Site icon Vistara News

Sunita Kejriwal: ಸುನೀತಾ ಕೇಜ್ರಿವಾಲ್‌ ಅವರನ್ನು ಭೇಟಿಯಾಗಿ ಬೆಂಬಲ ಸೂಚಿಸಿದ ಕಲ್ಪನಾ ಸೊರೆನ್ ಹೇಳಿದ್ದೇನು?

Sunita Kejriwal

Sunita Kejriwal

ನವದೆಹಲಿ: ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಪತ್ನಿ ಕಲ್ಪನಾ ಸೊರೆನ್ (Kalpana Soren) ಶನಿವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ (Sunita Kejriwal) ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಬೆಂಬಲ ಸೂಚಿಸಿದರು.

ರ‍್ಯಾಲಿಯಲ್ಲಿ ಭಾಗಿ

ಅರವಿಂದ್ ಕೇಜ್ರಿವಾಲ್ ಬಂಧನದ ವಿರುದ್ಧ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಮ್‌ ಆದ್ಮಿ ಪಾರ್ಟಿ (AAP) ಭಾನುವಾರ (ಮಾರ್ಚ್‌ 31) ಆಯೋಜಿಸಿರುವ ಮೆಗಾ ರ‍್ಯಾಲಿಯಲ್ಲಿಯೂ ಕಲ್ಪನಾ ಸೊರೆನ್ ಭಾಗವಹಿಸಲಿದ್ದಾರೆ. ಸುನೀತಾ ಅವರನ್ನು ಭೇಟಿಯಾದ ನಂತರ ಮಾತನಾಡಿದ ಕಲ್ಪನಾ ಸೊರೆನ್ ಅವರು, ʼʼಕೆಲವು ತಿಂಗಳ ಹಿಂದೆ ಜಾರ್ಖಂಡ್‌ನಲ್ಲಿ ಏನು ನಡೆಯಿತೋ ಅದು ಈಗ ನವದೆಹಲಿಯಲ್ಲಿ ನಡೆಯುತ್ತಿದೆ. ನನ್ನ ಪತಿ ಹೇಮಂತ್ ಸೊರೆನ್ ಅವರನ್ನು ಜೈಲಿಗೆ ಕಳುಹಿಸಲಾಯಿತು. ಈಗ ಅರವಿಂದ್ ಅವರನ್ನು ಬಂಧಿಸಲಾಗಿದೆ. ಆದ್ದರಿಂದ ನಮ್ಮ ದುಃಖವನ್ನು ಹಂಚಿಕೊಳ್ಳಲು ನಾನು ಸುನೀತಾ ಅವರನ್ನು ಭೇಟಿಯಾದೆ. ಈಗ ನಾವು ನಮ್ಮ ಹೋರಾಟವನ್ನು ಮುಂದುವರಿಸುವ ಬಗ್ಗೆ ಚರ್ಚೆ ನಡೆಸಿದ್ದೇವೆ. ಸುನೀತಾ ಅವರು ನಮ್ಮನ್ನು ಬೆಂಬಲಿಸುತ್ತಾರೆ ಮತ್ತು ಜಾರ್ಖಂಡ್ ಅರವಿಂದ್ ಕೇಜ್ರಿವಾಲ್ ಅವರನ್ನು ಬೆಂಬಲಿಸುತ್ತದೆ” ಎಂದು ಹೇಳಿದರು.

ಭೂ ಹಗರಣದ ಸಂಬಂಧ ಹೇಮಂತ್ ಸೊರೆನ್ ಅವರನ್ನು ಜನವರಿ 31ರಂದು ಬಂಧಿಸಲಾಗಿತ್ತು. ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗುವ ಮೊದಲು, ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಮಾರ್ಚ್ 21ರಂದು ಬಂಧಿಸಲಾಗಿತ್ತು.

ವಾಟ್ಸ್‌ಆ್ಯಪ್‌ ಅಭಿಯಾನ

ಅರವಿಂದ್ ಕೇಜ್ರಿವಾಲ್ ಅವರ ಬಂಧನವನ್ನು ವಿರೋಧಿಸಿ ಸುನೀತಾ ಅವರು ಶುಕ್ರವಾರ (ಮಾರ್ಚ್‌ 29) ‘ಕೇಜ್ರಿವಾಲ್ ಕೋ ಆಶಿರ್ವಾದ್‌’ ಎನ್ನುವ ವಾಟ್ಸ್‌ಆ್ಯಪ್‌ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಜತೆಗೆ ಮಾರ್ಚ್ 31ರಂದು ಬಿಜೆಪಿ ವಿರುದ್ಧ ರಾಮ್ ಲೀಲಾ ಮೈದಾನದಲ್ಲಿ ಮೆಗಾ ರ‍್ಯಾಲಿ ಆಯೋಜಿಸಿವುದಾಗಿ ಆಪ್‌ ಘೋಷಿಸಿದೆ.

ಯಾರೆಲ್ಲ ಭಾಗಿ?

ಮೆಗಾ ರ‍್ಯಾಲಿಯಲ್ಲಿ ಪ್ರತಿ ಪಕ್ಷಗಳ ʼಇಂಡಿಯಾʼ ಮೈತ್ರಿಕೂಟದ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ, ಶರದ್ ಪವಾರ್, ಉದ್ಧವ್ ಠಾಕ್ರೆ, ಅಖಿಲೇಶ್ ಯಾದವ್, ಡೆರೆಕ್ ಒ’ಬ್ರಿಯಾನ್, ತಿರುಚಿ ಶಿವ, ಫಾರೂಕ್ ಅಬ್ದುಲ್ಲ ಮತ್ತು ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೆನ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಎಎಪಿ ತಿಳಿಸಿದೆ. 20,000ಕ್ಕೂ ಹೆಚ್ಚು ಜನರನ್ನು ಒಟ್ಟುಗೂಡಿಸಿ ರ‍್ಯಾಲಿ ನಡೆಸಲು ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ಪಡೆಯಲಾಗಿದೆ ಎಂದೂ ಪಕ್ಷ ದ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Arvind Kejriwal: ಜೈಲಿನಲ್ಲಿದ್ದೂ ಕೇಜ್ರಿವಾಲ್ ಸಿಎಂ ಆಗಿ ಮುಂದುವರಿಯಬಹುದಾ? ಮುಂದೇನು?

ಈ ಮಧ್ಯೆ ದೆಹಲಿ ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ನೂರಾರು ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಅರವಿಂದ್‌ ಕೇಜ್ರಿವಾಲ್‌ ಅವರ ಇ.ಡಿ ಕಸ್ಟಡಿಯನ್ನು ಏಪ್ರಿಲ್‌ 1ರವರೆಗೆ ವಿಸ್ತರಿಸಿದೆ. ಇದರ ಜತೆಗೆ ಅಬಕಾರಿ ನೀತಿ ಜಾರಿ ಹಗರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿರುವ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಬೇಕು ಎಂಬುದಾಗಿ ಸಲ್ಲಿಸಿದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ವಜಾಗೊಳಿಸಿದೆ. “ಇದೆಲ್ಲ ಶಾಸಕಾಂಗದ ಕೆಲಸ. ಯಾವುದೇ ಮುಖ್ಯಮಂತ್ರಿಯನ್ನು ಹುದ್ದೆಯಿಂದ ಕೆಳಗಿಳಿಸುವ ಅಧಿಕಾರ ನ್ಯಾಯಾಲಯಕ್ಕಿಲ್ಲ” ಎಂದು ಕೋರ್ಟ್‌ ಸ್ಪಷ್ಟಪಡಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version