಾರದ ಮೇಲೆ ನೀಡಲಾದ ತೀರ್ಪನ್ನು ರದ್ದುಗೊಳಿಸುವಂತೆ ಕೋರಿದೆ.
ಇದನ್ನೂ ಓದಿ: ಮಥುರಾ ಶ್ರೀಕೃಷ್ಣ ಜನ್ಮಭೂಮಿ-ಮಸೀದಿ ವಿವಾದ; ಶಾಹಿ ಈದ್ಗಾ ಮಸೀದಿ ಸಂಕೀರ್ಣ ಸಮೀಕ್ಷೆ ನಡೆಸಲು ಜಿಲ್ಲಾ ಕೋರ್ಟ್ ಆದೇಶ