Site icon Vistara News

Supreme Court: ತಮಿಳುನಾಡು ರಾಜ್ಯಪಾಲ, ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ; ಯಾವ ಪ್ರಕರಣ?

tamilnadu governor

tamilnadu governor

ನವದೆಹಲಿ: ಡಿಎಂಕೆ (DMK) ನಾಯಕರೊಬ್ಬರನ್ನು ಮತ್ತೆ ಸಚಿವರನ್ನಾಗಿ ನೇಮಿಸಲು ನಿರಾಕರಿಸಿದ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ (RN Ravi) ಅವರನ್ನು ಸುಪ್ರೀಂ ಕೋರ್ಟ್ (Supreme Court) ಗುರುವಾರ (ಮಾರ್ಚ್‌ 21) ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ರಾಜ್ಯಪಾಲರು ಸುಪ್ರೀಂ ಕೋರ್ಟ್ ಅನ್ನು ಧಿಕ್ಕರಿಸುತ್ತಿದ್ದಾರೆ ಎಂದು ಆರೋಪಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ (DY Chandrachud), “ರಾಜ್ಯಪಾಲರು ಸಂವಿಧಾನವನ್ನು ಅನುಸರಿಸದಿದ್ದರೆ, ಸರ್ಕಾರ ಏನು ಮಾಡುತ್ತದೆ?” ಎಂದು ಕೇಂದ್ರವನ್ನು ಪ್ರಶ್ನಿಸಿದರು.

ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರನ್ನೂ ಒಳಗೊಂಡ ನ್ಯಾಯಪೀಠವು ಡಿಎಂಕೆಯ ಕೆ.ಪೊನ್ಮುಡಿ (K Ponmudi) ಅವರನ್ನು ಸಚಿವರನ್ನಾಗಿ ನೇಮಿಸಲು ರಾಜ್ಯಪಾಲರಿಗೆ ನಾಳೆಯವರೆ (ಮಾರ್ಚ್‌ 22) ಒಂದು ದಿನದ ಕಾಲಾವಕಾಶ ನೀಡಿದೆ.

ಏನಿದು ಪ್ರಕರಣ ?

ರಾಜ್ಯಪಾಲರು ಇತ್ತೀಚೆಗೆ ಡಿಎಂಕೆ ಹಿರಿಯ ನಾಯಕ ಪೊನ್ಮುಡಿ ಅವರನ್ನು ರಾಜ್ಯ ಸಚಿವ ಸಂಪುಟಕ್ಕೆ ಮರು ಸೇರ್ಪಡೆಗೊಳಿಸಲು ನಿರಾಕರಿಸಿದ್ದರು ಮತ್ತು ಇದು ಸಾಂವಿಧಾನಿಕ ನೈತಿಕತೆಗೆ ವಿರುದ್ಧ ಎಂದು ಹೇಳಿದ್ದರು. ಇದರಿಂದಾಗಿ ಎಂ.ಕೆ.ಸ್ಟಾಲಿನ್‌ ಸರ್ಕಾರ ಸುಪ್ರೀಂ ಕೋರ್ಟ್‌ (Supreme Court) ಮೆಟ್ಟಿಲೇರಿತ್ತು. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಪೊನ್ಮುಡಿ ಶಿಕ್ಷೆಯನ್ನು ಅಮಾನತುಗೊಳಿಸಿದ ನಂತರ ಅವರನ್ನು ಸಚಿವರನ್ನಾಗಿ ನೇಮಕ ಮಾಡುವಂತೆ ತಮಿಳುನಾಡು ಸಿಎಂ ಸ್ಟಾಲಿನ್‌ ಶಿಫಾರಸು ಮಾಡಿದ್ದರು. ಆದರೆ ರಾಜ್ಯಪಾಲ ಆರ್.ಎನ್.ರವಿ ಅವರು ಪೊನ್ಮುಡಿ ಅವರ ಶಿಕ್ಷೆಯನ್ನು ಅಮಾನತುಗೊಳಿಸಲಾಗಿದೆ ಹೊರತು ರದ್ದು ಪಡಿಸಿಲ್ಲ ಎಂದು ಕಾರಣ ನೀಡಿ ಶಿಫಾರಸನ್ನು ತಳ್ಳಿ ಹಾಕಿದ್ದರು.

“ಸಂವಿಧಾನದ ಪ್ರಕಾರ ಕಾರ್ಯನಿರ್ವಹಿಸುವಂತೆ ರಾಜ್ಯಪಾಲರಿಗೆ ನಿರ್ದೇಶನ ನೀಡುವ ಆದೇಶವನ್ನು ನಾವು ಹೊರಡಿಸುತ್ತೇವೆ. ತಮಿಳುನಾಡು ರಾಜ್ಯಪಾಲರು ಮತ್ತು ಅವರ ನಡವಳಿಕೆಯ ಬಗ್ಗೆ ನಾವು ಗಂಭೀರವಾಗಿ ಯೋಚಿಸಬೇಕಾಗಿದೆ. ಅವರು ಸುಪ್ರೀಂ ಕೋರ್ಟ್ (Supreme Court) ವಿರುದ್ಧ ಕಾರ್ಯ ನಿರ್ವಹಿಸುತ್ತಿದ್ದಾರೆ” ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದರು.

ʼʼರಾಜ್ಯಪಾಲರು ಸುಪ್ರೀಂ ಕೋರ್ಟ್ ಆದೇಶನ್ನು ಅನ್ನು ಧಿಕ್ಕರಿಸುತ್ತಿದ್ದಾರೆ” ಎಂದು ಡಿ.ವೈ.ಚಂದ್ರಚೂಡ್ ತಿಳಿಸಿದರು. “ನಾನು ವ್ಯಕ್ತಿ / ಸಚಿವರ ಬಗ್ಗೆ ವಿಭಿನ್ನ ದೃಷ್ಟಿಕೋನವನ್ನು ಹೊಂದಿರಬಹುದು. ಆದರೆ ನಾವು ಸಾಂವಿಧಾನದ ಪ್ರಕಾರ ಮುಂದುವರಿಯಬೇಕಾಗುತ್ತದೆ” ಎಂದು ಅವರು ಅಭಿಪ್ರಾಯಪಟ್ಟರು.

ಹಿಂದಿನಿಂದಲೂ ನಡೆಯುತ್ತಿದೆ ಜಟಾಪಟಿ

2021ರಲ್ಲಿ ತಮಿಳುನಾಡು ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡ ನಂತರ ಆರ್.ಎನ್.ರವಿ ಅವರ ಕಚೇರಿ ಮತ್ತು ಎಂ.ಕೆ.ಸ್ಟಾಲಿನ್ ಸರ್ಕಾರದ ನಡುವೆ ಹಲವು ವಿಚಾರಗಳಿಗೆ ಜಟಾಪಟಿ ನಡೆಯುತ್ತಲೇ ಇದೆ. ಈ ಪೈಕಿ ಪೊನ್ಮುಡಿ ಅವರನ್ನು ಸಚಿವರನ್ನಾಗಿ ನೇಮಿಸಲು ರವಿ ನಿರಾಕರಿಸಿರುವುದು ಇತ್ತೀಚಿನ ಉದಾಹರಣೆ. ಡಿಎಂಕೆ ಸರ್ಕಾರವು ತನ್ನ ಕೆಲಸದಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತಿದೆ ಎಂದು ರವಿ ಪದೇ ಪದೆ ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ: AAP Office: ಕೇಜ್ರಿವಾಲ್‌ಗೆ ಮತ್ತೊಂದು ಶಾಕ್;‌ ಆಪ್‌ ಕಚೇರಿ ತೆರವಿಗೆ ಸುಪ್ರೀಂ ಆದೇಶ

ಈ ಹಿಂದೆ ರಾಜಭವನವು ಮಸೂದೆಗಳನ್ನು ತೆರವುಗೊಳಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ (Supreme Court) ಅನ್ನು ಸಂಪರ್ಕಿಸಿತ್ತು. ರಾಜ್ಯಪಾಲರು ಮಂತ್ರಿಮಂಡಲದ ಸಲಹೆಯ ಮೇರೆಗೆ ಕಾರ್ಯನಿರ್ವಹಿಸಬೇಕು ಎಂದು ನ್ಯಾಯಾಲಯವು ಆಗ ಹೇಳಿತ್ತು. ರವಿ ಅವರನ್ನು ಉನ್ನತ ಹುದ್ದೆಯಿಂದ ತೆಗೆದುಹಾಕುವಂತೆ ಕೋರಿ ಮುಖ್ಯಮಂತ್ರಿ ಸ್ಟಾಲಿನ್ ಕಳೆದ ವರ್ಷ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version