Site icon Vistara News

Subramanian Swamy: ರಾಹುಲ್‌ ಗಾಂಧಿಯ ಭಾರತೀಯ ಪೌರತ್ವ ರದ್ದುಗೊಳಿಸಿ; ಹೈಕೋರ್ಟ್‌ಗೆ ಮೊರೆ ಹೋದ ಸುಬ್ರಮಣಿಯನ್ ಸ್ವಾಮಿ

Subramanian Swamy

ನವದೆಹಲಿ: ನೇರ ಮಾತಿನ ಮೂಲಕ ರಾಜಕಾರಣಿಗಳ ನಿದ್ದೆಗೆಡಿಸಿರುವ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ (Subramanian Swamy) ಹಲವು ದಿನಗಳ ಬಳಿಕ ಮತ್ತೊಮ್ಮೆ ದೇಶಾದ್ಯಂತ ಸುದ್ದಿಯಾಗಿದ್ದಾರೆ. ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಭಾರತೀಯ ಪೌರತ್ವವನ್ನು ರದ್ದುಗೊಳಿಸುವಂತೆ ಗೃಹ ಸಚಿವಾಲಯಕ್ಕೆ (MHA) ನಿರ್ದೇಶನ ನೀಡುವಂತೆ ಸುಬ್ರಮಣಿಯನ್ ಸ್ವಾಮಿ ಶುಕ್ರವಾರ ದೆಹಲಿ ಹೈಕೋರ್ಟ್‌ಗೆ ಮೊರೆ ಹೋಗಿದ್ದಾರೆ.

ಹೈಕೋರ್ಟ್ ಮುಂದಿನ ವಾರ ಅರ್ಜಿಯ ವಿಚಾರಣೆ ನಡೆಸುವ ನಿರೀಕ್ಷೆಯಿದೆ. ವಕೀಲ ಸತ್ಯ ಸಭರ್ವಾಲ್ ಈ ಅರ್ಜಿಯನ್ನು ಸಲ್ಲಿಸಿದ್ದಾರೆ.

ಸುಬ್ರಮಣಿಯನ್ ಸ್ವಾಮಿ ವಾದವೇನು?

ರಾಹುಲ್ ಗಾಂಧಿ ತಮ್ಮದು ಬ್ರಿಟಿಷ್ ಪೌರತ್ವ ಎಂಬುದಾಗಿ ದಾಖಲೆಗಳಲ್ಲಿ ಉಲ್ಲೇಖಿಸಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ. 2003ರಲ್ಲಿ ನೋಂದಾಯಿಸಲಾದ ಇಂಗ್ಲೆಂಡ್‌ ಮೂಲದ ಕಂಪೆನಿ ಬ್ಯಾಕ್ಆಪ್ಸ್ ಲಿಮಿಟೆಡ್‌ನ ನಿರ್ದೇಶಕರು ಮತ್ತು ಕಾರ್ಯದರ್ಶಿಗಳಲ್ಲಿ ರಾಹುಲ್ ಗಾಂಧಿ ಒಬ್ಬರು ಎಂದು ಸ್ವಾಮಿ 2019ರಲ್ಲಿಯೇ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದರು. 2005 ಮತ್ತು 2006ರಂದು ಸಲ್ಲಿಸಿದ ಸಂಸ್ಥೆಯ ವಾರ್ಷಿಕ ರಿಟರ್ನ್ಸ್‌ನಲ್ಲಿ ರಾಹುಲ್ ಗಾಂಧಿ ಅವರು ತಮ್ಮ ರಾಷ್ಟ್ರೀಯತೆಯನ್ನು ಬ್ರಿಟಿಷ್‌ ಎಂದು ಘೋಷಿಸಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. 2009ರಂದು ಬ್ಯಾಕ್‌ಆಪ್ಸ್ ಲಿಮಿಟೆಡ್‌ನ ವಿಸರ್ಜನೆಯ ಅರ್ಜಿಯಲ್ಲಿ ರಾಹುಲ್‌ ಗಾಂಧಿ ಅವರ ರಾಷ್ಟ್ರೀಯತೆಯನ್ನು ಮತ್ತೆ ಬ್ರಿಟಿಷ್ ಎಂದು ಘೋಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಇದು ಭಾರತದ ಸಂವಿಧಾನದ 9ನೇ ವಿಧಿ ಮತ್ತು 1955ರ ಭಾರತೀಯ ಪೌರತ್ವ ಕಾಯ್ದೆಯನ್ನು ಉಲ್ಲಂಘಿಸುತ್ತದೆ ಎಂದು ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ. 2019ರ ಏಪ್ರಿಲ್ 29ರಂದು ಗೃಹ ಸಚಿವಾಲಯವು ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದು ಪೌರತ್ವದ ಬಗ್ಗೆ ಮಾಹಿತಿ ನೀಡುವಂತೆ ಕೇಳಿತ್ತು. 15 ದಿನದೊಳಗೆ ಉತ್ತರಿಸುವಂತೆಯೂ ತಿಳಿಸಿತ್ತು. ಅವರು ಪತ್ರ ಬರೆದು 5 ವರ್ಷಗಳು ಕಳೆದರೂ ರಾಹುಲ್ ಗಾಂಧಿ ಅವರ ಬಗ್ಗೆ ತೆಗೆದುಕೊಂಡ ನಿರ್ಧಾರದ ಬಗ್ಗೆ ಗೃಹ ಸಚಿವಾಲಯದಿಂದ ಸ್ಪಷ್ಟತೆ ಇಲ್ಲ ಎಂದು ಸ್ವಾಮಿ ತಿಳಿಸಿದ್ದಾರೆ.

ಈ ಹಿಂದೆ ಸುಬ್ರಮಣಿಯನ್ ಸ್ವಾಮಿ ಅವರು ನ್ಯಾಷನಲ್ ಹೆರಾಲ್ಡ್ ಪ್ರಕರಣ ಕುರಿತು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮೋತಿಲಾಲ್ ವೋರಾ, ಆಸ್ಕರ್ ಫರ್ನಾಂಡಿಸ್, ಸುಮನ್ ದುಬೇ, ಸ್ಯಾಮ್ ಪಿತ್ರೋಡಾ ಕುರಿತು ಖಾಸಗಿ ದೂರು ನೀಡಿದ್ದರು. 

ಇದನ್ನೂ ಓದಿ: Modi Degree Certificate: ವಿವಾದದ ಬೆನ್ನಲ್ಲೇ ಮೋದಿ ಡಿಗ್ರಿ ಸರ್ಟಿಫಿಕೇಟ್ ಬಿಡುಗಡೆ ಮಾಡಿದ ಸುಬ್ರಮಣಿಯನ್‌ ಸ್ವಾಮಿ

ಮೋದಿ ವಿರುದ್ಧವೂ ಕಿಡಿಕಾರಿದ್ದ ಬಿಜೆಪಿ ನಾಯಕ

ಅಚ್ಚರಿ ಎಂದರೆ ಸುಬ್ರಮಣಿಯನ್ ಸ್ವಾಮಿ ಕೆಲವು ತಿಂಗಳ ಹಿಂದೆ ಪ್ರಧಾನಿ ಮೋದಿ ವಿರುದ್ಧವೂ ಕಿಡಿಕಾರಿದ್ದರು. “ಟ್ವಿಟರ್‌ನಲ್ಲಿ ನರೇಂದ್ರ ಮೋದಿ ಅವರನ್ನು ಫಾಲೋ ಮಾಡುತ್ತಿರುವವರು ಮೂರ್ಖರು” ಎಂದು ಹೇಳಿ ಬಿಜೆಪಿ ನಾಯಕ ಕೆಂಗಣ್ಣಿಗೆ ಗುರಿಯಾಗಿದ್ದರು. “ಟ್ವಿಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಫಾಲೋ ಮಾಡುತ್ತಿರುವವರು ಮೂರ್ಖರು. ನರೇಂದ್ರ ಮೋದಿ ಅವರು ನನ್ನನ್ನು ಸಂಸದನನ್ನಾಗಿ ಮಾಡುವುದಿಲ್ಲ ಎಂದು ಫಾಲೋವರ್‌ಗಳು ಯಾವಾಗಲೂ ಹೇಳುತ್ತಿರುತ್ತಾರೆ. ಆದರೆ ಮೂರ್ಖರಿಗೆ ಇದು ಗೊತ್ತಿಲ್ಲ. ನಾನು ಈಗಾಗಲೇ ಸಂಸತ್ತನ್ನು ಆರು ಬಾರಿ ಪ್ರವೇಶಿಸಿದ್ದೇನೆ. ಮೂರು ಬಾರಿ ಲೋಕಸಭೆ ಸದಸ್ಯನಾಗಿ, ಮೂರು ಬಾರಿ ರಾಜ್ಯಸಭೆ ಸದಸ್ಯನಾಗಿದ್ದೇನೆ. ನಾನು ಮನಸ್ಸು ಮಾಡಿದರೆ ವಾರಾಣಸಿಯಿಂದಲೇ (ಮೋದಿ ಅವರ ಕ್ಷೇತ್ರ) ಸ್ಪರ್ಧಿಸಿ ಏಳನೇ ಬಾರಿ ಲೋಕಸಭೆ ಪ್ರವೇಶಿಸಬಲ್ಲೆ” ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದರು.

Exit mobile version