ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಇಂದು (ಫೆಬ್ರವರಿ 25) ಕೃಷ್ಣ ನಗರಿ ಗುಜರಾತ್‌ನ ದ್ವಾರಕಾ (Dwarka)ದಲ್ಲಿ ಭಾರತದ ಅತಿ ಉದ್ದದ ಕೇಬಲ್ ಸೇತುವೆಯನ್ನು ಉದ್ಘಾಟಿಸಿದರು. ‘ಸುದರ್ಶನ ಸೇತು’ (Sudarshan Setu) ಎಂದು ಕರೆಯಲ್ಪಡುವ ಇದು ಓಖಾ ಮತ್ತು ಬೇತ್ ದ್ವಾರಕಾ (Okha and Beyt Dwarka) ದ್ವೀಪವನ್ನು ಸಂಪರ್ಕಿಸುತ್ತದೆ. 2.3 ಕಿ.ಮೀ. ಉದ್ದದ ಈ ಸೇತುವೆಯನ್ನು 979 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. 2017ರ ಅಕ್ಟೋಬರ್‌ನಲ್ಲಿ ಪ್ರಧಾನಿ ಮೋದಿ ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಸುಮಾರು 7 ವರ್ಷಗಳಲ್ಲಿ ಇದು ಸಿದ್ಧವಾಗಿದೆ.
ವಿಶೇಷತೆ
27.20 ಮೀಟರ್ ಅಗಲದ ನಾಲ್ಕು ಪಥದ ಸೇತುವೆಯ ಎರಡೂ ಬದಿಗಳಲ್ಲಿ 2.50 ಮೀಟರ್ ಅಗಲದ ಫುಟ್‌ಪಾತ್ ಗಳಿವೆ. ಸುದರ್ಶನ ಸೇತು ವಿಶಿಷ್ಟ ವಿನ್ಯಾಸವನ್ನು ಹೊಂದಿದ್ದು, ಭಗವದ್ಗೀತೆಯ ಶ್ಲೋಕಗಳು ಮತ್ತು ಎರಡೂ ಬದಿಗಳಲ್ಲಿ ಶ್ರೀಕೃಷ್ಣನ ಚಿತ್ರಗಳಿಂದ ಅಲಂಕರಿಸಲ್ಪಟ್ಟ ಕಾಲುದಾರಿಯನ್ನು ಒಳಗೊಂಡಿದೆ. ಆರಂಭದಲ್ಲಿ ಇದನ್ನು ಸಿಗ್ನೇಚರ್ ಬ್ರಿಡ್ಜ್ ಎಂದು ಕರೆಯಲಾಗುತ್ತಿತ್ತು. ಬಳಿಕ ಸುದರ್ಶನ್ ಸೇತು ಅಥವಾ ಸುದರ್ಶನ್ ಬ್ರಿಡ್ಜ್ ಎಂದು ಮರು ನಾಮಕರಣ ಮಾಡಲಾಯಿತು.
Hon’ble Prime Minister Shri @NarendraModi inaugurated the 'Sudarshan Setu', connecting the Okha mainland to Beyt Dwarka island.
— Nirmala Sitharaman Office (@nsitharamanoffc) February 25, 2024
As the longest cable-stayed bridge in the country, spanning 2.32 kilometers, it will significantly reduce travel time between Dwarka and Beyt-Dwarka.… pic.twitter.com/fcRDOZMqqi
ಬೇತ್ ದ್ವಾರಕಾ ಎನ್ನುವುದು ಓಖಾ ಬಂದರಿನ ಬಳಿಯಿರುವ ಒಂದು ದ್ವೀಪವಾಗಿದ್ದು, ಇದು ದ್ವಾರಕಾ ಪಟ್ಟಣದಿಂದ ಸುಮಾರು 30 ಕಿ.ಮೀ. ದೂರದಲ್ಲಿದೆ. ದ್ವಾರಕಾದಲ್ಲಿ ಭಗವಾನ್ ಕೃಷ್ಣನ ಪ್ರಸಿದ್ಧ ದ್ವಾರಕಾಧೀಶ ದೇವಾಲಯವಿದೆ. ಓಖಾ ಮುಖ್ಯ ಪಟ್ಟಣವನ್ನು ಬೇಟ್ ದ್ವಾರಕಾ ದ್ವೀಪದೊಂದಿಗೆ ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿ ಈ ಸೇತುವೆ ಕಾರ್ಯ ನಿರ್ವಹಿಸಲಿದೆ. ಈ ನೇರ ಸಂಪರ್ಕವು ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ. ಜತೆಗೆ ಫುಟ್‌ಪಾತ್‌ನ ಮೇಲ್ಭಾಗದಲ್ಲಿ ಸೌರ ಫಲಕಗಳನ್ನು ಅಳವಡಿಸಲಾಗಿದ್ದು, ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ವಿವಿಧ ಕಾರ್ಯಕ್ರಮಗಳಲ್ಲಿ ಮೋದಿ ಭಾಗಿ
ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಮೋದಿ ಇಂದು ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ. ಅಲ್ಲದೆ ಅವರು ಇಂದು ದ್ವಾರಕಾಧೀಶ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಮಧ್ಯಾಹ್ನ ರಾಜ್‌ಕೋಟ್‌ನಲ್ಲಿ ಗುಜರಾತ್‌ನ ಮೊದಲ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS)ಯನ್ನು ಉದ್ಘಾಟಿಸಲಿದ್ದಾರೆ. ರಾಜ್‌ಕೋಟ್ ಏಮ್ಸ್ ಜತೆಗೆ ಆಂಧ್ರ ಪ್ರದೇಶ, ಪಂಜಾಬ್, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಹೊಸದಾಗಿ ನಿರ್ಮಿಸಲಾದ ಇತರ ನಾಲ್ಕು ಏಮ್ಸ್‌ಗಳನ್ನು ಪ್ರಧಾನಿ ವರ್ಚುವಲ್ ಆಗಿ ಉದ್ಘಾಟಿಸಲಿದ್ದಾರೆ. ರಾಜ್‌ಕೋಟ್ ಸೇರಿದಂತೆ ಈ ಐದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಕೇಂದ್ರವು 6,300 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಿದೆ. ಜತೆಗೆ ಮೋದಿ ಇಂದು ಸಂಜೆ ನಗರದಲ್ಲಿ ನಡೆಯುವ ಮೆಗಾ ರೋಡ್ ಶೋನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ: Narendra Modi: ಗುಜರಾತ್‌ನವನಾದರೂ ನಾನೀಗ ಬನಾರಸಿ ಎಂದ ಪ್ರಧಾನಿ ಮೋದಿ
ಜಾಮ್‌ನಗರದಲ್ಲಿ ಆಯೋಜಿಸಿದ್ದ ರೋಡ್ ಶೋ ಮೂಲಕ ಪ್ರಧಾನಿ ಮೋದಿ ತಮ್ಮ ಎರಡು ದಿನಗಳ ಗುಜರಾತ್ ಪ್ರವಾಸಕ್ಕೆ ಶನಿವಾರ (ಫೆಬ್ರವರಿ 24) ಅದ್ಧೂರಿ ಚಾಲನೆ ನೀಡಿದ್ದರು. ‘ಮೋದಿ, ಮೋದಿ’ ಮತ್ತು ‘ಭಾರತ್ ಮಾತಾ ಕಿ ಜೈ’ ಘೋಷಣೆಗಳ ನಡುವೆ ಅವರಿದ್ದ ವಾಹನವು ಸರ್ಕ್ಯೂಟ್ ಹೌಸ್ ಕಡೆಗೆ ಸಾಗಿತ್ತು. ಈ ವೇಳೆ ರಸ್ತೆಯ ಎರಡೂ ಬದಿಗಳಲ್ಲಿ ಸಾವಿರಾರು ಸಂಖ್ಯೆಯ ಜನರು ಸಾಲುಗಟ್ಟಿ ನಿಂತಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ