Site icon Vistara News

Street Dog Attack: ವಾಘ್ ಬಕ್ರಿ ಚಹಾ ಕಂಪನಿ ಮಾಲೀಕ ಬೀದಿ ನಾಯಿಗಳಿಗೆ ಬಲಿ

parag desayi wagh bakri

ಅಹಮದಾಬಾದ್‌: ಬೀದಿ ನಾಯಿಗಳ ದಾಳಿಗೆ (street dog attack) ಒಳಗಾಗಿ ಉದ್ಯಮಿ, ಖ್ಯಾತ ಚಹಾ ಕಂಪನಿ ವಾಘ್ ಬಕ್ರಿಯ (Wagh Bakri) ಮಾಲಿಕ ಪರಾಗ್ ದೇಸಾಯಿ (49) ಸಾವನ್ನಪ್ಪಿದ್ದಾರೆ.

ವಾಘ್ ಬಕ್ರಿ ಟೀ ಗ್ರೂಪ್‌ನ ನಿರ್ದೇಶಕ, ಉನ್ನತ ಕಾರ್ಯನಿರ್ವಾಹಕ ಪರಾಗ್ ದೇಸಾಯಿ (Parag Desai) ಅವರು ತಮ್ಮ ನಿವಾಸದ ಹೊರಗೆ ಅಕ್ಟೋಬರ್ 15ರಂದು ಬೀದಿ ನಾಯಿಗಳಿಂದ ತೀವ್ರ ದಾಳಿಗೆ ಒಳಗಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ನಿಧನರಾದರು. ಅವರಿಗೆ 49 ವರ್ಷ ವಯಸ್ಸಾಗಿತ್ತು.

ಪರಾಗ್‌ ದೇಸಾಯಿ ಅವರು ತಮ್ಮ ನಿವಾಸದ ಹೊರಗೆ ಬೀದಿ ನಾಯಿಗಳ ದಾಳಿಗೆ ಒಳಗಾಗಿ ಬಿದ್ದಿರುವುದನ್ನು ಭದ್ರತಾ ಸಿಬ್ಬಂದಿ ಅವರ ಕುಟುಂಬ ಸದಸ್ಯರ ಗಮನಕ್ಕೆ ತಂದಿದ್ದರು. ನಂತರ ಅವರನ್ನು ಶೆಲ್ಬಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಶೆಲ್ಬಿ ಆಸ್ಪತ್ರೆಯಲ್ಲಿ ಒಂದು ದಿನದ ನಿಗಾ ನಂತರ, ದೇಸಾಯಿ ಅವರನ್ನು ಶಸ್ತ್ರಚಿಕಿತ್ಸೆಗಾಗಿ ಝೈಡಸ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಆದರೆ, ಚಿಕಿತ್ಸೆ ವೇಳೆ ಮಿದುಳು ರಕ್ತಸ್ರಾವಕ್ಕೆ ಒಳಗಾಗಿ ಅವರು ಭಾನುವಾರ ಮೃತಪಟ್ಟಿದ್ದಾರೆ.

ಗುಜರಾತ್ ಕಾಂಗ್ರೆಸ್ ಮುಖ್ಯಸ್ಥ ಮತ್ತು ರಾಜ್ಯಸಭಾ ಸದಸ್ಯ ಶಕ್ತಿಸಿಂಗ್ ಗೋಹಿಲ್ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ದೇಸಾಯಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ತುಂಬಾ ದುಃಖದ ಸುದ್ದಿ. ವಾಘ್‌ ಬಕ್ರಿ ಟೀ ನಿರ್ದೇಶಕ ಮತ್ತು ಮಾಲೀಕ ಪರಾಗ್ ದೇಸಾಯಿ ನಿಧನರಾಗಿದ್ದು, ಅವರ ಆತ್ಮಕೆ ಶಾಂತಿ ಸಿಗಲಿ. ಭಾರತದಾದ್ಯಂತ ಇರುವ ಇಡೀ ವಾಘ್ ಬಕ್ರಿ ಕುಟುಂಬಕ್ಕೆ ನನ್ನ ಸಂತಾಪಗಳು” ಎಂದು ಅವರು ಬರೆದಿದ್ದಾರೆ.

ದೇಸಾಯಿ ಅವರು ವಾಘ್ ಬಕ್ರಿ ಟೀ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕರಾದ ರಸೇಶ್ ದೇಸಾಯಿ ಅವರ ಪುತ್ರ. ಅವರು ಪತ್ನಿ ವಿದಿಶಾ ಮತ್ತು ಮಗಳು ಪರಿಶಾ ಅವರನ್ನು ಅಗಲಿದ್ದಾರೆ.

ದೇಸಾಯಿ ಅವರು 30 ವರ್ಷಗಳ ಉದ್ಯಮಶೀಲತೆಯ ಅನುಭವ ಹೊಂದಿದ್ದಾರೆ. ಗ್ರೂಪ್‌ನ ಅಂತಾರಾಷ್ಟ್ರೀಯ ವ್ಯಾಪಾರ, ಮಾರಾಟ ಮತ್ತು ಮಾರ್ಕೆಟಿಂಗ್ ಅನ್ನು ಮುನ್ನಡೆಸಿದ್ದಾರೆ. ಅವರು ಭಾರತೀಯ ಕೈಗಾರಿಕೆಗಳ ಒಕ್ಕೂಟ (CII) ನಂತಹ ಪ್ರಮುಖ ಉದ್ಯಮ ವೇದಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಅವರು ಅಮೆರಿಕದ ಲಾಂಗ್‌ ಐಲ್ಯಾಂಡ್‌ ವಿವಿಯಿಂದ ಎಂಬಿಎ ಪದವಿ ಪಡೆದವರು. ವಾಘ್‌ ಬಕ್ರಿ ಕಂಪನಿ 1500 ಕೋಟಿ ರೂ.ಗಳ ವ್ಯವಹಾರ ಹೊಂದಿದೆ.

ಇದನ್ನೂ ಓದಿ: Street dog attack: ಬಾಲಕನ ಮೇಲೆ ಬೀದಿ ನಾಯಿಗಳ ಬರ್ಬರ ದಾಳಿ

Exit mobile version