ನವದೆಹಲಿ: ಯಾವುದೇ ಮತ್ತು ಎಲ್ಲಾ ರೀತಿಯ ದ್ವೇಷ ಭಾಷಣಗಳ (hate speeches) ವಿರುದ್ಧ ಸರ್ಕಾರಗಳು ಕ್ರಮ ಕೈಗೊಳ್ಳಬೇಕು (Action Must) ಎಂದು ಸುಪ್ರೀಂ ಕೋರ್ಟ್ (Supreme Court) ಬುಧವಾರ ಸ್ಪಷ್ಟವಾಗಿ ಹೇಳಿದೆ. ದ್ವೇಷದ ಭಾಷಣಗಳನ್ನು ನಿಗ್ರಹಿಸಲು ಕಾರ್ಯವಿಧಾನವನ್ನು ಜಾರಿಗೆ ತರಲು ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಫೆಬ್ರುವರಿಯಲ್ಲಿ ವಿಚಾರಣೆ ಮಾಡಲು ಒಪ್ಪಿಗೆ ಸೂಚಿಸಿ, ಈ ಖಡಕ್ ಸೂಚನೆ ನೀಡಿದೆ.
ದ್ವೇಷದ ಭಾಷಣಗಳ ಹಲವಾರು ನಿದರ್ಶನಗಳನ್ನು ಉಲ್ಲೇಖಿಸಿ ಹಲವರು ಮತ್ತು ಗುಂಪುಗಳು ಸಲ್ಲಿಸಿದ ಅರ್ಜಿಗಳ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠವು, “ದ್ವೇಷ ಭಾಷಣಗಳ ಸಮಸ್ಯೆಯ ಬಗ್ಗೆ ನಾವು ಸಮಗ್ರ ಭಾರತದ ಮೇಲ್ವಿಚಾರಣೆಯನ್ನು ಹೊಂದಲು ಸಾಧ್ಯವಿಲ್ಲ. ಭಾರತದಂತಹ ದೊಡ್ಡ ದೇಶದಲ್ಲಿ ಸಮಸ್ಯೆಗಳಿರುತ್ತವೆ. ಆದರೆ ಅದನ್ನು ಎದುರಿಸಲು ನಮಗೆ ಆಡಳಿತಾತ್ಮಕ ಕಾರ್ಯವಿಧಾನವಿದೆಯೇ ಎಂಬುದು ಕೇಳಬೇಕಾದ ಪ್ರಶ್ನೆಯಾಗಿದೆ” ಎಂದು ಹೇಳಿತು.
ಮುಂದಿನ ವರ್ಷದ ಫೆಬ್ರವರಿಯಲ್ಲಿ ಪ್ರಕರಣವನ್ನು ವಿಚಾರಣೆಗೆ ಮುಂದೂಡಿದ ನ್ಯಾಯಮೂರ್ತಿ ಎಸ್ವಿಎನ್ ಭಟ್ಟಿ ಅವರನ್ನೊಳಗೊಂಡ ಪೀಠವು, ಕಾನೂನು ಉಲ್ಲಂಘಿಸಿದರೆ ಮುಂದಿನ ಕ್ರಮವು ಏನಾಗಿರುತ್ತದೆ ಎಂಬ ಮಾಹಿತಿ ಸಮಾಜಕ್ಕೆ ಗೊತ್ತಿರಬೇಕು. ನಾವು ಸಮಗ್ರ ಭಾರತದ ಆಧಾರದ ಮೇಲೆ ಈ ಪ್ರಕ್ರಿಯೆಗಳನ್ನು ಹೊಂದಲು ಸಾಧ್ಯವಿಲ್ಲ ಅಥವಾ ಪ್ರತಿ ದಿನ ನಿರ್ವಹಿಸಲು ಸಾಧ್ಯವಿಲ್ಲ. ಯಾಕೆಂದರೆ, ಈ ಕುರಿತಾದ ಅರ್ಜಿಗಳು ದಾಖಲಾಗುತ್ತಲೇ ಇರುತ್ತವೆ. ಹಾಗಾಗಿ, ಇದಕ್ಕೊಂದು ಕಾರ್ಯವಿಧಾನವು ಅಗತ್ಯವಿದೆ ಎಂದು ಹೇಳಿತು.
2018ರ ತೆಹ್ಸೀನ್ ಪೂನಾವಾಲಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿಸ್ತೃತ ನಿರ್ದೇಶನಗಳನ್ನು ಈ ಸಂಬಂಧ ನೀಡಿತ್ತು. ದ್ವೇಷದ ಅಪರಾಧಗಳನ್ನು ತಡೆಗಟ್ಟಲು ಮತ್ತು ಅಪರಾಧಗಳನ್ನು ದಾಖಲಿಸಲು ಸಹ ಜವಾಬ್ದಾರಿಯುತ ನೋಡಲ್ ಅಧಿಕಾರಿಯನ್ನು ನೇಮಿಸುವಂತೆ ನಿರ್ದೇಶ ನೀಡಿತ್ತು.
ಗೋ ರಕ್ಷಕ ಗುಂಪುಗಳಿಂದ ಗುಂಪು ಹತ್ಯೆ ಮತ್ತು ದ್ವೇಷದ ಅಪರಾಧಗಳ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ತೀರ್ಪು ಹೊರ ಬಂದಿತ್ತು. ಗುಂಪು ಹತ್ಯೆ ಮತ್ತು ದ್ವೇಷದ ಅಪರಾಧಗಳ ವಿರುದ್ಧ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಲು ದೇಶದ ಪ್ರತಿ ಜಿಲ್ಲೆಯಲ್ಲೂ ಪೊಲೀಸ್ ಸೂಪರಿಂಟೆಂಡೆಂಟ್ (ಎಸ್ಪಿ) ಶ್ರೇಣಿಗಿಂತ ಕಡಿಮೆಯಿಲ್ಲದ ನೋಡಲ್ ಅಧಿಕಾರಿಯನ್ನು ಹೊಂದಿರಬೇಕೆಂದು ನ್ಯಾಯಾಲಯ ಆಗ ಆದೇಶಿಸಿತ್ತು.
ಈ ನಿರ್ದೇಶನಗಳು ಜಾರಿಯಾಗದ ಕಾರಣ ಅಂದಿನಿಂದ ಅನೇಕ ನ್ಯಾಯಾಂಗ ನಿಂದನಾ ಅರ್ಜಿಗಳು ದಾಖಲಾಗಿವೆ. ಅರ್ಜಿಗಳು ಈಗ ನಡೆಯುತ್ತಿರುವ ವಿಚಾರಣೆಯ ಭಾಗವೇ ಆಗಿವೆ. ಹೀಗೆ ದಾಖಲಾದ ಅರ್ಜಿಗಳಲ್ಲಿ 2018ರ ನಿರ್ದೇಶಗಳನ್ನು ಪಾಲಿಸಲು ವಿಫಲವಾದ ರಾಜ್ಯಗಳ ವಿರುದ್ಧ, ನ್ಯಾಯಾಂಗ ನಿಂದನೆಯ ಅಡಿ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.
ಕಳೆದ ಏಪ್ರಿಲ್ನಲ್ಲಿ ಸುಪ್ರೀಂ ಕೋರ್ಟ್, ದೇಶದ ಜಾತ್ಯತೀತ ಸ್ವರೂಪವನ್ನು ಕಾಪಾಡುವ ಅಗತ್ಯವಾಗಿದೆ ಎಂದು ಒತ್ತಿ ಹೇಳುತ್ತಾ, ಯಾವುದೇ ಧರ್ಮದ ಜನರು ಮಾಡಿದ ದ್ವೇಷ ಭಾಷಣಗಳ ವಿರುದ್ಧ ಸ್ವಯಂಪ್ರೇರಿತವಾಗಿ (ಸ್ವಯಂ) ಮೊಕದ್ದಮೆಗಳನ್ನು ದಾಖಲಿಸುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿತ್ತು ಮತ್ತು ಎಚ್ಚರಿಕೆ ಕೂಡ ನೀಡಿತ್ತು.
ಈ ಸುದ್ದಿಯನ್ನೂ ಓದಿ: Karnataka Politics: ದ್ವೇಷ ಭಾಷಣ; ಬಿಜೆಪಿ ಶಾಸಕರಾದ ಅಶ್ವತ್ಥನಾರಾಯಣ, ಹರೀಶ್ ಪೂಂಜಾ ವಿರುದ್ಧ ಎಫ್ಐಆರ್