ನವದೆಹಲಿ: ಭಾರ್ತಿ ಎಂಟರ್‌ಪ್ರೈಸಸ್ (Bharti Enterprises) ಸಂಸ್ಥಾಪಕ ಹಾಗೂ ಅಧ್ಯಕ್ಷರೂ ಆಗಿರುವ ಸುನೀಲ್ ಭಾರ್ತಿ ಮಿತ್ತಲ್ (Sunil Bharti Mittal) ಅವರಿಗೆ ಬ್ರಿಟನ್‌ನ ಪ್ರತಿಷ್ಠಿತ ಆನರರಿ ನೈಟ್‌ಹುಡ್ (Honorary Knighthood) ಪ್ರಶಸ್ತಿ ದೊರೆತಿದೆ. ಬ್ರಿಟನ್‌ನ ಕಿಂಗ್ ಚಾರ್ಲ್ಸ್ III (King Charles III) ಅವರು ಸುನೀಲ್ ಭಾರ್ತಿ ಮಿತ್ತಲ್ ಅವರಿಗೆ ಆನರರಿ ನೈಟ್‌ಹುಡ್ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಇದರೊಂದಿಗೆ ಕಿಂಗ್ ಚಾರ್ಲ್ಸ್ III ಅವರಿಂದ ಆನರರಿ ನೈಟ್‌ಹುಡ್ ಪ್ರಶಸ್ತಿ ಸ್ವೀಕರಿಸಿದ ಮೊದಲ ಭಾರತೀಯ ಎಂಬ ಖ್ಯಾತಿಗೆ ಸುನೀಲ್ ಭಾರ್ತಿ ಮಿತ್ತಲ್ ಭಾಜನರಾಗಿದ್ದಾರೆ.
ಲಂಡನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುನೀಲ್ ಭಾರ್ತಿ ಮಿತ್ತಲ್ ಅವರಿಗೆ ಕಿಂಗ್ ಚಾರ್ಲ್ಸ್ III ಅವರು ‘ನೈಟ್ ಕಮಾಂಡರ್ ಆಫ್ ದಿ ಮೋಸ್ಟ್ ಅಕ್ಸಲೆಂಟ್ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್’ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಈ ಪ್ರಶಸ್ತಿಯು ಬ್ರಿಟನ್ ನೀಡುವ ಅತ್ಯುಚ್ಚ ಪ್ರಶಸ್ತಿಯಾಗಿದೆ. ಬ್ರಿಟನ್ ನಾಗರಿಕರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಆದರೆ, ಕೆಲವೊಮ್ಮೆ ಗೌರವಾರ್ಥವಾಗಿ ಬೇರೆ ದೇಶಗಳ ನಾಗರಿಕರಿಗೂ ಆನರರಿ ನೈಟ್‌ಹುಡ್ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈಗ ಸುನೀಲ್ ಭಾರ್ತಿ ಮಿತ್ತಲ್ ಅವರಿಗೆ ಈ ಗೌರವ ಸಂದಿದೆ.
Founder and Chairman of Bharti Enterprises, Sunil Bharti Mittal has become the first Indian citizen to be awarded Honorary Knighthood, the Knight Commander of the Most Excellent Order of the British Empire (KBE), by King Charles III.
— ANI (@ANI) February 28, 2024
The KBE is among the highest honours… pic.twitter.com/EBBtc5e9hT
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಸುನೀಲ್ ಭಾರ್ತಿ ಮಿತ್ತಲ್, “ಕಿಂಗ್ ಚಾರ್ಲ್ಸ್ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದು ಅತ್ಯಂತ ಸಂತಸದ ಕ್ಷಣವಾಗಿದೆ. ನನಗೆ ಈಗ ಮಾತೇ ಬರುತ್ತಿಲ್ಲ. ತುಂಬ ವಿನಮ್ರವಾಗಿ ಪ್ರಶಸ್ತಿ ಸ್ವೀಕರಿಸಿದ್ದೇನೆ. ಭಾರತ ಹಾಗೂ ಬ್ರಿಟನ್ ಸಂಬಂಧಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ಅದರಲ್ಲೂ, ಇತ್ತೀಚೆಗೆ ಭಾರತ ಹಾಗೂ ಬ್ರಿಟನ್ ದ್ವಿಪಕ್ಷೀಯ ಸಂಬಂಧ, ಸಹಕಾರ, ಸಹಯೋಗವು ಹೊಸ ಇತಿಹಾಸ ಸೃಷ್ಟಿಸುತ್ತಿದೆ. ಮುಂದೆಯೂ ಉಭಯ ದೇಶಗಳ ಸಂಬಂಧ ಹೀಗೆಯೇ ಇರಲಿದೆ” ಎಂದು ತಿಳಿಸಿದರು.
ಭಾರತ ಹಾಗೂ ಬ್ರಿಟನ್ ನಡುವಿನ ಸಂಬಂಧ ವೃದ್ಧಿಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಸುನೀಲ್ ಭಾರ್ತಿ ಮಿತ್ತಲ್ ಅವರಿಗೆ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗಿದೆ. “ಭಾರತ ಹಾಗೂ ಬ್ರಿಟನ್ ಮಧ್ಯೆ ಆರ್ಥಿಕ, ಸಹಕಾರ ಸೇರಿ ಹಲವು ಕ್ಷೇತ್ರಗಳಲ್ಲಿ ಉತ್ತಮ ಸಂಬಂಧವಿದೆ. ಬ್ರಿಟನ್‌ನಲ್ಲಿ ಅಪಾರ ಪ್ರಮಾಣದ ಹೂಡಿಕೆಗೆ ಉತ್ತೇಜನ, ಸಹಕಾರ ನೀಡಿದ ಬ್ರಿಟನ್ ಸರ್ಕಾರಕ್ಕೂ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ. ಹೂಡಿಕೆಯ ವಿಚಾರದಲ್ಲಿ ಬ್ರಿಟನ್ ಸರ್ಕಾರದ ಪಾತ್ರ ದೊಡ್ಡದಿದೆ” ಎಂದು ಸುನೀಲ್ ಭಾರ್ತಿ ಮಿತ್ತಲ್ ಮಾಹಿತಿ ನೀಡಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ