Site icon Vistara News

PM Narendra Modi: ಸಂದೇಶ್‌ಖಾಲಿ ಚಂಡಮಾರುತ ಅಪ್ಪಳಿಸಲಿದೆ; ಮಮತಾಗೆ ಮೋದಿ ವಾರ್ನಿಂಗ್‌

Narendra Modi

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್‌ (Trinamool Congress) ಆಡಳಿತದಡಿಯಲ್ಲಿ ಮಹಿಳೆಯರು ನಲುಗುತ್ತಿದ್ದಾರೆ. ಪಶ್ಚಿಮ ಬಂಗಾಳದ (West Bengal) ಮಹಿಳೆಯರು ರಾಜ್ಯ ಸರ್ಕಾರದ ಬಗ್ಗೆ ಆಕ್ರೋಶಗೊಂಡಿದ್ದು, ಸಂದೇಶಖಾಲಿಯಲ್ಲಿ (Sandeshkhali) ಆರಂಭವಾದ ಈ ಚಂಡಮಾರುತವು ದ್ವೀಪಕ್ಕೆ ಸೀಮಿತವಾಗದೆ ಪಶ್ಚಿಮ ಬಂಗಾಳದ ಮೂಲೆ ಮೂಲೆಯನ್ನು ತಲುಪುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ.

ಕೋಲ್ಕತ್ತಾದಲ್ಲಿ ದೇಶದ ಮೊದಲ ನೀರಿನಡಿಯ ಮೆಟ್ರೋ (underwater metro) ಮಾರ್ಗವನ್ನು ಅವರು ಉದ್ಘಾಟಿಸಿದ ಬಳಿಕ ಸಂದೇಶ್‌ಖಾಲಿ ಜಿಲ್ಲೆಯ ಬರಾಸತ್‌ನಲ್ಲಿ ನಡೆದ ಮಹಿಳಾ ಮೋರ್ಚಾದ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದರು. ಬಂಗಾಳದ ರಾಜಕೀಯದಲ್ಲಿ ಭಾರಿ ವಿವಾದವಾಗಿ ಹೊರಹೊಮ್ಮಿರುವ ಸಂದೇಶ್‌ಖಾಲಿ ಪ್ರಕರಣದ ಬಗ್ಗೆ ಮಮತಾ ಬ್ಯಾನರ್ಜಿ (Mamata Banerjee) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ, ಬಂಗಾಳ ಸರ್ಕಾರವು ʼಅಪರಾಧಿʼಯನ್ನು ರಕ್ಷಿಸಲು ತನ್ನ ಎಲ್ಲಾ ಶಕ್ತಿಯನ್ನು ಬಳಸುತ್ತಿದೆ ಎಂದು ದೂರಿದ್ದಾರೆ.

“ಅಬ್‌ ಕಿ ಬಾರ್, 400 ಪಾರ್, ಎನ್‌ಡಿಎ ಸರ್ಕಾರ್” ಎಂಬ ಬಿಜೆಪಿಯ ರಣಕಹಳೆಯನ್ನು ಮೋದಿ ಇಂದು ಬಂಗಾಳದಲ್ಲಿ ಮೊಳಗಿಸಿದರು. ಬರಾಸತ್ ಕಾರ್ಯಕ್ರಮಕ್ಕೆ ಮುಂಚಿತವಾಗಿ ಪ್ರಧಾನ ಮಂತ್ರಿಗಳು ಕೋಲ್ಕತ್ತಾ ಮೆಟ್ರೋದ ಹಲವಾರು ಹೊಸ ಮಾರ್ಗಗಳನ್ನು ಲೋಕಾರ್ಪಣೆಗೊಳಿಸಿದರು. ನಂತರ ಮೆಟ್ರೋದಲ್ಲಿ ಪ್ರಯಾಣಿಸಿದರು; ಅದರಲ್ಲಿದ್ದ ಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

“ಸಾರ್ವಜನಿಕ ಸಾರಿಗೆಯನ್ನು ಆಧುನೀಕರಿಸುವುದು ತಮ್ಮ ಸರ್ಕಾರದ ಆದ್ಯತೆಯಾಗಿದೆ. ಹಲವಾರು ತಲೆಮಾರುಗಳು ಕೋಲ್ಕತ್ತಾ ಮೆಟ್ರೋವನ್ನು ನೋಡುತ್ತಾ ಬೆಳೆದಿವೆ. ಬಾಲ್ಯದಲ್ಲಿ ಕೋಲ್ಕತ್ತಾಗೆ ಬಂದಾಗ ಮೆಟ್ರೋ ನೋಡುವುದೇ ಒಂದು ಆಕರ್ಷಣೆಯಾಗಿತ್ತು. ಆದರೆ ಇಂದು ಕೋಲ್ಕತ್ತಾ ಮೆಟ್ರೋ ಕೂಡ ಬಿಜೆಪಿ ಸರಕಾರ ಯಾವ ವೇಗದಲ್ಲಿ ಕೆಲಸ ಮಾಡುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. 2014ರ ಹಿಂದಿನ 40 ವರ್ಷಗಳಲ್ಲಿ ಕೋಲ್ಕತ್ತಾ ಮೆಟ್ರೋ ಮಾರ್ಗ 28 ಕಿ.ಮೀ. ಇತ್ತು. ಆದರೆ ಕಳೆದ 10 ವರ್ಷಗಳಲ್ಲಿ 31 ಕಿ.ಮೀ ಮೆಟ್ರೊ ಮಾರ್ಗವನ್ನು ಸೇರಿಸಲಾಗಿದೆ. ಬಿಜೆಪಿ ಸರ್ಕಾರವು ಬಂಗಾಳ ಮತ್ತು ದೇಶದ ಅಭಿವೃದ್ಧಿಗೆ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿದೆ” ಎಂದು ಅವರು ಹೇಳಿದರು.

“ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಕೂಡ ಇರುವ ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟದ ನಾಯಕರು, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಭಯಭೀತರಾಗಿದ್ದಾರೆ. ಅವರು ತಮ್ಮ ನಿದ್ರೆ ಮತ್ತು ಸಮತೋಲನವನ್ನು ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಅವರು ಮೋದಿಯನ್ನು ನಿಂದಿಸಲು ಪ್ರಾರಂಭಿಸಿದ್ದಾರೆ” ಎಂದು ಪ್ರಧಾನಿ ಹೇಳಿದರು.

“ನನಗೆ ಕುಟುಂಬವಿಲ್ಲ ಎಂಬ ಕಾರಣಕ್ಕೆ ನಾನು ವಂಶಾಡಳಿತದ ವಿರುದ್ಧ ಮಾತನಾಡುತ್ತಿದ್ದೇನೆ ಎಂದು ಇಂಡಿಯಾ ಮೈತ್ರಿಕೂಟದ ನಾಯಕರು ಈಗ ಹೇಳುತ್ತಿದ್ದಾರೆ. ಅವರು ನನ್ನ ಕುಟುಂಬ ಎಲ್ಲಿದೆ ಎಂದು ತಿಳಿಯಲು ಬಯಸುತ್ತಾರೆ. ಆ ರಾಜವಂಶದವರು ಇಲ್ಲಿಗೆ ಬರಬೇಕು. ಇದು ಮೋದಿಯ ಪರಿವಾರ” ಎಂದು ನೆರೆದ ಜನತೆಯನ್ನು ಉದ್ದೇಶಿಸಿ ಅವರು ನುಡಿದರು. ಆ ಮೂಲಕ, ಆರ್‌ಜೆಡಿ ನಾಯಕ ಲಾಲು ಯಾದವ್ ಅವರು ನೀಡಿದ್ದ “ಮೋದಿಗೆ ಕುಟುಂಬವಿಲ್ಲ” ಎಂಬ ವ್ಯಂಗ್ಯಕ್ಕೆ ಪ್ರತ್ಯುತ್ತರ ನೀಡಿದರು.

“ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳು ನನ್ನನ್ನು ಪ್ರತಿ ಕಷ್ಟದಿಂದ ರಕ್ಷಿಸಿದ್ದಾರೆ. ನನಗೆ ಬಂಗಾಳದ ತಾಯಂದಿರು ಮತ್ತು ಸಹೋದರಿಯರು ದುರ್ಗಾ ಮಾತೆಯಂತೆ ಕಾಣುತ್ತಾರೆ. ನಾನು ಚಿಕ್ಕವಯಸ್ಸಿನಲ್ಲೇ ಮನೆ ತೊರೆದು ದೇಶಾದ್ಯಂತ ಸುತ್ತಾಡಿದ್ದೇನೆ. ಆಗ ನನ್ನ ಜೇಬಿನಲ್ಲಿ ಬಿಡಿಗಾಸೂ ಇರಲಿಲ್ಲ. ಆದರೆ ಒಬ್ಬರಲ್ಲದಿದ್ದರೆ ಇನ್ನೊಬ್ಬರು ನಾನು ಊಟ ಮಾಡಿದ್ದೇನಾ ಎಂದು ಪ್ರತಿದಿನ ನನ್ನನ್ನು ಕೇಳುತ್ತಾರೆ. ನಾನು ಸಾಕಷ್ಟು ಸುತ್ತಾಡಿದ್ದೇನೆ. ಆದರೆ ಒಂದು ದಿನವೂ ಹಸಿವಿನಿಂದ ಕಳೆಯಲಿಲ್ಲ. ಈ ದೇಶದ 140 ಕೋಟಿ ಜನರು ನನ್ನ ಕುಟುಂಬ ಎಂದು ನಾನು ಹೇಳುತ್ತೇನೆ. ನಾನು ಈಗ ಆ ಉಪಕಾರವನ್ನು ಮರುಪಾವತಿಸಲು ಪ್ರಯತ್ನಿಸುತ್ತಿದ್ದೇನೆ” ಎಂದು ಮೋದಿ ಹೇಳಿದರು.

“ಬಂಗಾಳದ ಮಹಿಳಾ ಶಕ್ತಿಯು ದೇಶಕ್ಕೆ ದಿಕ್ಕನ್ನು ನೀಡಿದೆ. ಆದರೆ ತೃಣಮೂಲ ಆಳ್ವಿಕೆಯಲ್ಲಿ ಮಹಿಳೆಯರು ದೌರ್ಜನ್ಯವನ್ನು ಅನುಭವಿಸಿದ್ದಾರೆ. ತೃಣಮೂಲವು ಘೋರ ಪಾಪವನ್ನು ಮಾಡಿದೆ. ಸಂದೇಶಖಾಲಿಯಲ್ಲಿ ನಡೆದಿರುವುದು ಯಾರಿಗೇ ಆದರೂ ನಾಚಿಕೆಯುಂಟುಮಾಡುವಂಥದು. ಆದರೆ ತೃಣಮೂಲ ಸರ್ಕಾರ ನಿಮ್ಮ ನೋವನ್ನು ಲೆಕ್ಕಿಸುವುದಿಲ್ಲ. ಅದು ಬಂಗಾಳದಲ್ಲಿ ಮಹಿಳೆಯರ ದಬ್ಬಾಳಿಕೆ ಮಾಡುವವರನ್ನು ರಕ್ಷಿಸಬಹುದು, ಆದರೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಅದು ಆಘಾತಗಳನ್ನು ಎದುರಿಸಿದೆ” ಎಂದಿದ್ದಾರೆ.

“ತೃಣಮೂಲ ಸರ್ಕಾರವು ದೌರ್ಜನ್ಯ ನಡೆಸುವ ನಾಯಕರನ್ನು ನಂಬುತ್ತದೆಯೇ ಹೊರತು ರಾಜ್ಯದ ಮಹಿಳೆಯರನ್ನು ನಂಬುವುದಿಲ್ಲ. ಆದರೆ ಬಂಗಾಳ ಮತ್ತು ದೇಶದ ಮಹಿಳೆಯರು ಆಕ್ರೋಶಗೊಂಡಿದ್ದಾರೆ. ಈ ಚಂಡಮಾರುತ ಕೇವಲ ಸಂದೇಶಖಾಲಿಗೆ ಸೀಮಿತವಾಗುವುದಿಲ್ಲ. ಇದು ಇಡೀ ಬಂಗಾಳವನ್ನು ತಲುಪುತ್ತದೆ. ಬಂಗಾಳದ ನಾರಿ ಶಕ್ತಿಯು ತೃಣಮೂಲದ ಮಾಫಿಯಾ ಆಡಳಿತವನ್ನು ನಾಶಮಾಡಲು ಹೊರಟಿದೆ. ಸಂದೇಶಖಾಲಿ ಪ್ರಕರಣ ಬಿಜೆಪಿಯ ಧ್ವನಿಯನ್ನು ಕೇಳಿಸಿದೆ. ಸುಲಿಗೆಕೋರರ ಒತ್ತಡದಲ್ಲಿರುವ ತೃಣಮೂಲ ಸರ್ಕಾರ ಎಂದಿಗೂ ಮಹಿಳೆಯರಿಗೆ ಸಹಾಯ ಮಾಡುವುದಿಲ್ಲ” ಎಂದು ಪ್ರಧಾನಿ ಟೀಕಿಸಿದರು. ಮಮತಾ ಬ್ಯಾನರ್ಜಿ ಸರ್ಕಾರವನ್ನು “ಮಹಿಳಾ ವಿರೋಧಿ” ಎಂದು ಕರೆದ ಅವರು, “ಮಹಿಳೆಯರಿಗಾಗಿ ಪ್ರಾರಂಭಿಸಲಾದ ಹಲವಾರು ಕಲ್ಯಾಣ ಯೋಜನೆಗಳು ಬಂಗಾಳದಲ್ಲಿ ಜಾರಿಗೆ ಬಂದಿಲ್ಲ” ಎಂದು ಹೇಳಿದರು.

ಶೇಖ್ ಷಹಜಹಾನ್ ಬಂಧನ- ಕಸ್ಟಡಿಗೆ ಸಂಬಂಧಿಸಿದಂತೆ ಬಂಗಾಳ ಪೊಲೀಸರು ಮತ್ತು ಸಿಬಿಐ ನಡುವಿನ ಹಗ್ಗ ಜಗ್ಗಾಟದ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಪ್ರಧಾನಿ ವಾಗ್ದಾಳಿ ನಡೆಸಿದ್ದಾರೆ. ಕಲ್ಕತ್ತಾ ಹೈಕೋರ್ಟ್ ಷಹಜಹಾನ್‌ನನ್ನು ಕೇಂದ್ರ ಏಜೆನ್ಸಿಗೆ ಹಸ್ತಾಂತರಿಸುವಂತೆ ಬಂಗಾಳ ಪೊಲೀಸರಿಗೆ ಹೇಳಿದೆ. ಮಮತಾ ಬ್ಯಾನರ್ಜಿ ಸರ್ಕಾರವು ಈ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಸರ್ವೋಚ್ಚ ನ್ಯಾಯಾಲಯ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವವರೆಗೆ ಆತನನ್ನು ಹಸ್ತಾಂತರಿಸಲು ನಿರಾಕರಿಸಿದೆ. 52 ದಿನಗಳ ಕಾಲ ನಾಪತ್ತೆಯಾಗಿದ್ದ ಷಹಜಹಾನ್‌ನನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಬಂಧನದ ಬಳಿಕ ತೃಣಮೂಲ ಕಾಂಗ್ರೆಸ್‌ ಪಕ್ಷವು ಆತನನ್ನು ಉಚ್ಚಾಟಿಸಿತ್ತು. ಷಹಜಹಾನ್‌ ಮತ್ತು ಆತನ ಸಹಾಯಕರ ಮೇಲೆ ಲೈಂಗಿಕ ಕಿರುಕುಳ, ಭೂಕಬಳಿಕೆ ಮತ್ತು ಸುಲಿಗೆ ಆರೋಪಗಳಿದ್ದು, ಸಿಬಿಐ ಕೈಗೆ ಆತ ಹೋಗುವವರೆಗೂ ನ್ಯಾಯ ಸಿಗುವುದಿಲ್ಲ ಎಂದು ಬಿಜೆಪಿ ಹೇಳಿದೆ.

ಇದನ್ನೂ ಓದಿ: PM Narendra Modi: ಮೋದಿ ಜನಪ್ರಿಯತೆ ಮತ್ತೂ 10% ಹೆಚ್ಚಳ; ಜಾಗತಿಕ ನಾಯಕರ ಪಟ್ಟಿಯಲ್ಲಿ ಮೊದಲಿಗ

Exit mobile version