ನವ ದೆಹಲಿ: ಭಾರತ ಮತ್ತು ಶ್ರೀಲಂಕಾ ನಡುವಿನ ‘ರಾಮಸೇತು’ವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವನ್ನಾಗಿ ಘೋಷಿಸುವಂತೆ ಕೇಂದ್ರಕ್ಕೆ ಸೂಚನೆ ನೀಡಬೇಕೆಂದು ಬಿಜೆಪಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ ಅರ್ಜಿಯ ವಿಚಾರಣೆಗೆ ಒಪ್ಪಿರುವ ಸುಪ್ರೀಂ ಕೋರ್ಟ್ ಜುಲೈ ೨೬ ರಂದು ವಿಚಾರಣೆ ನಡೆಸಲಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ, ನ್ಯಾಯಮೂರ್ತಿ ಕೃಷ್ಣ ಮುರಾರಿ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿ, ವಿಚಾರಣೆಗೆ ಅಂಗೀಕರಿಸಿದೆ. ಈ ಮಹತ್ವದ ವಿಷಯವನ್ನು ತಕ್ಷಣ ವಿಚಾರಣೆಗೆ ಪಟ್ಟಿ ಮಾಡಬೇಕು ಎಂದು ಕೋರಿದ್ದ ಕಾರಣ ಜುಲೈ 26ರಂದೇ ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ.
ಆಡಮ್ಸ್ ಬ್ರಿಡ್ಜ್ ಎಂದೂ ಕರೆಯಲ್ಪಡುವ ರಾಮಸೇತು ಶ್ರೀಲಂಕೆಯ ವಾಯವ್ಯ ಭಾಗದ ಸಮೀಪವಿರುವ ಮನ್ನಾರ್ ದ್ವೀಪಗಳು ಮತ್ತು ಭಾರತದ ದಕ್ಷಿಣ ಕರಾವಳಿಯಲ್ಲಿರುವ ರಾಮೇಶ್ವರಂ ಮಧ್ಯೆ ಇರುವ ಲೈಮ್ ಶೋಲ್‌ಗಳ ಜೋಡಣೆಯಿಂದಾಗಿದೆ. ಈ ಸೇತುವೆಯು ೩೦ ಮೈಲಿ (೪೮ ಕಿ.ಮೀ.) ಉದ್ದವಿದ್ದು, ವಾಯವ್ಯದ ಪಾಲ್ಕ್ ಸ್ಟ್ರೇಟ್ ನಿಂದ ನೈಋತ್ಯದಲ್ಲಿ ಮನ್ನಾರ್ ಕೊಲ್ಲಿಯನ್ನು ಇದು ಪ್ರತ್ಯೇಕಿಸುತ್ತದೆ.
ರಾಮಸೇತು ಇರುವುದನ್ನು ಕೇಂದ್ರ ಸರ್ಕಾರ ಈಗಾಗಲೇ ಒಪ್ಪಿಕೊಂಡಿದೆ. ಆದರೆ ಇದನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವನ್ನಾಗಿ ಘೋಷಿಸುವಂತೆ ಮಾಡಿಕೊಂಡ ಮನವಿಗೆ ಸ್ಪಂದಿಸಲಿಲ್ಲ. ಹೀಗಾಗಿ ನ್ಯಾಯಾಲಯದ ಮೆಟ್ಟಿಲೇರಿರುವುದಾಗಿ ಸುಬ್ರಮಣಿಯನ್ ಸ್ವಾಮಿ ತಿಳಿಸಿದ್ದಾರೆ.
ರಾಮಯಣದಲ್ಲಿ ಹೇಳಿದ ಹಾಗೇ ಇದೆ!
ರಾಮಾಯಣದಲ್ಲಿ ರಾಮಸೇತುವೆಯ ಒಟ್ಟು ಉದ್ದ ೧೦೦ ಯೋಜನಗಳು ಹಾಗೂ ಅಗಲ ೧೦ ಯೋಜನಗಳು ಎಂದು ಹೇಳಲಾಗಿದೆ. ಅದರ ಅನುಪಾತ ೧೦:೧ ಆಗುತ್ತದೆ. ಈಗ, ಭಾರತದ ಧನುಷ್ಕೋಟಿಯಿಂದ ಶ್ರೀಲಂಕೆಯ ತಲೈಮನ್ನಾರ್‌ವರೆಗೆ ಇರುವ ಆಡಮ್ ಸೇತು ಸುಮಾರು ೩೫ ಕಿ.ಮೀ. ಉದ್ದ ಹಾಗೂ ೩.೫ ಕಿ.ಮೀ. ಅಗಲವಾಗಿರುವುದು ಕಾಣುತ್ತದೆ. ಇಲ್ಲಿಯೂ ರಾಮಾಯಣದ ವರ್ಣನೆಯಂತೆಯೇ ೧೦:೧ರ ಅನುಪಾತ ಕಾಣುತ್ತದೆ. ಈ ಅದ್ಭುತವಾದ ಸಾಮ್ಯತೆಯು, ರಾಮಾಯಣದಲ್ಲಿ ವರ್ಣಿಸಿರುವುದು ಈ ಸೇತುವೆಯನ್ನೇ ಎನ್ನುವುದಕ್ಕೆ ಪ್ರಮುಖ ಅಂಶವಾಗಿದೆ.
ಇದನ್ನೂ ಓದಿ| ರಾಮ ಮಂದಿರವೇ ರಾಷ್ಟ್ರ ಮಂದಿರ ಎಂದ ಯೋಗಿ, ಅಯೋಧ್ಯೆಯಲ್ಲಿ ಗರ್ಭಗುಡಿಗೆ ಅಡಿಗಲ್ಲು