ನವದೆಹಲಿ: ತಾಯಿ ಗರ್ಭದಲ್ಲಿರುವ ಭ್ರೂಣದ ದ್ರಾಕ್ಷಿ ಗಾತ್ರದ ಹೃದಯಕ್ಕೆ ಸರ್ಜರಿ ಮಾಡಿ ಯಶಸ್ವಿಯಾಗಿದ್ದಾರೆ ದಿಲ್ಲಿ ಏಮ್ಸ್ ಆಸ್ಪತ್ರೆಯ ವೈದ್ಯರು. ಇದೊಂದು ಅತ್ಯಂತ ಅಪಾಯಕಾರಿ ಸರ್ಜರಿಯಾಗಿದ್ದು, ಸ್ವಲ್ಪವೇ ಲೋಪವಾದರೂ ಮಗು ಸಾವಿಗೀಡಾಗುವ ಸಾಧ್ಯತೆಗಳೇ ಹೆಚ್ಚು. ಆದರೂ, ದಿಲ್ಲಿಯ ಏಮ್ಸ್ (Delhi AIIMS) ವೈದ್ಯರು ಕೇವಲ 90 ಸೆಕೆಂಡುಗಳಲ್ಲಿ ಈ ವಿಶಿಷ್ಟ ವೈದ್ಯಕೀಯ ವಿಧಾನವನ್ನು ಪ್ರಯೋಗಿಸಿ ಯಶಸ್ವಿಯಾಗಿದ್ದಾರೆ. ಇದಕ್ಕೆ ಬಲೂನ್ ಡಿಲೇಷನ್ ಪ್ರೊಸೀಜರ್ (balloon dilation) ಎಂದು ಹೇಳಲಾಗುತ್ತದೆ.
28 ವರ್ಷದ ಗರ್ಭಿಣಿಯು ಏಮ್ಸ್ ಹಾಸ್ಪಿಟಲ್‌ಗೆ ದಾಖಲಾಗಿದ್ದರು. ಈ ಹಿಂದೆ ಮೂರು ಬಾರಿ ಅವರಿಗೆ ಗರ್ಭಪಾತವಾಗಿತ್ತು. ವೈದ್ಯರು ಮಗುವಿನ ಹೃದಯದ ಸ್ಥಿತಿಯ ಬಗ್ಗೆ ಪರೀಕ್ಷಿಸಿದ ನಂತರ ಮತ್ತು ಸಂಭಾವ್ಯ ಹೃದಯ ವೈಫಲ್ಯವನ್ನು ತಡೆಗಟ್ಟುವ ಇಚ್ಛೆಯೊಂದಿಗೆ ಕಾರ್ಯವಿಧಾನ ಕೈಗೊಳ್ಳುವುದು ಅಗತ್ಯವಾಗಿತ್ತು. ಈ ಬಗ್ಗೆ ಪೋಷಕರು ಒಪ್ಪಿಗೆ ನೀಡಿದ ಬಳಿಕ, ಏಮ್ಸ್ ವೈದ್ಯರ ವಿರಳಾತಿವಿರಳ ಮತ್ತು ಅತ್ಯಂತ ಅಪಾಯಕಾರಿ ಪ್ರೊಸೀಜರ್ ಕೈಗೊಳ್ಳಲು ಮುಂದಾದರು. ಈಗಾಗಲೇ ಮೂರು ಗರ್ಭಪಾತವದ್ದರಿಂದ ಪೋಷಕರಿಗೆ ಈ ಬಾರಿ ಮಗುವನ್ನು ಪಡೆಯಲೇಬೇಕು ಎಂದು ನಿರ್ಧರಿಸಿದ್ದರು.
ಏಮ್ಸ್‌ನ ಕಾರ್ಡಿಓತೋರಸಿಕ್ ಸೈನ್ಸ್ ಸೆಂಟರ್‌ನಲ್ಲಿ ಹೃದ್ರೋಗ ತಜ್ಞರು ಮತ್ತು ಭ್ರೂಣದ ಔಷಧ ತಜ್ಞರು ಈ ಪ್ರೊಸೀಜರವನ್ನು ಯಶಸ್ವಿಯಾಗಿ ಪೂರೈಸಿದರು. ಏಮ್ಸ್‌ನ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗ (ಭ್ರೂಣ ಔಷಧ) ಜೊತೆಗೆ ಹೃದ್ರೋಗ ಮತ್ತು ಹೃದಯ ಅರಿವಳಿಕೆ ವಿಭಾಗದ ವೈದ್ಯರ ತಂಡದ ಪ್ರಕಾರ, “ಪ್ರೊಸೀಜರ್ ನಂತರ ಭ್ರೂಣ ಮತ್ತು ತಾಯಿ ಇಬ್ಬರೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೈದ್ಯರ ತಂಡಗಳು ಬೆಳವಣಿಗೆಯನ್ನು ಮೇಲ್ವಿಚಾರಣೆ ಮಾಡುತ್ತಿವೆ. ಮಗುವಿನ ಭವಿಷ್ಯದ ನಿರ್ವಹಣೆಯನ್ನು ಅಂತಿಮವಾಗಿ ಹೃದಯದ ಕೋಣೆಗಳ ಬೆಳವಣಿಗೆಯ ಆಧಾರದ ಮೇಲೆ ನಿರ್ಧರಿಸಲಾಗುತ್ತಿದೆ ಎಂದು ಏಮ್ಸ್ ಹೇಳಿದೆ.
ತಾಯಿಯ ಗರ್ಭದಲ್ಲಿದ್ದಾಗಲೇ ಭ್ರೂಣದ ಹೃದಯ ಸಂಬಂಧಿ ಕಾಯಿಲೆಗಳನ್ನು ಗುಣಪಡಿಸಬಹುದು. ಗರ್ಭದಲ್ಲಿದ್ದಾಗಲೇ ಚಿಕಿತ್ಸೆ ನೀಡುವುದರಿಂದ, ಜನನದ ಬಳಿಕ ಮಗುವಿನ ಒಟ್ಟಾರೆ ಬೆಳವಣಿಗೆ ಉತ್ತಮವಾಗುತ್ತದೆ ಎಂದು ವೈದ್ಯಕೀಯ ತಂಡವು ಹೇಳಿದೆ.
ಇದನ್ನೂ ಓದಿ: Baby Heart Surgery: ತುಮಕೂರಿನಲ್ಲಿ ಹಸುಗೂಸುಗಳಿಗೆ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ
ಏನಿದು ಬಲೂನ್ ಡಿಲೇಷನ್ ಪ್ರೊಸೀಜರ್?
ಭ್ರೂಣದ ಡಿಲೇಷನ್ ಪ್ರೊಸೀಜರ್ ಅನ್ನು ಅಲ್ಟ್ರಾಸೌಂಡ್ ಮಾರ್ಗದರ್ಶನದಲ್ಲಿ ಮಾಡಲಾಗುತ್ತದೆ. ತಾಯಿಯ ಕಿಬ್ಬೊಟ್ಟೆಯ ಮೂಲಕ ಸೂಜಿಯನ್ನು ಭ್ರೂಣದ ಹೃದಯಕ್ಕೆ ಸೇರಿಸಲಾಗುತ್ತದೆ. ಆ, ಬಳಿಕ ಬಲೂನ್ ಕ್ಯಾತಿಟರ್(ತೂರುನಾಳ) ಬಳಸಿಕೊಂಡು, ರಕ್ತದ ಹರಿವನ್ನು ಸುಧಾರಿಸಲು, ಅಡ್ಡಿಯಾಗಿದ್ದ ಕವಾಟವನ್ನು ಓಪನ್ ಮಾಡಲಾಗುತ್ತದೆ ಎಂದು ವೈದ್ಯಕೀಯ ತಂಡವು ತಿಳಿಸಿದೆ. ಈ ಬಲೂನ್ ಡಿಲೇಷನ್ ಪ್ರೊಸೀಜರ್ ಕೈಗೊಂಡಿರುವುದರಿಂದ ಮಗುವಿನ ಹೃದಯವು ಪರಿಪೂರ್ಣವಾಗಿ ಬೆಳವಣಿಗೆಯಾಗಿ, ಜನನ ಬಳಿಕ ಹೃದಯ ಕಾಯಿಲೆಯ ಶಂಕೆಗಳು ತೀರಾ ನಗಣ್ಯವಾಗಬಹುದು ಎಂದು ನಿರೀಕ್ಷಿಸಿದ್ದೇವೆ ಎಂದು ಶಸ್ತ್ರ ಚಿಕಿತ್ಸೆ ಕೈಗೊಂಡ ವೈದ್ಯರೊಬ್ಬರು ತಿಳಿಸಿದ್ದಾರೆ.