ಪಟನಾ: ಒಂದಷ್ಟು ಶ್ರದ್ಧೆ, ತುಸು ಹೆಚ್ಚೇ ಎನ್ನುವಷ್ಟು ಶ್ರಮ, ಯಾವ ಕೆಲಸ ಸಿಕ್ಕರೂ ಆಸಕ್ತಿಯಿಂದ, ಅದನ್ನು ಪರಿಪೂರ್ಣವಾಗಿ ಮಾಡಲು ಯತ್ನಿಸುವವರಿಗೆ ತಡವಾಗಿಯಾದರೂ ಯಶಸ್ಸು ಸಿಗುತ್ತದೆ ಎಂಬ ಮಾತಿದೆ. ಈ ಮಾತಿಗೆ ಮೂರ್ತ ಸ್ವರೂಪವಾಗಿ ಬಿಹಾರದ ದಿಲ್‌ಖುಷ್ ಕುಮಾರ್ (Success Story) ನಮ್ಮ ಕಣ್ಣೆದುರು ಇದ್ದಾರೆ. ಒಂದು ಕಾಲದಲ್ಲಿ ರಿಕ್ಷಾ ಓಡಿಸುತ್ತಿದ್ದ, ತರಕಾರಿ ಮಾರುತ್ತಿದ್ದ ವ್ಯಕ್ತಿಯೀಗ ನೂರಾರು ಕೋಟಿ ರೂ. ಮೌಲ್ಯದ ಕಂಪನಿಯ ಸಿಇಒ ಆಗಿದ್ದಾರೆ. ಆ ಮೂಲಕ ಪರಿಶ್ರಮದ ಏಣಿಯ ಮೂಲಕ ಯಾವ ಎತ್ತರವನ್ನು ಬೇಕಾದರೂ ತಲುಪಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಹೌದು, ದಿಲ್‌ಖುಷ್ ಕುಮಾರ್ ಅವರು ಓದಿದ್ದು ಬರೀ 12ನೇ ತರಗತಿ. ಸಹಾರಸ ಜಿಲ್ಲೆಯ ಗ್ರಾಮವೊಂದರಲ್ಲಿ ಬೆಳೆದ ದಿಲ್‌ಖುಷ್ ಕುಮಾರ್, ನಿರುದ್ಯೋಗ ಸಮಸ್ಯೆ, ಮನೆಯವರ ಬೈಗುಳ ತಾಳದೆ 2011ರಲ್ಲಿ ಪಟನಾಗೆ ಹೋದರು. ಅಲ್ಲಿ, ತರಕಾರಿ ಮಾರಿ, ರಿಕ್ಷಾ ಓಡಿಸಿ ಜೀವನ ಸಾಗಿಸಿದ ಅವರು ಒಂದಷ್ಟು ಹಣ ಒಗ್ಗೂಡಿಸಿದರು. ಯಾವುದೇ ಕೆಲಸದಲ್ಲಿ ನೈಪುಣ್ಯ ಸಾಧಿಸದ ಹೊರತು ಏಳಿಗೆ ಹೊಂದಲು ಆಗುವುದಿಲ್ಲ ಎಂಬುದನ್ನು ಅರಿತ ಅವರು ಸ್ನೇಹಿತರ ಜತೆಗೂಡಿ ಉದ್ಯಮ ಆರಂಭಿಸುವ ತೀರ್ಮಾನಕ್ಕೆ ಬಂದರು. ಇದು ಅವರ ಜೀವನಕ್ಕೆ ಹೊಸ ತಿರುವು ನೀಡಿತು.
ಗೆಳೆಯರ ಜತೆಗೂಡಿ ದಿಲ್‌ಖುಷ್ ಕುಮಾರ್ ಅವರು RoadBez ಎಂಬ ಟ್ಯಾಕ್ಸಿ ಪೂಲ್ ಕಂಪನಿ ಶುರು ಮಾಡಿದರು. ಟ್ಯಾಕ್ಸಿ ಡ್ರೈವರ್‌ಗಳು ಹಾಗೂ ಓಲಾ, ಊಬರ್‌ನಂತಹ ಟ್ಯಾಕ್ಸಿ ಅಗ್ರಿಗೇಟರ್‌ಗಳ ಮಧ್ಯೆ ಸಂಪರ್ಕ ಬೆಸೆಯಲು ಇವರು ಆರಂಭಿಸಿದ RodBez ಆ್ಯಪ್ ಬಿಹಾರದಲ್ಲಿ ಕ್ರಾಂತಿ ಮಾಡಿತು. RodaBez ಈಗ ಬಿಹಾರದ ಬೃಹತ್ ಟ್ಯಾಕ್ಸಿ, ಟ್ಯಾಕ್ಸಿ ಪೂಲ್ ಹಾಗೂ ಕಾರ್ ಪೂಲ್ ಪ್ಲಾಟ್‌ಫಾರ್ಮ್ ಎಂಬ ಖ್ಯಾತಿಗೆ ಭಾಜನವಾಗಿದೆ. ಕಂಪನಿಯು ನೂರಾರು ಕೋಟಿ ರೂ. ಬ್ಯುಸಿನೆಸ್ ಮಾಡುತ್ತಿದೆ.
ಇದನ್ನೂ ಓದಿ: Success Story: ಛಲವೇ ಬಲ; ಪಿಯುಸಿ ಫೇಲಾಗಿ, ಟೆಂಪೋ ಓಡಿಸಿದ ಯುವಕನೀಗ ಐಪಿಎಸ್ ಆಫೀಸರ್
ಐಐಟಿ, ಐಐಎಂ ವಿದ್ಯಾರ್ಥಿಗಳ ನೇಮಕ
ಕೇವಲ 12 ತರಗತಿ ಓದಿರುವ ದಿಲ್‌ಖುಷ್ ಕುಮಾರ್ ಈಗ ತಮ್ಮ ಕಂಪನಿಗೆ ಐಐಟಿ, ಐಐಎಂನಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಓದಿದವರನ್ನು ನೇಮಕ ಮಾಡಿಕೊಳ್ಳುತ್ತಾರೆ. “ಸತತ ಪರಿಶ್ರಮ ಹಾಗೂ ಮಾಡುವ ಕೆಲಸವನ್ನು ಶ್ರದ್ಧೆಯಿಂದ ಏನು ಬೇಕಾದರೂ ಸಾಧಿಸಬಹುದು. ವೃತ್ತಿಯಲ್ಲಿ ಒಂದಷ್ಟು ಚಾಣಾಕ್ಷತನ, ಜನರ ಜತೆಗಿನ ಒಡನಾಟವೂ ಮುಖ್ಯ” ಎಂಬುದು ದಿಲ್‌ಖುಷ್ ಕುಮಾರ್ ಅವರು ಯಶಸ್ಸಿನ ಕುರಿತ ವ್ಯಾಖ್ಯಾನವಾಗಿದೆ.