ನವದೆಹಲಿ: ಅತ್ಯಾಚಾರ ಸಂತ್ರಸ್ತ ಬಾಲಕಿಯ ಗರ್ಭಪಾತ(abortion)ಕ್ಕೆ ನೀಡಲಾಗಿದ್ದ ಆದೇಶವನ್ನು ಸುಪ್ರೀಂಕೋರ್ಟ್(Supreme Court) ಹಿಂಪಡೆದಿದ್ದು, ಬಾಲಕಿಯ ಪೋಷಕರೂ ಕೂಡ ಕೋರ್ಟ್ ತೀರ್ಪಿಗೆ ತಲೆಬಾಗಿದ್ದಾರೆ. ತಮ್ಮ ಮಗಳಿಗೆ ಸುಸೂತ್ರವಾಗಿ ಹೆರಿಗೆಯಾಗುವವರೆಗೆ ಕಾಯುತ್ತೇವೆ ಎಂದು ಹೇಳಿದ್ದಾರೆ. ಗರ್ಭದಲ್ಲಿರುವ ಮಗುವಿನ ಹಿತದೃಷ್ಟಿಯಿಂದ ಈ ತೀರ್ಪು ನೀಡುವುದಾಗಿ ಕೋರ್ಟ್ ಹೇಳಿದೆ. ಅತ್ಯಾಚಾರಕ್ಕೆ ಒಳಗಾಗಿ ಸಂತ್ರಸ್ತ ಬಾಲಕಿ(Victim) 30 ವಾರಗಳ ಗರ್ಭಿಣಿ(30 weeks Pregnant) ಯಾಗಿದ್ದು, ಗರ್ಭಪಾತಕ್ಕೆ ಕೋರಿ ಬಾಲಕಿಯ ತಾಯಿ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ್ದ ಸುಪ್ರೀಂ ಕೋರ್ಟ್ ಮೊದಲಿಗೆ ಗರ್ಭಪಾತಕ್ಕೆ ಅನಮತಿ ನೀಡಿತ್ತು.
ಏನಿದು ಪ್ರಕರಣ?
ಮಹಾರಾಷ್ಟ್ರ ಮೂಲದ ಈ ಬಾಲಕಿ ನಿಗೂಢವಾಗಿ ಕಾಣೆಯಾಗಿದ್ದಳು. ಈ ಬಗ್ಗೆ ಆಕೆ ತಾಯಿ ನೀಡಿದ ದೂರಿನ ಮೇರೆಗೆ ತನಿಖೆ ಆರಂಭಿಸಿದ್ದ ಪೊಲೀಸರಿಗೆ ಬಾಲಕಿ ರಾಜಸ್ಥಾನದಲ್ಲಿ ಗರ್ಭಿಣಿಯಾಗಿ ಪತ್ತೆಯಾಗಿದ್ದಳು. ನಂತರ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಆದರೆ ಮಹಿಳೆಯ ಗರ್ಭಾವಸ್ಥೆ 24 ವಾರಗಳು ದಾಟಿದ್ದರಿಂದ ಆಕೆಯ ಗರ್ಭಪಾತಕ್ಕೆ ಅವಕಾಶ ನೀಡಲು ಏ.4ರಂದು ಬಾಂಬೆ ಹೈಕೋರ್ಟ್ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಮಹಿಳೆಯ ತಾಯಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಸುಪ್ರೀಂ ಕೋರ್ಟ್ ಏನು ತೀರ್ಪು ಏನು?
ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿದ್ದ ಕೋರ್ಟ್, ವೈದ್ಯಕೀಯ ವರದಿಯ ಪ್ರಕಾರ ಯುವತಿಯ ಇಚ್ಛೆಗೆ ವಿರುದ್ಧ ಗರ್ಭಧಾರಣೆ ಮುಂದುವರೆಸುವುದು ಅಪಾಯಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ವಿಧಿ 142ರ ವಿಶೇಷ ಅಧಿಕಾರವನ್ನು ಬಳಸಿ ಆಕೆಯ ಗರ್ಭಪಾತಕ್ಕೆ ಮುಂಬೈನ ಸಿಯಾನ್‌ನಲ್ಲಿರುವ ಲೋಕಮಾನ್ಯ ತಿಲಕ್ ವೈದ್ಯಕೀಯ ಅಸ್ಪತ್ರೆಗೆ ನಿರ್ದೇಶಿಸಿತ್ತು. ಇದೀಗ ಮತ್ತೆ ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಇದ್ದ ನ್ಯಾಯಪೀಠ, ಗರ್ಭದಲ್ಲಿರುವ ಮಗುವಿನ ಹಿತಾಸಕ್ತಿಯನ್ನು ನೋಡಿಕೊಂಡು ಗರ್ಭಪಾತಕ್ಕೆ ನೀಡಲಾಗಿದ್ದ ಅನುಮತಿಯನ್ನು ವಾಪಾಸ್ ಪಡೆಯುತ್ತಿರುವುದಾಗಿ ತೀರ್ಪಿನಲ್ಲಿ ತಿಳಿಸಿದೆ. ಈ ವಿಷಯದಲ್ಲಿ ಪೀಠಕ್ಕೆ ಸಹಾಯ ಮಾಡಲು ಎಎಸ್‌ಜಿ ಐಶ್ವರ್ಯಾ ಭಾಟಿ ಕೂಡ ಹಾಜರಿದ್ದರು. ಇನ್ನು ಈ ಬಗ್ಗೆ ಬಾಲಕಿಯ ತಾಯಿಯ ಜೊತೆ ವೈದ್ಯರು ಮಾತನಾಡಿದ್ದಾರೆ. ಒಟ್ಟಿನಲ್ಲಿ ಈ ವಿಚಾರದಲ್ಲಿ ವೈದ್ಯರ ತೀರ್ಮಾನ ಅಂತಿಮ. ಅವರ ಪ್ರಕಾರ ಯಾವುದು ಹೆಚ್ಚು ಸೂಕ್ತವೋ ಅದನೇ ಮಾಡುವುದು ಉತ್ತಮ. ಈ ಬಗ್ಗೆ ಮುಂದಿನ ತೀರ್ಮಾನ ವೈದ್ಯರಿಗೆ ಬಿಟ್ಟ ವಿಚಾರ ಎಂದಿದ್ದಾರೆ.
ಇದನ್ನೂ ಓದಿ:Vinay Gowda: ಮೂರು ಸಿನಿಮಾಗಳಿಗೆ ಸಹಿ ಮಾಡಿದ ʻಬಿಗ್ ಬಾಸ್ʼ ಖ್ಯಾತಿಯ ವಿನಯ್ ಗೌಡ!
ವೈದ್ಯರು ಹೇಳುವುದೇನು?
ಅತ್ಯಾಚಾರ ಸಂತ್ರಸ್ತ ಅಪ್ರಾಪ್ತ ಬಾಲಕಿ ಗರ್ಭಪಾತ ಮಾಡಿಸಿಕೊಳ್ಳುವಷ್ಟು ಮಾನಸಿಕ ಮತ್ತು ದೈಹಿಕ ಸಮರ್ಥಳಿಲ್ಲ. ಆಕೆಗೆ ಪ್ರಸ್ತುತ ಸನ್ನಿವೇಶದಲ್ಲಿ ಗರ್ಭಪಾತ ಮಾಡುವುದು ಹೆಚ್ಚು ಅಪಾಯಕಾರಿಯಾಗಿದೆ. ಅಲ್ಲದೇ ಆಕೆ ಮಾನಸಿಕವಾಗಿ ಯಾವುದೇ ಸಮಸ್ಯೆ ಹೊಂದಿಲ್ಲದೇ ಇರುವ ಕಾರಣ ಮಗುವಿನ ಜನ್ಮ ಕೊಡಬಹುದು ಎಂದು ವೈದ್ಯರು ಕೋರ್ಟ್‌ಗೆ ತಿಳಿಸಿದ್ದಾರೆ.