ನವದೆಹಲಿ: ಬುಧವಾರ ಭಾರತೀಯ ಷೇರುಪೇಟೆ ದಾಖಲೆಯನ್ನು ಬರೆಯಿತು(Indian Stock Market). ದೇಶೀಯ ಷೇರುಗಳು ಬುಧವಾರ ಉತ್ತಮ ವಹಿವಾಟು ನಡೆಸಿದವು. ನಿಫ್ಟಿ 50 (Nifty 50) ಸೂಚ್ಯಂಕವು ಇಂಟ್ರಾ-ಡೇ ವಹಿವಾಟಿನಲ್ಲಿ 21,676 ಅಂಕಗಳೊಂದಿಗೆ ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿತು, ಈ ಮಟ್ಟಕ್ಕಿಂತ ಸ್ವಲ್ಪ ಕಡಿಮೆಯಾಗಿ 21,655ರಲ್ಲಿ ಅಂತ್ಯವಾಯಿತು. ಅದೇ ರೀತಿ, ಬಾಂಬೆ ಷೇರು ಪೇಟೆ ಸೆನ್ಸೆಕ್ಸ್ (Sensex) ಕೂಡ ದಾಖಲೆಯ 72,098 ಅಂಕಗಳವರೆಗೂ ಏರಿಕೆಯನ್ನು ದಾಖಲಿಸಿ, ದಿನದಾಂತ್ಯಕ್ಕೆ 72,038ರಲ್ಲಿ ಸಮಾಪ್ತಿಯಾಯಿತು. ಸೆನ್ಸೆಕ್ಸ್ ಒಟ್ಟು 702 ಅಂಕ ಏರಿಕೆ ಕಂಡಿತು.
ಮುಂಚೂಣಿ ಸೂಚ್ಯಂಕಗಳ ಜೊತೆಯಲ್ಲಿ ಏರಿಕೆ ಕಂಡರೂ, ಇಂದಿನ ಸೆಷನ್‌ನಲ್ಲಿ ಅವುಗಳನ್ನು ದುರ್ಬಲಗೊಳಿಸಿದವು. ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕವು ಶೇಕಡಾ 0.41 ರಷ್ಟು ಮತ್ತು ಬಿಎಸ್‌ಇ ಸ್ಮಾಲ್‌ಕ್ಯಾಪ್ ಸೂಚ್ಯಂಕವು ಶೇಕಡಾ 0.20 ರಷ್ಟು ಏರಿಕೆಯಾಗಿದೆ.
ನಿಫ್ಟಿ ಪಿಎಸ್‌ಯು ಬ್ಯಾಂಕ್ ಸೂಚ್ಯಂಕ ಶೇ.2ರಷ್ಟು ಏರಿಕೆ ಕಂಡರೆ, ನಿಫ್ಟಿ ಆಟೋ ಸೂಚ್ಯಂಕ ಶೇ.1.38, ನಿಫ್ಟಿ ಮೆಟಲ್ ಸೂಚ್ಯಂಕ 1.39 ಮತ್ತು ನಿಫ್ಟಿ ಬ್ಯಾಂಕ್ ಸೂಚ್ಯಂಕ 1.13ರಷ್ಟು ಏರಿಕೆಯನ್ನು ದಾಖಲಿಸಿತು.
ಬಾಂಬೆ ಷೇರು ಪೇಟೆಯಲ್ಲಿ ಅಲ್ಟ್ರಾ ಟೆಕ್ ಸಿಮೆಂಟ್, ಜೆಎಸ್‌ಡಬ್ಲ್ಯೂ, ಟಾಟಾ ಮೋಟರ್ಸ್, ಭಾರ್ತಿ ಏರ್‌ಟೆಲ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಲಾರ್ಸೆನ್ ಟುಬ್ರೊ, ಇನ್ಫೋಸಿಸ್ ಮತ್ತು ಬಜಾಜ್ ಫಿನ್ ಸರ್ವ್ ಷೇರುಗಳು ಹೆಚ್ಚು ಲಾಭ ಕಂಡವು. ಅದೇ ರೀತಿ ನಿಫ್ಟಿಯಲ್ಲಿ ಎನ್‌ಟಿಪಿಸಿ ಮತ್ತು ಟೆಕ್ ಮಹೀಂದ್ರಾ ಷೇರುಗಳು ಹಿನ್ನಡೆ ಅನುಭವಿಸಿದವು.
ಮತ್ತೊಂದೆಡೆ ಏಷ್ಯನ್ ಮಾರುಕಟ್ಟೆಗಳಾದ ಸೋಲ್, ಟೋಕಿಯೊ, ಶಾಂಘೈ ಮತ್ತು ಹಾಂಕಾಂಗ್ ಮಾರುಕಟ್ಟೆಗಳೂ ಕೂಡ ಏರಿಕೆಯನ್ನು ದಾಖಲಿಸಿವೆ. ಅದೇ ರೀತಿ, ಯುರೋಪಿಯನ್ ಮಾರುಕಟ್ಟೆ ಮತ್ತು ಅಮೆರಿಕನ್ ಮಾರುಕಟ್ಟೆಗಳೂ ಕೂಡ ಸಕಾರಾತ್ಮಕ ತಮ್ಮ ವಹಿವಾಟನ್ನು ಮುಗಿಸಿವೆ.
ಈ ಸುದ್ದಿಯನ್ನೂ ಓದಿ: Stock Market: ಏರುಗತಿಯಲ್ಲಿದ್ದ ಭಾರತೀಯ ಷೇರುಪೇಟೆ ದಿಢೀರ್ ಕುಸಿತ! ಕಾರಣವೇನು?