ನವ ದೆಹಲಿ: ಉದ್ಯಮಿಗಳಿಂದ 200 ಕೋಟಿ ರೂ. ಸುಲಿಗೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್, ಆಮ್ ಆದ್ಮಿ ಪಕ್ಷಕ್ಕೆ 60 ಕೋಟಿ ರೂ.ಗಳನ್ನು ದೇಣಿಗೆ (Sukesh Chandrasekhar ) ನೀಡಿರುವುದಾಗಿ ತಿಳಿಸಿದ್ದಾನೆ.
ಪ್ರತಿಯೊಂದು ದೇಣಿಗೆಯನ್ನೂ ನಾನು ಬರೆದು ಕೊಟ್ಟಿದ್ದೇನೆ ಎಂದು ಸಿಬಿಐ ಕೋರ್ಟ್‌ಗೆ ಹಾಜರುಪಡಿಸುವ ಮುನ್ನ ಚಂದ್ರಶೇಖರ್ ಹೇಳಿದ್ದಾನೆ.
ಎಐಎಡಿಎಂಕೆಯ ಎರಡು ಎಲೆಗಳ ಚಿಹ್ನೆ ಕೇಸ್‌ಗೆ ಸಂಬಂಧಿಸಿ ಆರೋಪಿಯಾಗಿರುವ ಚಂದ್ರಶೇಖರ್ ವಿಚಾರಣೆ ಎದುರಿಸುತ್ತಿದ್ದಾನೆ. ಪಕ್ಷದ ಒಂದು ಬಣಕ್ಕೆ ಈ ಚಿಹ್ನೆಯನ್ನು ದೊರಕಿಸಿಕೊಡಲು ಚುನಾವಣಾ ಆಯೋಗದ ಅಧಿಕಾರಿಗೆ ಲಂಚ ಕೊಟ್ಟಿರುವ ಆರೋಪ ಎದುರಿಸುತ್ತಿದ್ದಾನೆ. ಇದರ ಜತೆಗೆ 200 ಕೋಟಿ ರೂ.ಗಳ ವಂಚನೆ ಪ್ರಕರಣದಲ್ಲೂ ಪ್ರಮುಖ ಆರೋಪಿಯಾಗಿದ್ದಾನೆ. ಪಟಿಯಾಲಾ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ.
ಈ ಬಗ್ಗೆ ಆಮ್ ಆದ್ಮಿ ಪಕ್ಷ ತಕ್ಷಣ ಪ್ರತಿಕ್ರಿಯಿಸಿಲ್ಲ. ಸುಕೇಶ್ ಚಂದ್ರಶೇಖರ್ ಬಿಜೆಪಿಯ ವಕ್ತಾರನಂತೆ ಮಾತನಾಡುತ್ತಿದ್ದು, ಜೈಲಿನಿಂದ ಬಿಡುಗಡೆಯಾದ ಬಳಿಕ ಆ ಪಕ್ಷ ಸೇರಬಹುದು ಎಂದು ಆಮ್ ಆದ್ಮಿ ಈ ಹಿಂದೆ ಟೀಕಿಸಿತ್ತು.
ನಟಿ ಜಾಕ್ವೆಲಿನ್ ಫರ್ನಾಂಡೀಸ್ ಕೂಡ 200 ಕೋಟಿ ರೂ. ವಂಚನೆ ಕೇಸ್‌ಗೆ ಸಂಬಂಧಿಸಿ ಕೋರ್ಟ್‌ಗೆ ಹಾಜರಾದರು. ಸುಕೇಶ್ ಚಂದ್ರಶೇಖರ್, ಜಾಕ್ವೆಲಿನ್ ಅವರಿಗೆ ಕೊಟ್ಟಿದ್ದ ಕೋಟ್ಯಂತರ ರೂ. ಗಿಫ್ಟ್‌ಗಳನ್ನು ಇ.ಡಿ ಜಪ್ತಿ ಮಾಡಿತ್ತು.