Site icon Vistara News

Mathura Temple: ಮಥುರಾ ದೇವಸ್ಥಾನ ಸುತ್ತಲಿನ ಅಕ್ರಮ ಕಟ್ಟಡಗಳ ನೆಲಸಮಕ್ಕೆ ಸುಪ್ರೀಂ ಕೋರ್ಟ್‌ ತಡೆ

Sri Krishna Janmabhoomi case

ಹೊಸದಿಲ್ಲಿ: ಮಥುರಾ ಶ್ರೀಕೃಷ್ಣ ದೇವಸ್ಥಾನದ (Mathur Temple) ಸುತ್ತ ಮುತ್ತ ತಲೆಯೆತ್ತಿರುವ ಅಕ್ರಮ ಮನೆಗಳು, ಕಟ್ಟಡಗಳನ್ನು (Illegal buildings) ನಾಶ ಮಾಡಲು ಮುಂದಾಗಿರುವ ಭಾರತೀಯ ರೈಲ್ವೇ ಇಲಾಖೆಯ (Indian Railway) ಕ್ರಮಕ್ಕೆ ಸುಪ್ರೀಂ ಕೋರ್ಟ್‌ (supreme court) ತಡೆಯಾಜ್ಞೆ ನೀಡಿದೆ. 10 ದಿನಗಳ ಕಾಲ ತೆರವು ಕಾರ್ಯ ಸ್ಥಗಿತಗೊಳಿಸಿ ಯಥಾಸ್ಥಿತಿ ಕಾಪಾಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಮಥುರಾ ಕೃಷ್ಣಜನ್ಮ ಭೂಮಿ (Mathura krishna janmabhumi) ಹಾಗೂ ಪಕ್ಕದಲ್ಲಿರುವ ಈದ್ಗಾ ಮಸೀದಿ ನಡುವಿನ ವಿವಾದ ಶತಮಾನಗಳಷ್ಟು ಹಳೆಯದಾಗಿದ್ದು, ಕಾಶಿ ವಿವಾದದಂತೆಯೇ ಇತ್ತೀಚೆಗೆ ಮತ್ತೆ ನ್ಯಾಯಾಂಗ ಹೋರಾಟದತ್ತ ಸಾಗಿದೆ. ಇದರ ನಡುವೆ ದೇವಸ್ಥಾನ ಸಮೀಪದಲ್ಲಿಯೇ ತನ್ನ ಅಧೀನದಲ್ಲಿರುವ ಪ್ರದೇಶಗಳನ್ನು ಅಕ್ರಮವಾಗಿ ಬಳಸಿಕೊಂಡವರಿಗೆ ನೋಟಿಸ್ ನೀಡಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯವನ್ನು ರೈಲ್ವೇ ಇಲಾಖೆ ಆರಂಭಿಸಿತ್ತು. ಸುಪ್ರೀಂ ಕೋರ್ಟ್ ಆದೇಶದಿಂದ ರೈಲ್ವೇ ಇಲಾಖೆ ತೆರವು ಕಾರ್ಯ ಸ್ಥಗಿತಗೊಳಿಸಿದೆ.

ಈ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯ ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ನಡೆಯುತ್ತಿತ್ತು. ರೈಲ್ವೆ ಇಲಾಖೆಯ ಈ ನಡೆ ವಿರುದ್ಧ ಸ್ಥಳೀಯ ಮುಸ್ಲಿಂ ನಿವಾಸಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಯಾಕೂಬ್ ಶಾ ಎಂಬವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಜಸ್ಟೀಸ್ ಅನಿರುದ್ಧ್ ಬೋಸ್, ಸಂಜಯ್ ಕುಮಾರ್ ಹಾಗೂ ಎಸ್‌ವಿಎನ್ ಭಟ್ಟಿ ತ್ರಿಸದಸ್ಯ ಪೀಠ ಈ ಅರ್ಜಿ ವಿಚಾರಣೆ ನಡೆಸಿ, ಧ್ವಂಸ ಕಾರ್ಯಕ್ಕೆ ತಡೆ ನೀಡಿದೆ. ಇದೇ ವೇಳೆ ಭಾರತೀಯ ರೈಲ್ವೇ ಇಲಾಖೆಗೆ ನೋಟಿಸ್ ನೀಡಿದೆ. 10 ದಿನಗಳ ಕಾಲ ಯಥಾ ಸ್ಥಿತಿ ಕಾಪಾಡಬೇಕು. ಮುಂದಿನ ವಾರ ಪ್ರಕರಣ ವಿಚಾರಣೆ ನಡೆಸುವುದಾಗಿ ಹೇಳಿದೆ.

ಈಗಾಗಲೇ 100 ಮನೆಗಳನ್ನು ಇಲಾಖೆ ಧ್ವಂಸಗೊಳಿಸಿದೆ. ಇನ್ನೂ 70ರಿಂದ 80 ಮನೆ ಧ್ವಂಸಗೊಳಿಸುವುದಾಗಿ ನೋಟಿಸ್ ನೀಡಿದ್ದಾರೆ. ಕಳೆದ 100 ವರ್ಷಗಳಿಂದ ಇದೇ ಸ್ಥಳದಲ್ಲಿ ನಾವು ವಾಸವಿದ್ದೇವೆ. ಇದೀಗ ರೈಲ್ವೇ ಇಲಾಖೆ ನೋಟಿಸ್ ನೀಡಿ ತಮ್ಮ ಜಾಗವೆಂದು ಹೇಳುತ್ತಿದೆ. ಮಸೀದಿಯಲ್ಲಿ ಕೆಲಸ ಮಾಡುತ್ತಾ ನಾವು ಇಲ್ಲಿ ಜೀವನ ಸಾಗಿಸುತ್ತಿದ್ದೇವೆ ಎಂದು ವಕೀಲರು ತಮ್ಮ ಕಕ್ಷಿಗಾರರ ಪರ ವಾದ ಮಂಡಿಸಿದ್ದಾರೆ.

ಮಥುರಾದಲ್ಲಿ ದೇಗುಲದ ವೇದಿಕೆಯ ಮೇಲೆ ಮಸೀದಿ ನಿರ್ಮಿಸಲಾಗಿದೆಯೋ ಇಲ್ಲವೋ ಎಂಬುದನ್ನು ತಿಳಿಯಲು ವಾರಾಣಸಿ ಗ್ಯಾನವಾಪಿ ಮಸೀದಿ ಸಮೀಕ್ಷೆಯ ರೀತಿ ಮಥುರಾದ ಶಾಹಿ ಈದ್ಗಾ ಮಸೀದಿಯಲ್ಲೂ ಸಮೀಕ್ಷೆ ನಡೆಸಬೇಕು ಎಂದು ಕೋರಿ ಕೃಷ್ಣ ಜನ್ಮಭೂಮಿ ಟ್ರಸ್ಟ್‌ ಸುಪ್ರೀಂ ಕೋರ್ಚ್‌ ಮೊರೆ ಹೋಗಿತ್ತು. ಸದ್ಯ ಈ ಪ್ರಕರಣ ವಿಚಾರಣೆಯಲ್ಲಿದೆ.

ಇದನ್ನೂ ಓದಿ: Viral News: ಮಥುರಾ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡುತ್ತ ಕುಳಿತಿದ್ದವನ ಕೊಲೆ

Exit mobile version