ಹೊಸದಿಲ್ಲಿ: ಎನ್‌ಸಿಇಆರ್‌ಟಿ (NCERT text) 3ರಿಂದ 12ನೇ ತರಗತಿಯ ಪಠ್ಯಕ್ರಮ, ಪಠ್ಯಪುಸ್ತಕಗಳು ಮತ್ತು ಕಲಿಕಾ ಸಾಮಗ್ರಿಗಳನ್ನು ಅಂತಿಮಗೊಳಿಸಲು ಲೇಖಕಿ ಮತ್ತು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ (Sudha Murthy) , ಗಾಯಕ ಶಂಕರ್ ಮಹಾದೇವನ್ (Shankar mahadevan), ಅರ್ಥಶಾಸ್ತ್ರಜ್ಞ ಮತ್ತು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಸದಸ್ಯ ಸಂಜೀವ್ ಸನ್ಯಾಲ್ ಸೇರಿದಂತೆ ಸಮಿತಿಯನ್ನು ರಚಿಸಿದೆ.
ರಾಷ್ಟ್ರೀಯ ಶಿಕ್ಷಣ ಸಂಶೋಧನಾ ಮತ್ತಿ ತರಬೇತಿ ಸಮಿತಿಯ (NCERT) ಆಂತರಿಕ ಟಿಪ್ಪಣಿಯ ಪ್ರಕಾರ, 19 ಸದಸ್ಯರ ರಾಷ್ಟ್ರೀಯ ಪಠ್ಯಕ್ರಮ ಮತ್ತು ಬೋಧನಾ ಕಲಿಕಾ ಸಾಮಗ್ರಿ ಸಮಿತಿ (NSTC) ರಚಿಸಲಾಗಿದ್ದು, ಇದು ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತದ (NIEPA) ಕುಲಪತಿ ಎಂ.ಸಿ ಪಂತ್ ಅವರ ನೇತೃತ್ವದಲ್ಲಿರುತ್ತದೆ.
ರಾಷ್ಟ್ರೀಯ ಶಿಕ್ಷಣ ನೀತಿ (national education policy- ಎನ್‌ಇಪಿ) 2020ರ ಅನುಷ್ಠಾನದ ಭಾಗವಾಗಿ ಕೆ. ಕಸ್ತೂರಿರಂಗನ್ (K. Kasturi Rangan) ನೇತೃತ್ವದ ಸಮಿತಿಯು ಅಭಿವೃದ್ಧಿಪಡಿಸಿದ ʼಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮʼ ಚೌಕಟ್ಟಿನೊಂದಿಗೆ (ಎನ್‌ಸಿಎಫ್-ಎಸ್‌ಇ) ಪಠ್ಯಕ್ರಮವನ್ನು ಜೋಡಿಸಲು ಸಮಿತಿಯು ಕೆಲಸ ಮಾಡುತ್ತದೆ. ಅಂತಿಮ ಎನ್‌ಸಿಎಫ್ -ಎಸ್‌ಇ ಅನ್ನು ಈಗಾಗಲೇ ಕೇಂದ್ರ ಶಿಕ್ಷಣ ಸಚಿವಾಲಯಕ್ಕೆ ಸಲ್ಲಿಸಲಾಗಿದೆ. ಸಾರ್ವಜನಿಕ ಡೊಮೇನ್‌ನಲ್ಲಿ ಬಿಡುಗಡೆ ಮಾಡಬೇಕಾಗಿದೆ. ಚೌಕಟ್ಟಿನ ಕರಡು ಏಪ್ರಿಲ್‌ನಲ್ಲಿ ಅಂತಿಮಗೊಂಡಿದೆ.
3ರಿಂದ 12ನೇ ತರಗತಿಗಳಿಗೆ ಶಾಲಾ ಪಠ್ಯಕ್ರಮ, ಬೋಧನೆ ಮತ್ತು ಕಲಿಕಾ ಸಾಮಗ್ರಿಗಳನ್ನು ಅಭಿವೃದ್ಧಿಪಡಿಸಲು NSTCಗೆ ಅಧಿಕಾರ ನೀಡಲಾಗುತ್ತದೆ. ಇದು NCFಗೆ ಸುಗಮ ಪರಿವರ್ತನೆಗಾಗಿ 1 ಮತ್ತು 2ನೇ ತರಗತಿಗಳ ಈಗಿರುವ ಪಠ್ಯಪುಸ್ತಕಗಳನ್ನು ʼಸೂಕ್ತವಾಗಿ ಪರಿಷ್ಕರಿಸುವ; ಕೆಲಸ ಮಾಡುತ್ತದೆ. “ಎನ್‌ಎಸ್‌ಟಿಸಿ ಅಭಿವೃದ್ಧಿಪಡಿಸಿದ ಮತ್ತು ಅಂತಿಮಗೊಳಿಸಿದ ಪಠ್ಯಪುಸ್ತಕಗಳು ಮತ್ತು ಇತರ ಕಲಿಕಾ ಸಾಮಗ್ರಿಗಳನ್ನು ಎನ್‌ಸಿಇಆರ್‌ಟಿ ಪ್ರಕಟಿಸುತ್ತದೆ ಮತ್ತು ವಿತರಿಸುತ್ತದೆʼ ಎಂದು ಟಿಪ್ಪಣಿ ಸೇರಿಸಲಾಗಿದೆ.
ಪ್ರಿನ್ಸ್‌ಟನ್ ವಿಶ್ವವಿದ್ಯಾನಿಲಯದ ಗಣಿತಶಾಸ್ತ್ರದ ಪ್ರಾಧ್ಯಾಪಕ ಮಂಜುಲ್ ಭಾರ್ಗವ್ (Manjul bhargav) ಅವರು ಸಮಿತಿಯ ಸಹ-ಅಧ್ಯಕ್ಷರಾಗಿದ್ದಾರೆ. ಗಣಿತಶಾಸ್ತ್ರಜ್ಞೆ ಸುಜಾತಾ ರಾಮದೊರೈ, ಬ್ಯಾಡ್ಮಿಂಟನ್ ಆಟಗಾರ್ತಿ ಯು. ವಿಮಲ್ ಕುಮಾರ್, ನೀತಿ ಅಧ್ಯಯನ ಕೇಂದ್ರದ ಅಧ್ಯಕ್ಷ ಎಂ.ಡಿ ಶ್ರೀನಿವಾಸ್, ಭಾರತೀಯ ಭಾಷಾ ಸಮಿತಿಯ ಅಧ್ಯಕ್ಷ ಚ.ಮೂ ಕೃಷ್ಣಶಾಸ್ತ್ರಿ ಅವರು ಇತರ ಸದಸ್ಯರಾಗಿದ್ದಾರೆ. ವಿವಿಧ ಕ್ಷೇತ್ರಗಳ ತಜ್ಞರನ್ನು ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದ್ದು, ಅದರ ಅಧ್ಯಕ್ಷರು ವಿವಿಧ ವಿಷಯ ತಜ್ಞರನ್ನು ತೊಡಗಿಸಿಕೊಳ್ಳುವ ಮೂಲಕ ವಿವಿಧ ಪಠ್ಯಕ್ರಮ ಪ್ರದೇಶ ಗುಂಪುಗಳನ್ನು (ಸಿಎಜಿ) ರಚಿಸಲಿದ್ದಾರೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಸಿಎಜಿಗಳು ಪಠ್ಯಕ್ರಮದಲ್ಲಿ ಸೇರಿಸಲಾದ ಪ್ರತಿಯೊಂದು ವಿಷಯಕ್ಕೂ ಪಠ್ಯಪುಸ್ತಕಗಳು ಮತ್ತು ಕಲಿಕಾ ಸಾಮಗ್ರಿಗಳನ್ನು ಅಭಿವೃದ್ಧಿಪಡಿಸಲು NSTCಗೆ ಸಹಾಯ ಮಾಡುತ್ತವೆ. ಸಲಹೆ, ಸಮಾಲೋಚನೆ ಮತ್ತು ಬೆಂಬಲಕ್ಕಾಗಿ ಇತರ ತಜ್ಞರನ್ನು ಆಹ್ವಾನಿಸಲು NSTC ಮುಕ್ತವಾಗಿರುತ್ತದೆ” ಎಂದು ತಿಳಿಸಿದ್ದಾರೆ. ಗಣಿತ, ವಿಜ್ಞಾನ, ದೈಹಿಕ ಶಿಕ್ಷಣ ಮತ್ತು ಸಮಾಜ ವಿಜ್ಞಾನ ಸೇರಿದಂತೆ ಎನ್‌ಸಿಎಫ್-ಎಸ್‌ಇಯಲ್ಲಿ ಉಲ್ಲೇಖಿಸಲಾದ 11 ಡೊಮೇನ್‌ಗಳಲ್ಲಿ ಕೆಲಸ ಮಾಡಲು 11 ಸಿಎಜಿಗಳನ್ನು ರಚಿಸಲಾಗುವುದು ಎಂದು ಚ.ಮೂ ಕೃಷ್ಣಶಾಸ್ತ್ರಿ ಹೇಳಿದ್ದಾರೆ. “1,000ಕ್ಕೂ ಹೆಚ್ಚು ವಿಷಯ ತಜ್ಞರು ಪಠ್ಯಕ್ರಮ ಅಭಿವೃದ್ಧಿ ಮತ್ತು ಪಠ್ಯಪುಸ್ತಕ ವಿನ್ಯಾಸದ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ” ಎಂದಿದ್ದಾರೆ.
ಈ ಶೈಕ್ಷಣಿಕ ವರ್ಷದ ಅಂತ್ಯದೊಳಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಮಿತಿ ಉದ್ದೇಶಿಸಿದೆ. ಮುಂದಿನ ಅಧಿವೇಶನದ ಆರಂಭದ ಮೊದಲು ಹೊಸ ಪಠ್ಯಪುಸ್ತಕಗಳು ಸಿದ್ಧವಾಗುತ್ತವೆ. ಎನ್‌ಎಸ್‌ಸಿಟಿಯ ಕಾರ್ಯನಿರ್ವಹಣೆಯನ್ನು ಬೆಂಬಲಿಸಲು, ಎನ್‌ಸಿಇಆರ್‌ಟಿಯು ರಾಷ್ಟ್ರೀಯ ಮೇಲ್ವಿಚಾರಣಾ ಸಮಿತಿಯನ್ನು (ಎನ್‌ಒಸಿ) ಸಹ ರಚಿಸಿದೆ. ಇದರ ಅಧ್ಯಕ್ಷತೆ ಪಂಜಾಬ್ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಜಗಬೀರ್ ಸಿಂಗ್ ವಹಿಸಿದ್ದಾರೆ.
ಇದನ್ನೂ ಓದಿ: NCERT Textbooks: ಆಪರೇಷನ್ ಪಠ್ಯಪುಸ್ತಕ; ಖಲಿಸ್ತಾನ, ಅಸಮಾನತೆ, ಪ್ರಜಾಪ್ರಭುತ್ವ ಚಾಪ್ಟರ್ ಕೈಬಿಟ್ಟ ಎನ್‌ಸಿಇಆರ್‌ಟಿ