Site icon Vistara News

ವಿಸ್ತಾರ ಸಂಪಾದಕೀಯ: ಸುಳ್ಳು ಸುದ್ದಿ ತಡೆಯಲು ಕಠಿಣ ಕಾಯಿದೆ ಸ್ವಾಗತಾರ್ಹ

Fake news

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಶನಿವಾರ ಸಂಸತ್ತಿನಲ್ಲಿ ಮೂರು ವಿಧೇಯಕಗಳನ್ನು ಮಂಡಿಸಿದ್ದು, ಭಾರತೀಯ ನ್ಯಾಯ ಸಂಹಿತೆ (Bharatiya Nyaya Sanhita Bill 2023) ವಿಧೇಯಕ ಕೂಡ ಅದರಲ್ಲಿ ಒಂದು. ಭಾರತೀಯ ದಂಡ ಸಂಹಿತೆಯು ಈ ಹೊಸ ಹೆಸರಿನಿಂದ ಕರೆಯಲ್ಪಡಲಿದೆ. ಈ ಹೊಸ ಕಾನೂನಿನ ಅಡಿಯಲ್ಲಿ ಇರುವ ಒಂದು ಪ್ರಮುಖವಾದ ಅಂಶವೆಂದರೆ, ನಕಲಿ ಸುದ್ದಿ ಹರಡುವವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸುವ ಅವಕಾಶ. ನೂತನ ಕಾನೂನಿನ ಸೆಕ್ಷನ್‌ 195 (1) D ಪ್ರಕಾರ, “ದೇಶದ ಸಾರ್ವಭೌಮತ್ವ, ಸಮಗ್ರತೆ ಹಾಗೂ ಭದ್ರತೆಗೆ ಧಕ್ಕೆ ತರುವ ಯಾವುದೇ ನಕಲಿ ಸುದ್ದಿಯನ್ನು ಪಸರಿಸಿದರೆ, ಪ್ರಕಟಿಸಿದರೆ ಅಥವಾ ಪ್ರಸಾರ ಮಾಡಿದರೆ ಅವರಿಗೆ ಗರಿಷ್ಠ ಮೂರು ವರ್ಷ ಜೈಲು ಶಿಕ್ಷೆ, ದಂಡ ಹಾಗೂ ಕೆಲವು ಪ್ರಕರಣಗಳಲ್ಲಿ ಎರಡನ್ನೂ ವಿಧಿಸಲಾಗುತ್ತದೆ” ಎಂದು ಉಲ್ಲೇಖಿಸಲಾಗಿದೆ. ಇದನ್ನು ವಿಧೇಯಕದ ಚಾಪ್ಟರ್‌ 11ರಲ್ಲಿ ಸೇರಿಸಲಾಗಿದೆ.

ಆಧುನಿಕ ಮೊಬೈಲ್‌ ಫೋನ್‌ಗಳು ಎಲ್ಲರ ಕೈಗೆ ಸಿಗುವ ಮೂಲಕ, ಎಲ್ಲರೂ ಇಂದು ಸುದ್ದಿಗಳನ್ನು ಪಡೆಯುವವರು ಮಾತ್ರವಲ್ಲದೆ, ಸುದ್ದಿಗಳನ್ನು ಪ್ರಸಾರಿಸುವವರೂ ಆಗಿದ್ದಾರೆ. ಲೋಕದ ಯಾವುದೋ ಮೂಲೆಯಲ್ಲಿ ನಡೆದ ಘಟನೆ ಇನ್ನೊಂದು ಮೂಲೆಗೆ ಒಂದು ಸೆಕೆಂಡ್‌ ಕೂಡ ವಿಳಂಬವಿಲ್ಲದೆ ತಲುಪುತ್ತದೆ. ತುರ್ತು ಸುದ್ದಿಗಳ ಪ್ರಸರಣದ ನೆಲೆಯಲ್ಲಿ ಇದು ಸ್ವಾಗತಾರ್ಹವೇ ಹೌದು. ಆದರೆ ಇದರ ಜೊತೆಗೇ ಆಗಮಿಸಿರುವ ಸಂಕಷ್ಟ ಎಂದರೆ ನಕಲಿ ಸುದ್ದಿಗಳ (Fake news) ಕಾಟ. ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲೂ ವೈಯಕ್ತಿಕವಾಗಿಯೂ ಫಾರ್‌ವರ್ಡ್‌ ಆಗುವ ಸುದ್ದಿಗಳನ್ನು ಯಾವುದೇ ಪರಾಮರ್ಶೆಯಿಲ್ಲದೆ ಹತ್ತಾರು ಮಂದಿಗೆ ಫಾರ್ವರ್ಡ್‌ ಮಾಡುವ ಚಟ ಎಲ್ಲರನ್ನು ಅಂಟಿಕೊಂಡಿದೆ. ಇದರಿಂದ ಉಪಕಾರಕ್ಕಿಂತ ಹಾನಿಯೇ ಅಧಿಕ ಎಂಬುದು ಕಳೆದ ಒಂದು ದಶಕದಲ್ಲಿ ಗೊತ್ತಾಗಿದೆ. ಇನ್ನು ಮುಂದೆ ಹೀಗೆ ಮಾಡುವ ಮುನ್ನ ಎಚ್ಚರಿಕೆಯಿಂದ ಇರಿ. ಹೊಸ ಕಾನೂನು (Criminal Laws) ಜಾರಿಯಾದರೆ, ವಾಟ್ಸ್‌ಆ್ಯಪ್ ಸೇರಿ ಯಾವುದೇ ಮಾಧ್ಯಮದ ಮೂಲಕ ನಕಲಿ ಸುದ್ದಿ ಹರಡುವವರಿಗೆ ಮೂರು ವರ್ಷ ಜೈಲು ಶಿಕ್ಷೆ ಖಚಿತ.

ಈ ಹಿಂದೆ ಕೇಂದ್ರ ಸರ್ಕಾರ ಇನ್ನೊಂದು ಮುಖ್ಯ ಘೋಷಣೆಯನ್ನು ಮಾಡಿತ್ತು. ನಕಲಿ ಸುದ್ದಿಗಳನ್ನು ಪತ್ತೆ ಹಚ್ಚಲು ನೂತನ ಫ್ಯಾಕ್ಟ್‌ಚೆಕ್‌ ವಿಭಾಗವನ್ನು ಸರ್ಕಾರಕ್ಕೆ ಸಂಬಂಧಿಸಿದ ಆನ್‌ಲೈನ್‌ ಸುದ್ದಿಗಳನ್ನು ಎಲ್ಲ ವಿಭಾಗಗಳಲ್ಲಿ ಪರಿಶೀಲಿಸಲು, ಅವುಗಳ ಸತ್ಯಾಂಶವನ್ನು ಗಮನಿಸಲು ಸ್ಥಾಪಿಸಲಾಗುತ್ತಿದೆ. ಜನರಿಗೆ ಸರ್ಕಾರದ ಕುರಿತು ತಪ್ಪು ಮಾಹಿತಿ ಹೋಗುವುದನ್ನು ತಪ್ಪಿಸಲು ಈ ಉಪಕ್ರಮ. ಇದಕ್ಕಾಗಿ ಕೇಂದ್ರ ಸರ್ಕಾರ 2021ರ ಮಾಹಿತಿ ತಂತ್ರಜ್ಞಾನ ಕಾಯ್ದೆ ನಿಯಮಗಳನ್ನು ಬದಲಿಸಿದೆ. ಇದೂ ಒಂದು ದೃಷ್ಟಿಯಿಂದ ಸ್ವಾಗತಾರ್ಹವೇ. ಯಾಕೆಂದರೆ ಸುದ್ದಿಯ ಪಡೆಯುವಿಕೆ ಇಂದು ದೊಡ್ಡ ಪ್ರಮಾಣದಲ್ಲಿ ಆನ್‌ಲೈನ್‌ ಆಗಿದೆ. ಸಾಂಪ್ರದಾಯಿಕ ಮಾಧ್ಯಮಗಳು ತಮ್ಮ ನೆಲೆಯನ್ನು ಕುಂಠಿತಗೊಳಿಸಿಕೊಳ್ಳುತ್ತಿರುವಂತೆ ಡಿಜಿಟಲ್‌ ಮಾಧ್ಯಮಗಳು ಹೆಚ್ಚಿನ ಪ್ರಮಾಣದಲ್ಲಿ ಗ್ರಾಹಕರನ್ನು ಪಡೆಯುತ್ತಿವೆ. ಆದರೆ ನಿಖರ ಸುದ್ದಿಗಳ ಕೊರತೆ ಹಾಗೂ ನಕಲಿ ಸುದ್ದಿಗಳ ಹಾವಳಿ ಮಿತಿಮೀರಿದೆ. ಅನೇಕ ಸಲ ಗಲಭೆ, ಅಶಾಂತಿ, ಸಾಮಾಜಿಕ ಅಸ್ಥಿರತೆಯನ್ನೂ ಈ ನಕಲಿ ಸುದ್ದಿಗಳು ಸೃಷ್ಟಿಸುತ್ತಿವೆ. ಬರಿಯ ವಾಟ್ಸ್ಯಾಫ್‌ ಫಾರ್‌ವರ್ಡ್‌ಗಳಿಂದಾಗಿಯೇ ಮಕ್ಕಳ ಕಳ್ಳರೆಂದು ಹಲವರನ್ನು ಥಳಿಸಿ ಸಾಯಿಸದ ಘಟನೆಗಳು ನಡೆದಿವೆ. ಕೋಮು ಗಲಭೆಗಳಲ್ಲಿ ಇವು ದೊಡ್ಡ ಪ್ರಚೋದನೆ ನೀಡಿವೆ. ಇಂಥದೊಂದು ಸುಳ್ಳು ಸುದ್ದಿಯ ಕಾರಣದಿಂದಾಗಿಯೇ ಮಣಿಪುರದಲ್ಲಿ ರೊಚ್ಚಿಗೆದ್ದ ಮೈತಿ ಪುಂಡರು ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿ ಅತ್ಯಾಚಾರ ಮಾಡಿದ್ದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ಇವೆರಡು ಉಪಕ್ರಮಗಳನ್ನೂ ಒಟ್ಟಾಗಿಯೇ ನೋಡಿ, ಸ್ವಾಗತಿಸಬೇಕಿದೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಕ್ರಿಮಿನಲ್‌ ಕಾನೂನುಗಳಿಗೆ ಐತಿಹಾಸಿಕ ಕಾಯಕಲ್ಪ

ಇಂದು ಸುದ್ದಿಗಳನ್ನು ಪಡೆಯುವ, ಸ್ವೀಕರಿಸುವ, ಅವುಗಳನ್ನು ಹಂಚುವಲ್ಲಿ ಎಲ್ಲರ ವಿವೇಕ ಹೆಚ್ಚು ಕೆಲಸ ಮಾಡಬೇಕಿದೆ. ನಿಖರ ಮಾಹಿತಿ ಮೂಲಗಳನ್ನು ನಂಬುವುದು, ವಿಶ್ವಾಸಾರ್ಹವಲ್ಲದ ಜಾಲತಾಣಗಳನ್ನು ಹಾಗೂ ಲಿಂಕ್‌ಗಳನ್ನು ದೂರವಿಡುವುದು, ಅವುಗಳು ಹೆಚ್ಚಿನ ವ್ಯಾಪ್ತಿ ಪಡೆಯದಂತೆ ನಿರಸನಗೊಳಿಸುವುದು, ತಲೆಯೆತ್ತುವಾಗಲೇ ಚಿವುಟುವುದು ಅಗತ್ಯವಾಗಿದೆ. ವಾಟ್ಸ್ಯಾಪ್‌ನಲ್ಲಿ ಬಂದದ್ದನ್ನೆಲ್ಲಾ ಮಹಾಪ್ರಸಾದ ಎಂಬಂತೆ ನಂಬುವ, ಫಾರ್‌ವರ್ಡ್‌ ಮಾಡುವ ಕಾಲ ಮುಗಿದುಹೋಯಿತು. ಅದು ಒಂದು ಸುದ್ದಿಸಂಸ್ಥೆಯಲ್ಲ, ಬದಲಾಗಿ ಅದೊಂದು ಸಾರ್ವಜನಿಕ ವೇದಿಕೆ. ಅಲ್ಲಿ ಯಾರು ಬೇಕಿದ್ದರೂ ಸುಳ್ಳುಗಳನ್ನು ಹಬ್ಬಿಸಬಹುದು. ಆದರೆ ಇದು ಹೆಚ್ಚು ದಿನ ನಡೆಯಲಾರದು. ಮನುಷ್ಯ ವಿವೇಕ, ಸಾಮಾಜಿಕ ಪ್ರಜ್ಞೆ ಬೆಳೆಸಿಕೊಳ್ಳುತ್ತಿದ್ದಂತೆ ಇದು ಕಡಿಮೆಯಾಗುತ್ತದೆ. ಅಲ್ಲಿಯವರೆಗೂ ಇಂಥ ಕಾನೂನುಗಳು ಅಗತ್ಯವಿವೆ.

Exit mobile version