Site icon Vistara News

EWS Quota | ಶೇ.10 ಇಡಬ್ಲ್ಯೂಎಸ್ ಮೀಸಲು ಎತ್ತಿ ಹಿಡಿದ ಸುಪ್ರೀಂ ಕೋರ್ಟ್, ಐವರ ಪೈಕಿ ಇಬ್ಬರು ಜಡ್ಜ್ ಭಿನ್ನ ತೀರ್ಪು!

Supreme Court directed the Maharashtra to videograph the Hindu Jan Aakrosh Sabha

ನವದೆಹಲಿ: ಕೇಂದ್ರ ಸರ್ಕಾರದ ಶೇ.10 ಆರ್ಥಿಕವಾಗಿ ಹಿಂದುಳಿದ ವರ್ಗ(ಇಡಬ್ಲ್ಯೂಎಸ್) ಮೀಸಲು ಸಿಂಧುತ್ವಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಎರಡು ಪ್ರತ್ಯೇಕ ತೀರ್ಪುಗಳನ್ನು ಪ್ರಕಟಿಸಿದೆ. ಮೀಸಲು ಸಿಂಧುತ್ವ ಕುರಿತು ತೀರ್ಪು ಪ್ರಕಟಿಸಿದ ಐವರು ಜಡ್ಜ್ ಪೈಕಿ ಮೂವರು ಕೇಂದ್ರ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದರೆ, ಇಬ್ಬರು ಮಾತ್ರ ಸಮ್ಮತಿಯನ್ನು ಸೂಚಿಸಿಲ್ಲ. ಇದರೊಂದಿಗೆ ಶೇ.10 ಇಡಬ್ಲ್ಯೂಎಸ್ ಮೀಸಲು 3:2 ತೀರ್ಪಿನೊಂದಿಗೆ ಊರ್ಜಿತಗೊಂಡಿದೆ. ಚೀಫ್ ಜಸ್ಟೀಸ್ ಯು ಯು ಲಲಿತ್ ಹಾಗೂ ಜಸ್ಟೀಸ್ ಎಸ್ ರವೀಂದ್ರ ಭಟ್ ಅವರು ಮಾತ್ರ ಭಿನ್ನ ತೀರ್ಪು ನೀಡಿದ್ದಾರೆ(EWS Quota). ಉಳಿದಂತೆ ಜಸ್ಟೀಸ್ ದಿನೇಶ್ ಮಹೇಶ್ವರಿ, ಬೇಲಾ ತ್ರಿವೇದಿ ಹಾಗೂ ಜೆ ಬಿ ಪರ್ದಿವಾಲಾ ಅವರು ಸಂವಿಧಾನಕ್ಕೆ ತರಲಾದ 103ನೇ ತಿದ್ದುಪಡಿಯನ್ನು ಎತ್ತಿ ಹಿಡಿದಿದ್ದಾರೆ. ಆಮೂಲಕ ಸುಪ್ರೀಂ ಕೋರ್ಟ್ 3:2 ತೀರ್ಪಿನ ಮೂಲಕ ಶೇ.10 ಇಡಬ್ಲ್ಯೂಎಸ್ ಮೀಸಲು ಎತ್ತಿ ಹಿಡಿದಿದೆ.

ಶೇ.10 ಆರ್ಥಿಕವಾಗಿ ಹಿಂದಳಿದ ವರ್ಗಗಳ ಮೀಸಲು ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ(ಎಸ್‌ಟಿ) ಮೀಸಲನ್ನು ಕಸಿದುಕೊಳ್ಳುವುದಿಲ್ಲ. ಈ ಮೀಸಲು ಸಂಪೂರ್ಣವಾಗಿ ಹೊಸ ಅರ್ಹತೆಯ ನಿರ್ಧಾರವಾಗಿದೆ ಎಂದು ಜಸ್ಟೀಸ್ ಮಹೇಶ್ವರಿ ಅವರು ಮೀಸಲಾತಿಯನ್ನು ಎತ್ತಿ ಹಿಡಿದಿದ್ದಾರೆ(EWS Quota).

ಏನೇನು ತೀರ್ಪು?
– ಇದು ಸಂವಿಧಾನವನ್ನು ಉಲ್ಲಂಘಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
– ಮೂವರು ನ್ಯಾಯಮೂರ್ತಿಗಳು ಶೇ.10 ಮೀಸಲು ಎತ್ತಿ ಹಿಡಿದಿದ್ದಾರೆ.
– ಸಂವಿಧಾನಕ್ಕೆ ತರಲಾದ 103ನೇ ತಿದ್ದುಪಡಿ ಎತ್ತಿ ಹಿಡಿದ ಸುಪ್ರೀಂ ಕೋರ್ಟ್
– ಬಡವರಲ್ಲೇ ಬಡವರು ಮೀಸಲು ಪಡೆಯಲು ಅರ್ಹರು
– ಪಿಎಂ ಮಾಡೆಲ್ ಸಾಮಾಜಿಕ ನ್ಯಾಯಕ್ಕೆ ದೊಡ್ಡ ಗೆಲುವು
– ಚೀಫ್ ಜಸ್ಟೀಸ್ ಯು ಯು ಲಲಿತ್ ಹಾಗೂ ಜಸ್ಟೀಸ್ ಎಸ್ ರವೀಂದ್ರ ಭಟ್ ಅವರು ಮಾತ್ರ ಭಿನ್ನ ತೀರ್ಪು ಪ್ರಕಟಿಸಿದ್ದಾರೆ.

ಏನಿದು ಕೇಸ್?
ಆರ್ಥಿಕವಾಗಿ ಹಿಂದುಳಿದ ವರ್ಗ(EWS)ಕ್ಕಾಗಿ ಕೇಂದ್ರ ಸರ್ಕಾರವು ಶೇ.10 ಮೀಸಲು ಜಾರಿ ಮಾಡಿತ್ತು. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಅನೇಕ ಅರ್ಜಿಗಳು ಸುಪ್ರೀಂ ಕೋರ್ಟ್‌ಗೆ ದಾಖಲಾಗಿದ್ದವು. ಈ ಎಲ್ಲ ಅರ್ಜಿಗಳನ್ನು ಒಂದುಗೂಡಿಸಿ, ಸತತವಾಗಿ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತ್ತು. ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ಅವರನ್ನು ಒಳಗೊಂಡಂತೆ ಒಟ್ಟು ಐದು ನ್ಯಾಯಮೂರ್ತಿಗಳ ಪೀಠ EWS ಮೀಸಲು ಸಿಂಧತ್ವದ ವಿಚಾರಣೆ ನಡೆಸಿದೆ. ಈ ಪೀಠದಲ್ಲಿ ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ಎಸ್ ರವೀಂದ್ರ ಭಟ್, ಬೇಲಾ ಎಂ ತ್ರಿವೇದಿ ಮತ್ತು ಜೆ ಬಿ ಪರ್ದಿವಾಲಾ ಅವರಿದ್ದರು. ವಿಶೇಷ ಎಂದರೆ, ಮುಖ್ಯ ನ್ಯಾಯಮೂರ್ತಿ ಲಲಿತ್ ಅವರು ನವೆಂಬರ್ 8 ಅಂದರೆ ಮಂಗಳವಾರ ನಿವೃತ್ತರಾಗಲಿದ್ದಾರೆ. ಅವರು ನೀಡಿದ ಪ್ರಮುಖ ಕೊನೆಯ ತೀರ್ಪು ಇದಾಗಲಿದೆ.

ಇದನ್ನು ಓದಿ | Two Finger Test | ಅತ್ಯಾಚಾರ ಕೇಸ್‌ನಲ್ಲಿ ‘ಟು ಫಿಂಗರ್‌ ಟೆಸ್ಟ್‌’ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

Exit mobile version