ಹೊಸದಿಲ್ಲಿ: ತಮಿಳುನಾಡು ಸರ್ಕಾರ ಚೆನ್ನೈ ಸಮುದ್ರ ತೀರದಲ್ಲಿ ನಿರ್ಮಿಸಲು ಉದ್ದೇಸಿರುವ 134 ಅಡಿ ಎತ್ತರದ ಎಂ.ಕರುಣಾನಿಧಿ (M Karunanidhi) ನೆನಪಿನ ʼಪೆನ್ ಸ್ಮಾರಕʼಕ್ಕೆ (pen monument) ಸುಪ್ರೀಂ ಕೋರ್ಟ್ (supreme court) ಹಸಿರು ನಿಶಾನೆ ನೀಡಿದೆ.
ದಿವಂಗತ ಮುಖ್ಯಮಂತ್ರಿ ಮತ್ತು ಡ್ರಾವಿಡ ಮುನ್ನೇತ್ರ ಕಳಗಂ (DMK) ಪಕ್ಷದ ವರಿಷ್ಠ ಎಂ.ಕರುಣಾನಿಧಿ ಅವರ ನೆನಪಿನಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (M.K Stalin) ನೇತೃತ್ವದ ಡಿಎಂಕೆ ಸರ್ಕಾರ ಚೆನ್ನೈಯ ಮರೀನಾ ಬೀಚ್‌ನಲ್ಲಿ (Marina beach) ಈ ಸ್ಮಾರಕ ನಿರ್ಮಿಸಲು ಮುಂದಾಗಿದೆ. 134 ಅಡಿ ಎತ್ತರದ ಈ ಸ್ಮಾರಕ ಮೀನುಗಾರರ ಬದುಕಿಗೆ ತೊಂದರೆ ಉಂಟುಮಾಡಲಿದೆ ಎಂದು ಕಕ್ಷಿದಾರ, ಹಿಂದಿನ ಎಐಎಡಿಎಂಕೆ (AIADMK) ಸರ್ಕಾರದ ಮಾಜಿ ಮೀನುಗಾರಿಕಾ ಸಚಿವ ಡಿ.ಜಯಕುಮಾರ್ ಮೀನುಗಾರರ ಪರ ವಾದ ಮಂಡಿಸಿದ್ದರು. ಅವರ ಅರ್ಜಿಯನ್ನು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರ ಪೀಠ ವಜಾಗೊಳಿಸಿದೆ.
ಪರಿಸರ ಕಾಳಜಿ ಮತ್ತು ಮೀನುಗಾರರ ಜೀವನೋಪಾಯದ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಪೆನ್ ಸ್ಮಾರಕ ನಿರ್ಮಾಣವನ್ನು ನಿಲ್ಲಿಸುವಂತೆ ಅರ್ಜಿದಾರರು ಕೋರಿದ್ದರು. ಪರಿಸರ ವ್ಯವಸ್ಥೆಗೆ ಹಾನಿಯಾಗಬಹುದಾದ್ದರಿಂದ ಸ್ಮಾರಕ ನಿರ್ಮಾಣ ನಿರ್ಧಾರವನ್ನು ಹಿಂಪಡೆಯಲು ತಮಿಳುನಾಡು ಸರ್ಕಾರ ಮತ್ತು ಪರಿಸರ ಸಚಿವಾಲಯಕ್ಕೆ ನಿರ್ದೇಶಿಸಬೇಕು. ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು ಕಾಯಿದೆ ಉಲ್ಲಂಘಿಸಿ ಈ ಸ್ಮಾರಕಕ್ಕೆ ಅನುಮತಿ ನೀಡಿವೆ. ತಮಿಳುನಾಡು ಇತ್ತೀಚಿನ ವರ್ಷಗಳಲ್ಲಿ ಸಮುದ್ರ ತೀರದಲ್ಲಿ ಅನಿಯಂತ್ರಿತ ನಿರ್ಮಾಣ ಚಟುವಟಿಕೆಗಳು ಮತ್ತು ಹಿನ್ನೀರಿಗೆ ತಡೆಯ ಕಾರಣದಿಂದ ವಿನಾಶಕಾರಿ ಪ್ರವಾಹಗಳನ್ನು ಎದುರಿಸುತ್ತಿದೆ ಎಂದು ತಜ್ಞರ ಅಭಿಪ್ರಾಯ ಆಧರಿಸಿ ಕಕ್ಷಿದಾರರು ವಾದಿಸಿದ್ದರು.
ಅರ್ಜಿಯನ್ನು ವಿರೋಧಿಸಿದ ಹಿರಿಯ ವಕೀಲ ಪಿ.ವಿಲ್ಸನ್, ಅರ್ಜಿಯು ಯಾವುದೇ ಮೆರಿಟ್ ಹೊಂದಿಲ್ಲ ಮತ್ತು ಸ್ಮಾರಕಕ್ಕೆ ಕರಾವಳಿ ನಿಯಂತ್ರಣದ ಅನುಮತಿಯನ್ನು ಪಡೆಯಲಾಗಿದೆ ಎಂದು ವಾದಿಸಿದರು. ಆಲಿವ್ ರಿಡ್ಲೆ ಆಮೆಗಳ ಮೇಲೂ ಪ್ರತಿಕೂಲ ಪರಿಣಾಮ ಬೀರುವುದಿಲ್ಲ. ಮಾಜಿ ಸಚಿವ ಜಯಕುಮಾರ್ ಅವರ ಮನವಿಯು ರಾಜಕೀಯ ಪ್ರೇರಿತವಾಗಿದೆ. 2018ರಲ್ಲಿ ಆಗಿನ ಎಐಎಡಿಎಂಕೆ ಸರ್ಕಾರವು ಕರುಣಾನಿಧಿ ಅವರ ಸಮಾಧಿಗೆ 6 ಅಡಿ ಉದ್ದಗಲದ ಸ್ಮಶಾನ ಭೂಮಿಯನ್ನು ನೀಡಲು ನಿರಾಕರಿಸಿತ್ತು ಎಂದು ವಿಲ್ಸನ್ ಪೀಠಕ್ಕೆ ತಿಳಿಸಿದರು.