Site icon Vistara News

Supreme Court: ಮಲಯಾಳಂ ಚಾನೆಲ್ ನಿಷೇಧ ರದ್ದು, ಕೇಂದ್ರದ ‘ಮುಚ್ಚಿದ ಲಕೋಟೆ’ ವಿರುದ್ಧ ಸುಪ್ರೀಂ ಕೆಂಡ

Supreme Court

Supreme Court Strikes Down Electoral Bonds Scheme: What Are The Reasons? What is the Scheme?

ನವದೆಹಲಿ: ಮೀಡಿಯಾಒನ್ (MediaOne) ಚಾನೆಲ್ ಕೇಂದ್ರ ಸರ್ಕಾರದ ನೀತಿಗಳು ಮತ್ತು ನಡೆಗಳ ಟೀಕಿಸಿದ್ದಕ್ಕೆ ಅದನ್ನು ರಾಷ್ಟ್ರ ವಿರೋಧಿ ಅಥವಾ ವ್ಯವಸ್ಥೆಯ ವಿರೋಧಿ ಎಂದು ಅರ್ಥೈಸಲಾಗುವುದಿಲ್ಲ. ಸಶಕ್ತ ಪ್ರಜಾಪ್ರಭುತ್ವಕ್ಕೆ ಮಾಧ್ಯಮ ಸ್ವಾತಂತ್ರ್ಯ ಅಗತ್ಯ ಎಂದು ಸುಪ್ರೀಂ ಕೋರ್ಟ್ (Supreme Court) ಹೇಳಿದೆ. ಮಲಯಾಳಂ ಟಿವಿ ಚಾನೆಲ್ ಮೀಡಿಯಾಒನ್ ಪ್ರಸಾರ ಅನುಮತಿ ನಿರಾಕರಿಸಿದ್ದ ಕೇಂದ್ರ ಸರ್ಕಾರ ನಿರ್ಧಾರವನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದೆ. ಭದ್ರತಾ ಕಾರಣಕ್ಕಾಗಿ ಮೀಡಿಯಾಒನ್ ಪ್ರಸಾರ ಅನುಮತಿ ನವೀಕರಿಸಲು ಕೇಂದ್ರ ಸರ್ಕಾರ ನಿರಾಕರಿಸಿತ್ತು. ಈ ಕುರಿತು ಗಮನ ಸೆಳೆದ ನ್ಯಾಯಾಲಯವು, ಬಹಳ ಕ್ಷೀಣ ಕಾರಣಗಳಿಗಾಗಿ, ರಾಷ್ಟ್ರೀಯ ಭದ್ರತೆಯ ನೆಪವೊಡ್ಡಿ ಅನುಮತಿ ನಿರಾಕರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು. ಕೇಂದ್ರವು ತನ್ನ ತಾರ್ಕಿಕತೆಯನ್ನು ಮುಚ್ಚಿಡುವ ಮತ್ತು ಅವುಗಳನ್ನು “ಸೀಲ್ಡ್ ಕವರ್” ಅಡಿಯಲ್ಲಿ ಸಲ್ಲಿಸುವ ಪ್ರಯತ್ನದ ಕುರಿತು ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಸಾರ್ವಜನಿಕ ವಿನಾಯಿತಿ ಪ್ರಕ್ರಿಯೆಗಳಿಂದ ಉಂಟಾಗುವ ಹಾನಿ ತಪ್ಪಿಸಲು ಸೀಲ್ಡ್ ಕವರ್ ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳಲು ಹೋಗಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರಿದ್ದ ಪೀಠವು, ಭದ್ರತಾ ಕಾರಣಕ್ಕಾಗಿ ಚಾನೆಲ್ ಮೇಲೆ ನಿಷೇಧ ಹೇರಿದ ನಿರ್ಧಾರವನ್ನು ಎತ್ತಿ ಹಿಡಿದಿದ್ದ ಹೈಕೋರ್ಟ್ ನೀಡಿದ್ದ ತೀರ್ಪನ್ನು ರದ್ದುಗೊಳಿಸಿತು. ದೃಢವಾದ ಪ್ರಜಾಪ್ರಭುತ್ವಕ್ಕೆ ಸ್ವತಂತ್ರ ಪತ್ರಿಕಾ ಅಗತ್ಯವಿರುವುದರಿಂದ ಸರ್ಕಾರದ ನೀತಿಗಳ ವಿರುದ್ಧ ಚಾನಲ್‌ನ ವಿಮರ್ಶಾತ್ಮಕ ಅಭಿಪ್ರಾಯಗಳನ್ನು ವ್ಯವಸ್ಥೆಯ ವಿರೋಧಿ ಅಥವಾ ರಾಷ್ಟ್ರ ವಿರೋಧಿ ಎಂದು ಕರೆಯಲಾಗುವುದಿಲ್ಲ ಎಂದು ಪೀಠ ಹೇಳಿತು.

ಸುಖಾಸುಮ್ಮನೆ ರಾಷ್ಟ್ರೀಯ ಭದ್ರತೆಗೆ ಅಪಾಯ ಎಂದು ಹೇಳಿಕೊಳ್ಳಬಾರದು. ಒಂದೊಮ್ಮೆ ಆ ಕಾರಣವನ್ನು ನೀಡುವುದಾದರೆ ಅದನ್ನು ಬೆಂಬಲಿಸುವ ಆಧಾರಗಳನ್ನು ಒದಗಿಸಬೇಕಾಗುತ್ತದೆ ಎಂದು ಪೀಠ ಹೇಳಿತು. ಜನರ ಹಕ್ಕುಗಳನ್ನು ನಿರಾಕರಿಸಲು ರಾಷ್ಟ್ರೀಯ ಭದ್ರತೆಯನ್ನು ಕಾರಣವಾಗಿ ನೀಡುವಂತಿಲ್ಲ. ಈ ಪ್ರಕರಣದಲ್ಲಿ ಗೃಹ ಸಚಿವಾಲಯವು ಅದನ್ನು ಕ್ಷುಲ್ಲಕ ರೀತಿಯಲ್ಲಿ ಬಳಸಿಕೊಂಡಿದೆ ಎಂದು ಪೀಠವು ಅಭಿಪ್ರಾಯಪಟ್ಟಿತು.

ಇದನ್ನೂ ಓದಿ: ಭಾರತದಲ್ಲಿ 8 ಯೂಟ್ಯೂಬ್ ನ್ಯೂಸ್​​ ಚಾನೆಲ್​ಗಳಿಗೆ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ; ಇಲ್ಲಿದೆ ನೋಡಿ ಲಿಸ್ಟ್​​

2020ರಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗಳು ಮತ್ತು ಗಲಭೆಗಳ ಬಗ್ಗೆ ವ್ಯಾಪಕವಾಗಿ ವರದಿ ಮಾಡಿದ ಕೆಲವೇ ಚಾನೆಲ್‌ಗಳಲ್ಲಿ ಒಂದಾಗಿರುವ ಮೀಡಿಯಾ ಒನ್‌ನಲ್ಲಿ ಪ್ರಸಾರ ನಿಷೇಧವನ್ನು ಹೇರುವ ನಿರ್ಧಾರವನ್ನು ಸಮರ್ಥಿಸಲು ಯಾವುದೇ ವಸ್ತು ಸಂಗತಿಗಳು ಅಥವಾ ಪುರಾವೆಗಳನ್ನು ತೋರಿಸಲು ಕೇಂದ್ರವು ವಿಫಲವಾಗಿದೆ. ಚಾನೆಲ್ ಭಯೋತ್ಪಾದಕ ಸಂಪರ್ಕ ಹೊಂದಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಸುಖಾ ಸುಮ್ಮನೆ ರಾಷ್ಟ್ರೀಯ ಭದ್ರತಾ ಹಕ್ಕುಗಳನ್ನು ಕ್ಲೇಮ್ ಮಾಡಲಾಗುವುದಿಲ್ಲ ಎಂದು ಪೀಠವು ಹೇಳಿತು.

Exit mobile version