ಹೈದರಾಬಾದ್: ಸಿಹಿ ಗೆಣಸು ಪ್ರಿಯ, ಹೈದರಾಬಾದ್‌ನ ನೆಹರೂ ಮೃಗಾಲಯದಲ್ಲಿದ್ದ (Nehru Zoological Garden) ದೈತ್ಯ ಆಮೆ ಚಾಣಕ್ಯ (Star Tortoise Chanakya) ತನ್ನ 125ನೇ ವಯಸ್ಸಿನಲ್ಲಿ ಮೃತಪಟ್ಟಿದ್ದು, ಪ್ರಾಣಿಪ್ರಿಯರನ್ನು ನೋವಿನ ಮಡುವಿನಲ್ಲಿ ಮುಳುಗಿಸಿದೆ. ಮೃಗಾಲಯದ ಅತ್ಯಂತ ಹಿರಿಯ ನಿವಾಸಿ ಎಂದು ಗುರುತಿಸ್ಪಡುತ್ತಿದ್ದ ಚಾಣಕ್ಯ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಗ್ಯಾಲಪಗೋಸ್ ವರ್ಗಕ್ಕೆ (Galapagos giant tortoise) ಸೇರಿದ ಈ ಆಮೆಯ ನಿಧನಕ್ಕೆ ಅನೇಕರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಕಾರಣವೇನು?
ಚಾಣಕ್ಯ ತನ್ನ ವಯೋಸಹಜ ಸಮಸ್ಯೆಗಳಿಂದ ಮೃತಪಟ್ಟಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಚಾಣಕ್ಯ ಕಳೆದ 10 ದಿನಗಳಿಂದ ಆಹಾರ ಸೇವಿಸುತ್ತಿರಲಿಲ್ಲ ಎಂದು ಮೃಗಾಲಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ʼʼಚಾಣಕ್ಯ ಆಹಾರ ಸೇವಿಸುವುದನ್ನು ನಿಲ್ಲಿಸಿದ ನಂತರ ಮೃಗಾಲಯದ ಅಧಿಕಾರಿಗಳು ಕಳವಳಗೊಂಡಿದ್ದರು. ಬಳಿಕ ಮೃಗಾಲಯದ ಪಶುವೈದ್ಯಕೀಯ ತಂಡದ ಮುಖ್ಯಸ್ಥ ಡಾ.ಎಂ.ಎ.ಹಕೀಮ್ ಚಾಣಕ್ಯನ ಮೇಲ್ವಿಚಾರಣೆ ನಡೆಸತೊಡಗಿದರು. ಚಾಣಕ್ಯನ ನೆಚ್ಚಿನ ಸಿಹಿ ಗೆಣಸು ಮತ್ತು ಪಾಲಕ್ ಒದಗಿಸಿದರೂ ಮುಟ್ಟುತ್ತಿರಲಿಲ್ಲ. ಬೆಳಗ್ಗೆ ಮೃಗಾಲಯದ ಸಿಬ್ಬಂದಿ ಆವರಣವನ್ನು ಸ್ವಚ್ಛಗೊಳಿಸಲು ಹೋದಾಗ ಚಾಣಕ್ಯ ಮೃತಪಟ್ಟಿರುವುದು ಕಂಡು ಬಂತುʼʼ ಎಂದು ಮೂಲಗಳು ತಿಳಿಸಿವೆ.
1963ರಲ್ಲಿ ನಾಂಪಲ್ಲಿಯ ಸಾರ್ವಜನಿಕ ಉದ್ಯಾನದಿಂದ (ಬಾಗ್-ಎ-ಆಮ್) ಚಾಣಕ್ಯನನ್ನು ಹೈದರಾಬಾದ್‌ನ ನೆಹರೂ ಮೃಗಾಲಯಕ್ಕೆ ಕರೆ ತರಲಾಗಿತ್ತು. ಮೃಗಾಲಯ ಸ್ಥಾಪಿಸುವ ಮುನ್ನ ಇದು ಉದ್ಯಾನವನ ಆಗಿತ್ತು. ಹೈದರಾಬಾದ್‌ನ ಅತ್ಯಂತ ಹಳೆಯ ಉದ್ಯಾನವನವಾಗಿರುವ ಇದನ್ನು ಏಳನೇ ನಿಜಾಮ ನಿರ್ಮಿಸಿದ್ದರು.
ಪೋಸ್ಟ್ ಮಾರ್ಟಮ್ ವರದಿಯಲ್ಲಿ ಏನಿದೆ?
ಈ ಹಿರಿಯ ಆಮೆಯ ಪೋಸ್ಟ್ ಮಾರ್ಟಮ್ ರಿಪೋರ್ಟ್ ಹೊರ ಬಂದಿದೆ. ಬಹು ಅಂಗಾಂಗ ವೈಫಲ್ಯದಿಂದಾಗಿ ಚಾಣಕ್ಯ ಸಾವನ್ನಪ್ಪಿದೆ ಎನ್ನುವ ಮಾಹಿತಿ ಬಹಿರಂಗಗೊಂಡಿದೆ. ಹೆಚ್ಚಿನ ತನಿಖೆಗಾಗಿ ಆಮೆಯ ಮಾದರಿಗಳನ್ನು ಪಶು ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ.
ಗ್ಯಾಲಪಗೋಸ್ ತಳಿಯ ವೈಶಿಷ್ಟ್ಯ
ಗ್ಯಾಲಪಗೋಸ್ ತಳಿಯ ಆಮೆಗಳು ಬೃಹದಾಕಾರವಾಗಿ ಬೆಳೆಯುತ್ತವೆ. ಚಾರ್ಲ್ಸ್ ಡಾರ್ವಿನ್ ಅವರ ‘ಪ್ರಭೇದಗಳ ವಿಕಾಸ’ ಸಿದ್ಧಾಂತಕ್ಕೆ ನೀಡಿದ ಕೊಡುಗೆಗಾಗಿ ಇವು ಜನಪ್ರಿಯವಾಗಿವೆ. ಮಾನವ ವಿಕಾಸದ ಬಗ್ಗೆ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳಲು ವಿಜ್ಞಾನಿಗಳು ಈ ತಳಿಗಳನ್ನು ವರ್ಷಗಳ ಕಾಲ ಅಧ್ಯಯನ ನಡೆಸಿದ್ದರು ಎನ್ನುತ್ತದೆ ಇತಿಹಾಸ.
ಇದನ್ನೂ ಓದಿ: Biggest Snake: ವಿಶ್ವದ ಬೃಹತ್ ಹಾವು ಪತ್ತೆ; ಈ ಆನಕೊಂಡದ ಉದ್ದ, ಭಾರ ನಿಮ್ಮ ಊಹೆಗೂ ನಿಲುಕದ್ದು!
ಹೈದರಾಬಾದ್‌ನ ನೆಹರೂ ಮೃಗಾಲಯದಲ್ಲಿ ಸುಮಾರು 193 ಜಾತಿಯ ಪಕ್ಷಿಗಳು, ಪ್ರಾಣಿಗಳು ಮತ್ತು ಸರೀಸೃಪಗಳಿವೆ. ಈ ಮೃಗಾಲಯವು ಅಪರೂಪದ, ಅಳಿವಿನಂಚಿನಲ್ಲಿರುವ ಖಡ್ಗಮೃಗ, ಆನೆ, ನೀಲಗಿರಿ ಲಂಗೂರ್, ಸಿಂಹ ಬಾಲದ ಕೋತಿ, ಸರಸ್ ಕ್ರೇನ್, ಬೂದು ಪೆಲಿಕನ್ ಮತ್ತು ಪೇಂಟೆಡ್ ಕೊಕ್ಕರೆಗಳಿಗೆ ಹೆಸರುವಾಸಿ. ಕಪ್ಪು ತಲೆಯ ಐಬಿಸ್, ಯುರೇಷಿಯನ್ ಸ್ಪೂನ್ಬಿಲ್, ಭಾರತೀಯ ಹೆಬ್ಬಾವು, ಭಾರತೀಯ ನಕ್ಷತ್ರ ಆಮೆ, ಭಾರತೀಯ ಸಾಫ್ಟ್ ಶೆಲ್ ಆಮೆ ಮತ್ತು ಭಾರತೀಯ ಊಸರವಳ್ಳಿಯೂ ಇಲ್ಲಿದೆ. ಜತೆಗೆ ಒರಾಂಗುಟನ್, ನೀರಾನೆ, ಆಫ್ರಿಕನ್ ಸಿಂಹ, ಜಾಗ್ವಾರ್, ಉಷ್ಟ್ರಪಕ್ಷಿ, ಮಕಾವ್ಸ್ ಮತ್ತು ಹಸಿರು ಇಗುವಾನಾವನ್ನು ಈ ಮೃಗಾಲಯದಲ್ಲಿ ನೋಡಬಹುದು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ