ವರ್ಷದ ತುದಿಯಲ್ಲಿ ಎಲ್ಲಾ ಕ್ಷೇತ್ರಗಳ ಸಿಂಹಾವಲೋಕನವನ್ನೂ ಮಾಡಿದಂತೆ, ಕಾನೂನು ಕ್ಷೇತ್ರದಲ್ಲಿ ಮಾಡಿದಾಗ ಕೆಲವು ಮಹತ್ವದ ಬೆಳವಣಿಗೆಗಳು ಕಂಡುಬರುತ್ತವೆ. ಏಳು-ಬೀಳುಗಳು ಸ್ವಾಭಾವಿಕ ಹೌದೆನ್ನುವಂತೆ, ಮಹಿಳಾ ಹಕ್ಕುಗಳ ಕ್ಷೇತ್ರದಲ್ಲಿ ಮೈಲಿಗಲ್ಲು ಎನಿಸುವಂಥ ಕೆಲವು ತೀರ್ಪುಗಳು ದೇಶದ ಪರಮೋಚ್ಚ ನ್ಯಾಯಾಲಯದಿಂದ ಹೊರಬಿದ್ದಿವೆ. ಈ ವರ್ಷದ ಪ್ರಮುಖ ತೀರ್ಪುಗಳ ಬಗ್ಗೆ ಇಲ್ಲಿದೆ ಟಿಪ್ಪಣಿ.
ವೈವಾಹಿಕ ಅತ್ಯಾಚಾರ: ವಿವಾಹದ ಚೌಕಟ್ಟಿನಲ್ಲಿ ಪತ್ನಿಯ ಮೇಲೆ ಪತಿ ನಡೆಸುವ ಲೈಂಗಿಕ ದೌರ್ಜನ್ಯವೂ ಅತ್ಯಾಚಾರದ ವ್ಯಾಪ್ತಿಯಲ್ಲೇ ಬರುತ್ತದೆ ಎಂದು ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ ಸೆಪ್ಟೆಂಬರ್ ೨೯ರಂದು ತೀರ್ಪಿತ್ತಿದೆ. ಆದರೆ ಗರ್ಭಪಾತದ ಕುರಿತಾಗಿ ನೀಡಲಾದ ತೀರ್ಪಿನ ಭಾಗವಾಗಿ ಈ ನಿರ್ಣಯ ಹೊರಬಿದ್ದಿದೆ. ಆದರೆ ದೇಶಾದ್ಯಂತ ಲೆಕ್ಕವಿಲ್ಲದಷ್ಟು ಮಹಿಳೆಯರ ಎದೆಯಲ್ಲಿ ನಿಟ್ಟುಸಿರು ಹೊರಹೊಮ್ಮಿದ್ದು ಸತ್ಯ. ವೈದ್ಯಕೀಯ ಗರ್ಭಪಾತದ (MTP) ಕಾನೂನಿನ ಅಡಿಯಲ್ಲಿ ವೈವಾಹಿಕ ಲೈಂಗಿಕ ದೌರ್ಜನ್ಯವನ್ನೂ ಅತ್ಯಾಚಾರ ಎಂದು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಹಾಗಾಗಿ ಅತ್ಯಾಚಾರದ ಎಂಬುದ ವ್ಯಾಖ್ಯೆಯ ಅಡಿಯಲ್ಲಿ ವೈವಾಹಿಕ ಅತ್ಯಾಚಾರವೂ ಪರಿಗಣಿತವಾಗಲಿದೆ.
ಸುರಕ್ಷಿತ ಗರ್ಭಪಾತ: ವಿವಾಹಿತೆ ಅಥವಾ ಅವಿವಾಹಿತೆ ಎಂಬ ಭೇದವಿಲ್ಲದಂತೆ, ದೇಶದ ಎಲ್ಲಾ ಮಹಿಳೆಯರಿಗೂ ೨೪ ವಾರಗಳವರೆಗೆ ಸುರಕ್ಷಿತವಾಗಿ ಗರ್ಭಪಾತ ಮಾಡಿಸಿಕೊಳ್ಳುವ ಅವಕಾಶವಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಮುಖ್ಯನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ತ್ರಿ ಸದಸ್ಯ ಪೀಠ ಸೆಪ್ಟೆಂಬರ್ ೨೯ರಂದು ಉಚ್ಚರಿಸಿದ ನಿರ್ಣಯದಲ್ಲಿ, ಮಹಿಳೆಯ ವೈವಾಹಿಕ ಸ್ಥಿತಿಯ ಆಧಾರದ ಮೇಲೆ ಗರ್ಭಪಾತ ನಿರಾಕರಿಸುವುದು ಸಮಾನತೆಯ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಹೇಳಿತ್ತು.
ಕೆಲವು ವಿಶೇಷ ಪರಿಸ್ಥಿತಿಗಳಲ್ಲಿ, ೨೦ರಿಂದ ೨೪ವಾರಗಳ ಭ್ರೂಣದ ಗರ್ಭಪಾತಕ್ಕೆ ೨೦೦೩ರ ವೈದ್ಯಕೀಯ ಗರ್ಭಪಾತ ಕಾಯ್ದೆಯ ಅಡಿಯಲ್ಲಿ ಕೆಲವು ವಿಭಾಗದ ಮಹಿಳೆಯರಿಗೆ ಈಗಾಗಲೇ ಅವಕಾಶವಿದೆ. ಆದರೆ ಈ ತೀರ್ಪಿನಲ್ಲಿ ಎಲ್ಲಾ ಮಹಿಳೆಯರಿಗೂ ಈ ಹಕ್ಕನ್ನು ವಿಸ್ತರಿಸಲಾಗಿದೆ. ೨೩ ವಾರಗಳ ಭ್ರೂಣವನ್ನು ಪತನ ಮಾಡುವುದಕ್ಕೆ ೨೫ ವರ್ಷದ ಅವಿವಾಹಿತ ಮಹಿಳೆಗೆ ದಿಲ್ಲಿ ಹೈಕೋರ್ಟ್ ಅವಕಾಶ ನಿರಾಕರಿಸಿತ್ತು. ಆ ಮಗುವಿನ ತಂದೆ ತನ್ನನ್ನು ವಿವಾಹವಾಗಲು ಅವಕಾಶ ನಿರಾಕರಿಸಿದ್ದರಿಂದ ಗರ್ಭಪಾತಕ್ಕೆ ಅವಕಾಶ ಕೋರುತ್ತಿರುವುದಾಗಿ ಆಕೆ ತನ್ನ ಅರ್ಜಿಯಲ್ಲಿ ಹೇಳಿದ್ದರು.
ಉಪನಾಮ ನಿರ್ಧರಿಸುವ ಹಕ್ಕು: ತನ್ನ ಮಗುವಿನ ಉಪನಾಮ ಅಥವಾ ಕುಟುಂಬದ ಹೆಸರನ್ನು ನಿರ್ಧರಿಸುವ ಹಕ್ಕು ಸಹಜ ಪೋಷಕಿಯಾದ ತಾಯಿಗಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ತನ್ನ ಮಗುವನ್ನು ಹೊಸ ಕುಟುಂಬಕ್ಕೆ ಸೇರ್ಪಡೆ ಮಾಡುವ ಅಥವಾ ದತ್ತು ನೀಡುವ ಹಕ್ಕುಗಳು ತಾಯಿಯದ್ದು. ತಂದೆಗೆ ಇರುವಂಥ ಎಲ್ಲಾ ಹಕ್ಕುಗಳೂ ಮಗುವಿನ ಮೇಲೆ ತಾಯಿಗಿದೆ. ಮೊದಲ ಪತಿಯ ನಿಧನದ ನಂತರ, ಮಗುವಿನ ನೈಸರ್ಗಿಕ ಪೋಷಕಿಯಾಗಿರುವ ತಾಯಿಗೆ ತನ್ನ ಮಗುವಿನ ಉಪನಾಮ ಅಥವಾ ದತ್ತು ಪ್ರಕ್ರಿಯೆಗೆ ಸೂಕ್ತವಾದದ್ದನ್ನು ನಿರ್ಧರಿಸುವ ಹಕ್ಕು ಇದೆ ಎಂದು ನ್ಯಾ. ದಿನೇಶ್ ಮಾಹೇಶ್ವರಿ ಮತ್ತು ನ್ಯಾ. ಕೃಷ್ಣ ಮುರಾರಿ ಅವರ ಪೀಠ ಹೇಳಿದೆ.
ಟೂ ಫಿಂಗರ್ ಟೆಸ್ಟ್: ಅತ್ಯಾಚಾರ ಅಥವಾ ಲೈಂಗಿಕ ಅಪರಾಧ ಸಂತ್ರಸ್ತೆಯನ್ನು ಕನ್ಯತ್ವ ಪರೀಕ್ಷೆಗೆ ಅಥವಾ ʻಟೂ ಫಿಂಗರ್ ಟೆಸ್ಟ್ʼಗೆ ಒಳಪಡಿಸುವುದು ಶಿಕ್ಷಾರ್ಹ ಅಪರಾಧ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಈ ಪರೀಕ್ಷೆ ನಡೆಸುವುದರಿಂದ ಅತ್ಯಾಚಾರ ಆಗಿದೆ ಅಥವಾ ಇಲ್ಲ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗುವುದಿಲ್ಲ. ಬದಲಿಗೆ ಸಂತ್ರಸ್ತೆಯನ್ನು ಮತ್ತೊಮ್ಮೆ ದೌರ್ಜನ್ಯ ಮತ್ತು ಆಘಾತಕ್ಕೆ ಗುರಿ ಮಾಡುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಸಂತ್ರಸ್ತೆಯ ಪರೀಕ್ಷೆಗೆ ಟೂ ಫಿಂಗರ್ ಟೆಸ್ಟ್ ಬಳಸುವಂತಿಲ್ಲ ಎಂಬ ಬಗ್ಗೆ ವೈದ್ಯಕೀಯ ಕಾಲೇಜುಗಳಿಗೂ ಪಠ್ಯಕ್ರಮಗಳಲ್ಲಿ ಬದಲಾವಣೆಗೆ ಸೂಚಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಸುಪ್ರೀಂ ಕೋರ್ಟ್ ಅಕ್ಟೋಬರ್ ೩೧ರಂದು ನಿರ್ದೇಶನ ನೀಡಿತ್ತು.
ಸಾಲದ ಹೆಸರಲ್ಲಿ ಹಣ ಪಡೆದರೂ ಅದು ವರದಕ್ಷಿಣೆ: ಮನೆ ನಿರ್ಮಾಣಕ್ಕಾಗಿ ತನ್ನ ಅತ್ತೆ-ಮಾವನಿಗೆ ಹಣ ʻಸಾಲʼವಾಗಿ ಕೊಡಬೇಕೆಂದು ತನ್ನ ತಂದೆ-ತಾಯಿಯಲ್ಲಿ ಮಗಳು ಕೇಳುವುದನ್ನು ವರದಕ್ಷಿಣೆ ಎಂದೇ ಪರಿಗಣಿಸಬೇಕು ಎಂದು ಪರಮೋಚ್ಚ ನ್ಯಾಯಾಲಯ ಹೇಳಿದೆ. ವರದಕ್ಷಿಣೆ ಸಾವಿನ ಪ್ರಕರಣವೊಂದರಲ್ಲಿ ಈ ತೀರ್ಪು ನೀಡಲಾಗಿದೆ. ವರದಕ್ಷಿಣೆ ಎನ್ನುವುದಕ್ಕೆ ಹೆಚ್ಚಿನ ವ್ಯಾಖ್ಯೆಯ ಅಗತ್ಯವಿದೆ. ಆಸ್ತಿ, ಹಣ ಅಥವಾ ಇನ್ನಾವುದೇ ರೀತಿಯ ಬೆಲೆಬಾಳುವ ವಸ್ತುಗಳ ಬೇಡಿಕೆಗಳೂ ವರದಕ್ಷಿಣೆಯ ವ್ಯಾಪ್ತಿಗೆ ಬರಲಿವೆ. ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿರುವ ಈ ಪಿಡುಗನ್ನು ತೆಗೆಯಲು ಇಂಥ ಕ್ರಮಗಳು ಅಗತ್ಯವಾಗಿ ಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.