ತಿರುಮಲ ತಿರುಪತಿ ದೇವಸ್ಥಾನವು, ಜಿಯೋ ಪ್ಲಾಟ್ಫಾರ್ಮ್ ಸಹಕಾರದಿಂದ ‘ಶ್ರೀ ಟಿಟಿ ದೇವಸ್ಥಾನಂ (Sri TT Devasthanams)’ ಎಂಬ ಮೊಬೈಲ್ ಆ್ಯಪ್ನ್ನು (TTD Mobile App) ಬಿಡುಗಡೆ ಮಾಡಿದೆ. ತಿರುಪತಿ ದೇಗುಲ ಅಪಾರ ಸಂಖ್ಯೆಯಲ್ಲಿ ಭಕ್ತರನ್ನು ಹೊಂದಿದೆ. ಅವರಿಗೆ ತಿಮ್ಮಪ್ಪನ ದರ್ಶನ ವ್ಯವಸ್ಥೆಯನ್ನು ಇನ್ನಷ್ಟು ಸರಳ ಮತ್ತು ಅನುಕೂಲಕರವಾಗಿಸಿಕೊಡಲು ಈ ಆ್ಯಪ್ ಹೊರತಂದಿದ್ದಾಗಿ ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ತಿಳಿಸಿದ್ದಾರೆ.
ಅಂದಹಾಗೇ, ಜಿಯೋ ಪ್ಲಾಟ್ಫಾರ್ಮ್ ಈ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಈ ಆ್ಯಪ್ ಅಭಿವೃದ್ಧಿ ಪಡಿಸಿ ದೇವಸ್ಥಾನಕ್ಕೆ ದೇಣಿಗೆಯನ್ನಾಗಿ ನೀಡಿದೆ. ತಿರುಮಲ ತಿರುಪತಿ ದೇವಸ್ಥಾನದ ಐಟಿ ವಿಭಾಗವೂ ಆ್ಯಪ್ ಅಭಿವೃದ್ಧಿಯಲ್ಲಿ ಕೈ ಜೋಡಿಸಿತ್ತು. ಈ ಆ್ಯಪ್ನ್ನು ಕ್ಲೌಡ್ ಕಂಪ್ಯೂಟಿಂಗ್ ತಂತ್ರಜ್ಞಾನ ಬಳಸಿಕೊಂಡು ರಚಿಸಲಾಗಿದೆ.
Sri TT Devasthanams ಆ್ಯಪ್ನಲ್ಲಿ ದೇವರ ದರ್ಶನಕ್ಕೆ ಟಿಕೆಟ್ ಬುಕ್ ಮಾಡುವ ಆಯ್ಕೆಯಿಂದ ಹಿಡಿದು, ಯಾತ್ರಾರ್ಥಿಗಳು ವಸತಿಗೂ ಬುಕ್ಕಿಂಗ್ ಮಾಡಿಕೊಳ್ಳಬಹುದು. ದೇವರಿಗೆ ಅರ್ಜಿತ ಸೇವೆಗೆ ಕಾಯ್ದಿರಿಸುವ ಆಯ್ಕೆಯನ್ನೂ ಆ್ಯಪ್ನಲ್ಲಿ ನೀಡಲಾಗಿದೆ. ಹೀಗಾಗಿ ಯಾರಾದರೂ ತಿರುಮಲ ತಿರುಪತಿ ದೇಗುಲಕ್ಕೆ ಭೇಟಿ ಕೊಡುವವರು ಇದ್ದರೆ ಅಂಥವರು ಈ ಆ್ಯಪ್ ಡೌನ್ಲೋಡ್ ಮಾಡಿಕೊಂಡರೆ ಉಪಯೋಗ ಆಗುತ್ತದೆ ಎಂದು ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಹೇಳಿದ್ದಾರೆ.
ಇದನ್ನೂ ಓದಿ: NIMBUS app: ಬಿಎಂಟಿಸಿ ಬಸ್ಸುಗಳ ಓಡಾಟದ ಮಾಹಿತಿ ನೀಡುವ ಆ್ಯಪ್ ಈ ವಾರ ಲಭ್ಯ
ಆ್ಯಪ್ ಬಗ್ಗೆ ಮಾಹಿತಿ ನೀಡಿದ ಟಿಟಿಡಿ ಕಾರ್ಯಕಾರಿ ಅಧಿಕಾರಿ ಎ.ವಿ.ಧರ್ಮಾ ರೆಡ್ಡಿ, ‘ಭಕ್ತರಿಗಾಗಿ ತಿರುಮಲ ತಿರುಪತಿ ದೇವಸ್ಥಾನದಿಂದ ಒಂದು ಡಿಜಿಟಲ್ ಗೇಟ್ ವೇಯನ್ನು ನಾವು ಹೊರತಂದಿದ್ದೇವೆ. ಇದರಲ್ಲಿ ದೇವರ ದರ್ಶನಕ್ಕೆ ಟಿಕೆಟ್ ಬುಕ್ಕಿಂಗ್ ಮಾಡುವ ಜತೆ, ದೇವಸ್ಥಾನದಲ್ಲಿ ನಡೆಯುವ ವಿಶೇಷ ಪೂಜೆ, ಉತ್ಸವ, ಕಾರ್ಯಕ್ರಮದ ಬಗ್ಗೆಯೂ ಮಾಹಿತಿಯನ್ನು ಅಪ್ಡೇಟ್ ಮಾಡುತ್ತಿರುತ್ತೇವೆ. ಹೀಗಾಗಿ ಭಕ್ತರಿಗೆ ಇನ್ನಷ್ಟು ಪ್ರಯೋಜನ ಆಗಲಿದೆ. ಈ ಆ್ಯಪ್ ಹೊರತರಲು ನಮ್ಮ ದೇಗುಲದ ಐಟಿ ವಿಭಾಗ ಮತ್ತು ಜಿಯೋ ಪ್ಲಾಟ್ಫಾರ್ಮ್ ಸತತ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದವು’ ಎಂದು ಹೇಳಿದ್ದಾರೆ.