Site icon Vistara News

SSLV launch: ಯಶಸ್ವಿಯಾಗಿ ಗಗನಕ್ಕೇರಿದ SSLV-D2: ಮೂರು ಉಪಗ್ರಹ ಕಕ್ಷೆಯತ್ತ

SSLV- D2

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶುಕ್ರವಾರ ಬೆಳಗ್ಗೆ 9.18ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಎಸ್‌ಎಸ್‌ಎಲ್‌ವಿ-ಡಿ೨ (SSLV- D2) ವಾಹಕವನ್ನು ಯಶಸ್ವಿಯಾಗಿ (SSLV launch) ಉಡಾಯಿಸಿದೆ.

ಇದು ಇಸ್ರೋದ ಸಣ್ಣ ಉಪಗ್ರಹ ಉಡಾವಣಾ ವಾಹನದ (SSLV- D2) ಎರಡನೇ ಆವೃತ್ತಿಯಾಗಿದ್ದು, ಈ ವಾಹಕದ ಮೂಲಕ ಮೂರು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಿದೆ. ಹೊಸ ರಾಕೆಟ್ ತನ್ನ 15 ನಿಮಿಷಗಳ ಹಾರಾಟದ ಸಮಯದಲ್ಲಿ ಮೂರು ಉಪಗ್ರಹಗಳನ್ನು- ಇಸ್ರೋದ EOS-07, ಅಮೆರಿಕ ಮೂಲದ ಸಂಸ್ಥೆ ಅಂಟಾರಿಸ್‌ನ ಜಾನಸ್ -1 ಮತ್ತು ಚೆನ್ನೈ ಮೂಲದ ಸ್ಪೇಸ್‌ಕಿಡ್ಜ್‌ನ ಆಜಾದಿಸ್ಯಾಟ್ -2 ಅನ್ನು 450 ಕಿಮೀ ವೃತ್ತಾಕಾರದ ಕಕ್ಷೆಗೆ ಸೇರಿಸಲು ಪ್ರಯತ್ನಿಸಲಿದೆ.

SSLVಯು 34 ಮೀ ಎತ್ತರದ, 2 ಮೀ ವ್ಯಾಸದ ವಾಹನ. 120 ಟನ್‌ಗಳ ಲಿಫ್ಟ್-ಆಫ್ ದ್ರವ್ಯರಾಶಿಯನ್ನು ಹೊಂದಿದೆ. 500 ಕೆಜಿಯವರೆಗಿನ ಉಪಗ್ರಹಗಳನ್ನು ಭೂಮಿಯ ಕಕ್ಷೆಗೆ ಉಡಾವಣೆ ಮಾಡುತ್ತದೆ. ಕಡಿಮೆ ವೆಚ್ಚದಲ್ಲಿ ವಾಣಿಜ್ಯಕವಾಗಿ ಇದನ್ನು ಮಾಡಿಕೊಡುತ್ತದೆ. ಇವು ಭೂಮಿಯ ಕೆಳಕಕ್ಷೆಯಲ್ಲಿರುತ್ತವೆ ಹಾಗೂ ಕಡಿಮೆ ಪರಿಭ್ರಮಣ ಸಮಯ ತೆಗೆದುಕೊಳ್ಳುತ್ತವೆ. ಹೆಚ್ಚಿನ ಉಪಗ್ರಹಗಳನ್ನು ಕನಿಷ್ಠ ಉಡಾವಣಾ ಮೂಲಸೌಕರ್ಯದಲ್ಲಿ ಉಡಾಯಿಸುತ್ತದೆ.

ಕಳೆದ ವರ್ಷ ಆಗಸ್ಟ್ 9ರಂದು ನಡೆಸಲಾದ SSLVಯ ಮೊದಲ ಪರೀಕ್ಷಾರ್ಥ ಹಾರಾಟ ಭಾಗಶಃ ವಿಫಲವಾಗಿತ್ತು. ವೇಗದಲ್ಲಿನ ಕೊರತೆಯಿಂದಾಗಿ ಉಡಾವಣಾ ವಾಹನವು ಉಪಗ್ರಹವನ್ನು ಅಸ್ಥಿರ ಕಕ್ಷೆಗೆ ಕೊಂಡೊಯ್ದಿತ್ತು.

Exit mobile version