Site icon Vistara News

Supreme Court: ವೈದ್ಯಕೀಯ ನಿರ್ಲಕ್ಷ್ಯ ತೋರಿದ ಸೇನೆಗೆ ಸುಪ್ರೀಂ ಕೋರ್ಟ್‌ ತರಾಟೆ; ವಾಯುಪಡೆ ಯೋಧನಿಗೆ ₹1.5 ಕೋಟಿ ಪರಿಹಾರ ನೀಡಲು ಆದೇಶ

Supreme Court

ಹೊಸದಿಲ್ಲಿ: 2001-02ರ ಪರಾಕ್ರಮ್ ಕಾರ್ಯಾಚರಣೆಯ ಸಂದರ್ಭದಲ್ಲಿ ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ (Medical Negligence) ಏಡ್ಸ್‌ಗೆ (AIDS) ತುತ್ತಾದ ವಾಯುಪಡೆ (Indian Air Force) ಯೋಧನಿಗೆ ₹1.5 ಕೋಟಿ ಪರಿಹಾರ ನೀಡಲು ಸುಪ್ರೀಂ ಕೋರ್ಟ್‌ (Supreme Court) ವಾಯುಪಡೆ ಹಾಗೂ ಭಾರತೀಯ ಸೈನ್ಯಕ್ಕೆ (Indian Army) ಆದೇಶಿಸಿದೆ.

ಪರಾಕ್ರಮ್‌ ಕಾರ್ಯಾಚರಣೆ (Operation Parakram) ಸಂದರ್ಭ ಗಡಿಯಲ್ಲಿ ನಿಯೋಜಿಸಲಾದ ರಕ್ಷಣಾ ಸೇವಾ ಸಿಬ್ಬಂದಿಯ ಮೇಲೆ ವೈದ್ಯಕೀಯ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಭಾರತೀಯ ವಾಯುಪಡೆ ಮತ್ತು ಭಾರತೀಯ ಸೇನೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಪ್ಪಿತಸ್ಥರೆಂದು ಪರಿಗಣಿಸಿದೆ. ಫೀಲ್ಡ್‌ ಆಸ್ಪತ್ರೆಯಲ್ಲಿ ಪಡೆದ ಚಿಕಿತ್ಸೆ ಹಾಗೂ ರಕ್ತ ವರ್ಗಾವಣೆಯ ಸಂದರ್ಭದಲ್ಲಿ ವಾಯುಪಡೆ ಯೋಧ ಏಡ್ಸ್‌ಗೆ ತುತ್ತಾಗಿದ್ದರು.

ವೈದ್ಯಕೀಯ ನಿರ್ಲಕ್ಷ್ಯಕ್ಕಾಗಿ ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆಯನ್ನು ತಪ್ಪಿತಸ್ಥರೆಂದು ಪರಿಗಣಿಸಿ 1 ಕೋಟಿ 54 ಲಕ್ಷ ರೂ. ದಂಡವನ್ನು ಜಸ್ಟಿಸ್ ರವೀಂದ್ರ ಭಟ್ ನೇತೃತ್ವದ ಪೀಠ ವಿಧಿಸಿದೆ. ಈ ಮೊತ್ತವನ್ನು ಆರು ವಾರಗಳಲ್ಲಿ ಐಎಎಫ್ ಪಾವತಿಸುವಂತೆ ಕೋರ್ಟ್ ಆದೇಶಿಸಿದೆ. ಭಾರತೀಯ ಸೇನೆಯಿಂದ ಅರ್ಧದಷ್ಟು ಮೊತ್ತವನ್ನು ವಸೂಲಿ ಮಾಡಲು ನ್ಯಾಯಾಲಯ ಐಎಎಫ್‌ಗೆ ಸ್ವಾತಂತ್ರ್ಯ ನೀಡಿದೆ.

2014ರಲ್ಲಿ ಯೋಧನನ್ನು HIV ಪಾಸಿಟಿವ್ ಎಂದು ಗುರುತಿಸಲಾಯಿತು ಮತ್ತು 2016ರಲ್ಲಿ ಸೈನ್ಯದಿಂದ ಬಿಡುಗಡೆ ಮಾಡಲಾಯಿತು. ಅವರು ಈ ಹಿಂದೆ “ನಿರ್ಲಕ್ಷ್ಯದ ವೈದ್ಯಕೀಯ ಚಿಕಿತ್ಸೆ”ಗಾಗಿ ಪರಿಹಾರವನ್ನು ಕೋರಿ ರಾಷ್ಟ್ರೀಯ ಗ್ರಾಹಕ ವಿವಾದಗಳ ಪರಿಹಾರ ವೇದಿಕೆಯನ್ನು ಸಂಪರ್ಕಿಸಿದ್ದರು. ಆದರೆ ರಕ್ತ ವರ್ಗಾವಣೆಯಿಂದ ರೋಗ ಬಂದಿದೆ ಎನ್ನಲು ಯಾವುದೇ ಸ್ಪಷ್ಟ ಪುರಾವೆಯಿಲ್ಲ ಎಂದು ರಕ್ಷಣಾ ಪಡೆ ಹೇಳಿತ್ತು. NCDRC ಪರಿಹಾರವನ್ನು ಕೊಡಲು ನಿರಾಕರಿಸಿತ್ತು. ಅಧಿಕಾರಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಸಶಸ್ತ್ರ ಪಡೆಗಳ ಸಿಬ್ಬಂದಿಯ ಘನತೆ ಮತ್ತು ಯೋಗಕ್ಷೇಮವನ್ನು ಎತ್ತಿಹಿಡಿಯುವ ಮಹತ್ವವನ್ನು ಒತ್ತಿಹೇಳಿದೆ. “ಜನತೆ ಗಣನೀಯ ಉತ್ಸಾಹ ಮತ್ತು ದೇಶಭಕ್ತಿಯ ಕರ್ತವ್ಯದ ಪ್ರಜ್ಞೆಯೊಂದಿಗೆ ಸಶಸ್ತ್ರ ಪಡೆಗಳನ್ನು ಸೇರುತ್ತಾರೆ. ಇದು ತಮ್ಮ ಜೀವನದ ಅಂತಿಮ ತ್ಯಾಗಕ್ಕೆ ಸಿದ್ಧರಾಗುವ ಪ್ರಜ್ಞಾಪೂರ್ವಕ ನಿರ್ಧಾರವನ್ನು ಒಳಗೊಂಡಿರುತ್ತದೆ. ಹೀಗಿರುವಾಗ ಇವರ ಶಾರೀರಿಕ ಮತ್ತು ಮಾನಸಿಕ ಯೋಗಕ್ಷೇಮ ಕಾಪಾಡುವ ಅತ್ಯುನ್ನತ ಸುರಕ್ಷತೆಯ ಮಾನದಂಡಗಳನ್ನು ಖಚಿತಪಡಿಸಿಕೊಳ್ಳಲು ಸಶಸ್ತ್ರ ಪಡೆಗಳೊಳಗಿನ ಅಧಿಕಾರದ ಶ್ರೇಣಿಗಳನ್ನು ಒಳಗೊಂಡಂತೆ ಎಲ್ಲಾ ಕಾರ್ಯನಿರ್ವಾಹಕರು ಕರ್ತವ್ಯಶೀಲರಾಗುವುದು ಕನಿಷ್ಠ ಅಗತ್ಯ. ವಾಯುಪಡೆಯ ಸಿಬ್ಬಂದಿಯ ನೈತಿಕ ಸ್ಥೈರ್ಯವನ್ನು ಖಚಿತಪಡಿಸಿಕೊಳ್ಳುವುದು ಅವರ ಬದ್ಧತೆ ಮತ್ತು ವಿಶ್ವಾಸವನ್ನು ಬಲಪಡಿಸುತ್ತದೆ. ಇಂಥ ಪ್ರಕರಣಗಳು ಸಿಬ್ಬಂದಿಯಲ್ಲಿ ವಿಶ್ವಾಸ ಕಳೆದುಕೊಳ್ಳುವಂತೆ ಮಾಡುತ್ತದೆ, ಅವರ ನೈತಿಕತೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಹತಾಶೆಯ ಭಾವನೆಯನ್ನು ಬಿತ್ತುತ್ತದೆ” ಎಂದು ಪೀಠ ಹೇಳಿದೆ.

“ಈ ನ್ಯಾಯಾಲಯವು ಸ್ಪಷ್ಟವಾದ ಪರಿಹಾರವನ್ನು ನೀಡಲು ಪ್ರಯತ್ನಿಸಿದೆಯಾದರೂ, ಮೇಲ್ಮನವಿದಾರನ ಘನತೆಯ ಅಡಿಪಾಯವನ್ನು ಅಲುಗಾಡಿಸಿರುವ, ಗೌರವವನ್ನು ಕಸಿದುಕೊಂಡಿರುವ ಇಂತಹ ನಡವಳಿಕೆಯಿಂದ ಉಂಟಾದ ಹಾನಿಯನ್ನು ಯಾವುದೇ ಹಣಕಾಸು ಪರಿಹಾರ ಸರಿಪಡಿಸಲು ಸಾಧ್ಯವಿಲ್ಲ. ಇದು ಆತನನ್ನು ಹತಾಶನಾಗಿ ಮಾತ್ರವಲ್ಲದೆ ಸಿನಿಕನನ್ನಾಗಿಯೂ ಮಾಡಿದೆ” ಎಂದು ಪೀಠವು ತನ್ನ ತೀರ್ಪಿನಲ್ಲಿ ಹೇಳಿದೆ.

ಇದನ್ನೂ ಓದಿ: Su 30MKI: ಮೇಕ್‌ ಇನ್‌ ಇಂಡಿಯಾಗೆ ಬಲ; ವಾಯುಪಡೆ ಸೇರಲಿವೆ 12 ಸು-30 ಎಂಕೆಐ ಯುದ್ಧವಿಮಾನ

Exit mobile version