ಬೆರ್ಹಾಂಪುರ: ಕುಡಿತದ ಮತ್ತಿನಲ್ಲಿದ್ದಾಗ ಏನು ಮಾಡಿದರೂ ಗೊತ್ತಾಗಲ್ಲ ಎನ್ನುವುದಕ್ಕೆ, ಕುಡಿದಾಗ ಗೆಳೆಯರೇ ಆದರೂ ಏನು ಬೇಕಾದರೂ ಮಾಡಬಲ್ಲರು ಎನ್ನುವುದಕ್ಕೆ ಬೆರ್ಹಾಂಪುರದಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ.
ಅವನ ಹೆಸರು ಕೃಷ್ಣ ರಾವತ್. ಅವನ ಮೂಲ ಊರು ಗುಜರಾತ್‌ನ ಗಂಜಾಂ. ಸೂರತ್‌ನಲ್ಲಿ ಒಂದು ಕೆಲಸ ಮಾಡ್ತಾ ಇದ್ದ. ಅವನಿಗೆ ಸ್ವಲ್ಪ ಕುಡಿತದ ಚಟ. ಅದಕ್ಕಾಗಿಯೇ ಗೆಳೆಯರ ಒಂದು ಟೀಮ್ ಇತ್ತು. ಕುಡಿಯುತ್ತಾ ಮಸ್ತ್ ಮಜಾ ಮಾಡ್ತಾ ಒಂದು ರೀತಿಯಲ್ಲಿ ಸುಖವಾಗಿಯೇ ಇದ್ದ!
ಅವನ ಕಷ್ಟದ ದಿನಗಳು ಆರಂಭವಾಗಿದ್ದು ಹತ್ತು ದಿನಗಳ ಹಿಂದೆ. ಆವತ್ತು ಅವನು ಗೆಳೆಯರ ಜತೆ ಪಾರ್ಟಿ ಮಾಡ್ತಾ ಇದ್ದ. ಎಲ್ಲರೂ ಚೆನ್ನಾಗಿ ಟೈಟ್ ಆಗಿದ್ದರು. ಕೃಷ್ಣ ರಾವತ್ ಬಹುಶಃ ಎಂದಿಗಿಂತ ಸ್ವಲ್ಪ ಜಾಸ್ತೀನೇ ಮತ್ತೇರಿಸಿಕೊಂಡಿದ್ದ ಅನಿಸುತ್ತದೆ. ಆವತ್ತು ಕುಡುಕ ಗೆಳೆಯರು ಅವನ ಜೀವದ ಜತೆಗೇ ಆಟವಾಡಿದ್ದರು.
ಆವತ್ತು ಚೆನ್ನಾಗಿ ಕುಡಿದ ರಾವತ್‌ಗೆ ಈ ಕಡೆ ಏನು ನಡೆಯುತ್ತಿದೆ ಎನ್ನುವುದು ಗೊತ್ತಾಗಿಲ್ಲ ಅನಿಸುತ್ತದೆ. ಉಳಿದ ಗೆಳೆಯರೆಲ್ಲ ಸೇರಿ ಕುಡಿತಕ್ಕೆ ಬಳಸುತ್ತಿದ್ದ ಒಂದು ಸ್ಟೀಲ್ ಗ್ಲಾಸನ್ನು ತಂದು ರಾವತ್‌ನ ಗುದ ದ್ವಾರದ ಒಳಗೆ ತಳ್ಳಿದರು. ಅದೂ ತೀರಾ ಒಳಕ್ಕೆ!
ಹೀಗೆಲ್ಲ ಮಾಡಿ ಅವರು ಅವರವರ ಮನೆಗೆ ಹೋದರು. ಕೃಷ್ಣ ರಾವತ್ ಕೂಡಾ ಮನೆಗೆ ಹೋದ. ಆದರೆ ಮರುದಿನ ಏಳುವಾಗ ಅವನಿಗೆ ಹೊಟ್ಟೆ ಯಾಕೋ ನೋಯುತ್ತಿದೆಯಲ್ವಾ ಅನಿಸಿತು. ಮರುದಿನ ಅದು ಜಾಸ್ತಿ ಆಯಿತು. ಹಾಗೇ ಕೆಲವು ದಿನ ಕಳೆದ. ಈ ನಡುವೆ ಮಲ ವಿಸರ್ಜನೆಯೂ ಆಗುತ್ತಿರಲಿಲ್ಲ. ಇನ್ನು ಇಲ್ಲಿ ನಿಂತರೆ ಅಗಲಿಕ್ಕಿಲ್ಲ ಎಂದು ಹೇಗೋ ಕಷ್ಟಪಟ್ಟು ಗಂಜಾಂನಲ್ಲಿರುವ ಮನೆಗೆ ಹೋದ.
ಅಷ್ಟು ಹೊತ್ತಿಗೆ ಅವನ ಹೊಟ್ಟೆ ಊದಿಕೊಂಡಿತ್ತು. ಕೂಡಲೇ ಮನೆಯವರ ಸಲಹೆಯಂತೆ ಎಂಕೆಸಿಜಿ ಮೆಡಿಕಲ್ ಕಾಲೇಜಿಗೆ ಹೋಗಲಾಯಿತು. ಅಲ್ಲಿ ಪರೀಕ್ಷೆ ನಡೆಸಿದರು. ಹೊರಗಿನಿಂದ ನೋಡಿದಾಗ ಏನೂ ಗೊತ್ತಾಗಲ್ಲ. ಎಕ್ಸ್‌ರೇ ಮಾಡಿ ನೋಡೋಣ ಎಂದರು. ಎಕ್ಸ್‌ರೇ ನೋಡಿ ವೈದ್ಯರೇ ಬೆಚ್ಚಿ ಬಿದ್ದರು. ಯಾಕೆಂದರೆ, ಸಣ್ಣ ಕರುಳಿನ ತುದಿಯಲ್ಲಿ ಒಂದು ಸ್ಟೀಲ್ ಗ್ಲಾಸ್ ಕಂಡಿತು. ಅದನ್ನು ಒತ್ತಡ ಹಾಕಿ ಗುದದ್ವಾರದ ಮೂಲಕವೇ ಹೊರತೆಗೆಯಲು ಯತ್ನಿಸಿದರು. ಆದರೆ, ಅದು ಸಾಧ್ಯವಾಗಲಿಲ್ಲ. ಕೊನೆಗೆ ಶಸ್ತ್ರಕ್ರಿಯೆ ನಡೆಸಿ ಹೊರತೆಗೆಯಬೇಕಾಯಿತು. ಈಗ ಕೃಷ್ಣ ರಾವತ್ ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳುತ್ತಿದ್ದಾನೆ.
ಇದನ್ನೂ ಓದಿ| Viral News | 7 ವರ್ಷದಲ್ಲಿ ಮೊದಲ ಸಲ ಕಚೇರಿಗೆ 20 ನಿಮಿಷ ತಡವಾಗಿ ಹೋದ ಉದ್ಯೋಗಿಗೆ ಇದೆಂಥಾ ಶಿಕ್ಷೆ?