ನವದೆಹಲಿ: ಮಾನಹಾನಿ ಪ್ರಕರಣದಲ್ಲಿ ಶಿಕ್ಷೆಗೀಡಾಗಿದ್ದ ರಾಹುಲ್ ಗಾಂಧಿ (Rahul Gandhi) ಅವರಿಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ನೀಡಿದೆ. ಮೋದಿ ಉಪನಾಮ ಹೇಳಿಕೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ವಿಧಿಸಿದ ಎರಡು ವರ್ಷ ಜೈಲು ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಹೊರಡಿಸಿದೆ. ಇದರಿಂದಾಗಿ ಲೋಕಸಭೆ ಸದಸ್ಯತ್ವದಿಂದಲೇ ಅನರ್ಹಗೊಂಡಿದ್ದ ರಾಹುಲ್ ಗಾಂಧಿ ನಿರಾಳರಾಗಿದ್ದಾರೆ. ಹಾಗೆಯೇ, ಸಂಸತ್ ಸದಸ್ಯತ್ವ ಸ್ಥಾನವೀಗ ಮರಳಿದೆ.
ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರನ್ನು ದೋಷಿ ಎಂಬುದಾಗಿ ಘೋಷಿಸಿದ ಸೂರತ್ ನ್ಯಾಯಾಲಯದ ತೀರ್ಪು ಎತ್ತಿ ಹಿಡಿದಿದ್ದ ಗುಜರಾತ್ ಹೈಕೋರ್ಟ್ ತೀರ್ಪು ಪ್ರಶ್ನಿಸಿ ರಾಹುಲ್ ಗಾಂಧಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಶಿಕ್ಷೆಗೆ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಹೊರಡಿಸಿದೆ. “ರಾಹುಲ್ ಗಾಂಧಿ ಅವರಿಗೆ ಗರಿಷ್ಠ ಶಿಕ್ಷೆ ವಿಧಿಸಲು ಅಧೀನ ನ್ಯಾಯಾಲಯವು ಸರಿಯಾದ ಕಾರಣ ನೀಡಿಲ್ಲ. ಹಾಗಾಗಿ, ಶಿಕ್ಷೆಗೆ ತಡೆಯಾಜ್ಞೆ ನೀಡಲಾಗುತ್ತಿದೆ” ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತು.
ಎಐಸಿಸಿ ಕಚೇರಿ ಎದುರು ಸಂಭ್ರಮ
ಏನಿದು ಪ್ರಕರಣ?
ಕರ್ನಾಟಕದ ಕೋಲಾರದಲ್ಲಿ 2019ರಲ್ಲಿ ಚುನಾವಣೆ ರ‍್ಯಾಲಿ ನಡೆಸಿದ್ದ ರಾಹುಲ್ ಗಾಂಧಿ, ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ, “ಮೋದಿ ಉಪನಾಮ ಹೊಂದಿರುವ ಎಲ್ಲರೂ ಏಕೆ ಕಳ್ಳರಾಗಿದ್ದಾರೆ” ಎಂದು ಹೇಳಿದ್ದರು. ರಾಹುಲ್ ಗಾಂಧಿ ಅವರು ಮೋದಿ ಉಪನಾಮ ಹೊಂದಿರುವ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ಗುಜರಾತ್ ಬಿಜೆಪಿ ನಾಯಕ ಪೂರ್ಣೇಶ್ ಮೋದಿ ಅವರು ಮಾನಹಾನಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಸುದೀರ್ಘ ವಿಚಾರಣೆ ಬಳಿಕ ಸೂರತ್ ನ್ಯಾಯಾಲಯವು, ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ಘೋಷಿಸಿ, ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಇದನ್ನೂ ಓದಿ: Rahul Gandhi: ‘ಮೋದಿ ಉಪನಾಮ’ ಒಂದೇ ಅಲ್ಲ, ಗೌರಿ ಲಂಕೇಶ್ ಕೇಸ್ ಸೇರಿ ರಾಹುಲ್ ವಿರುದ್ಧ ದಾಖಲಾದ ಪ್ರಕರಣ ಯಾವವು?
ಸೂರತ್ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿದ ಕಾರಣ ರಾಹುಲ್ ಗಾಂಧಿ ಅವರು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಂಡಿದ್ದರು. ಇದಾದ ಬಳಿಕ, ಸೂರತ್ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಗುಜರಾತ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಸೂರತ್ ನ್ಯಾಯಾಲಯದ ತೀರ್ಪನ್ನು ಕಳೆದ ತಿಂಗಳು ಗುಜರಾತ್ ನ್ಯಾಯಾಲಯವು ಎತ್ತಿಹಿಡಿದಿತ್ತು. ಹಾಗಾಗಿ, ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಈಗ ಸುಪ್ರೀಂ ಕೋರ್ಟ್ ಶಿಕ್ಷೆಗೆ ತಡೆಯಾಜ್ಞೆ ನೀಡಿದೆ. ಇಲ್ಲದಿದ್ದರೆ, ಅನರ್ಹಗೊಂಡಿರುವ ರಾಹುಲ್ ಗಾಂಧಿ ಅವರು 6 ವರ್ಷ ಚುನಾವಣೆಗೆ ಸ್ಪರ್ಧಿಸುವ ಹಾಗಿರಲಿಲ್ಲ.